ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿ 110 ಕ್ಕೂ ಹೆಚ್ಚು ದಿನಗಳಾಗಿವೆ. ಹೊರಗೆ ಇರುವಾಗ ಸದಾ ಗೆಳೆಯರಿಂದ ಸುತ್ತವರಿದುಕೊಂಡು, ಪಾರ್ಟಿಗಳನ್ನು ಮಾಡಿಕೊಂಡು ಬಿಂದಾಸ್ ಆಗಿರುತ್ತಿದ್ದ ದರ್ಶನ್ ಈಗ ಜೈಲಿನಲ್ಲಿ ಒಂಟಿ ಹಕ್ಕಿ ಆಗಿದ್ದಾರೆ. ಅವರು ಮಾಡಿದ ಕೆಲಸದಿಂದ ಅವರ ಹತ್ತಿರದವರಿಗೂ ನೆಮ್ಮದಿ ಇಲ್ಲದಂತಾಗಿದೆ. ಮಗನ ಆರೈಕೆಯಲ್ಲಿ ನಿರತರಾಗಿದ್ದ ಅವರ ಪತ್ನಿ, ದರ್ಶನ್ ದೆಸೆಯಿಂದ ಬಳ್ಳಾರಿ ಜೈಲಿಗೆ, ಪೊಲೀಸ್ ಠಾಣೆಗೆ, ವಕೀಲರ ಮನೆಗೆ ಅಲೆವಂತಾಗಿದೆ. ನೆಮ್ಮದಿಯಾಗಿ ಮನೆಯಲ್ಲಿರಬೇಕಿದ್ದ ಅವರ ತಾಯಿ ಸಹ ಈ ವಯಸ್ಸಿನಲ್ಲಿ ಬಳ್ಳಾರಿ ಜೈಲಿಗೆ ಆಗಮಿಸಿ ಮಗನನ್ನು ನೋಡುವಂತಾಗಿದೆ.
ಇತ್ತೀಚೆಗಷ್ಟೆ ದರ್ಶನ್ರ ತಾಯಿ ಮೀನಮ್ಮನವರು ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್ ಅನ್ನು ಕಂಡು ಹೋದರು. ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಗಲೂ ಸಹ ಒಮ್ಮೆ ಮೀನಾ ಕುಮಾರಿ ಅವರು ಜೈಲಿಗೆ ಆಗಮಿಸಿದ್ದರು. ಇದೀಗ ಬಳ್ಳಾರಿಗೆ ಬಂದು ದರ್ಶನ್ ಅನ್ನು ನೋಡಿ ಹೋಗಿದ್ದಾರೆ. ತಾಯಿ ಬಂದು ಹೋದಮೇಲೆ ದರ್ಶನ್ ವರ್ತನೆ ಹಾಗೂ ಮಾತುಗಳಲ್ಲಿ ಬದಲಾವಣೆ ಆಗಿದೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಮಾಧ್ಯಮಗಳಿಗೆ ಅಸಹ್ಯಕರವಾಗಿ ಸಂಜ್ಞೆ ಮಾಡಿದ್ದ ದರ್ಶನ್, ಈಗ ಜೈಲು ಸಿಬ್ಬಂದಿಯ ಮುಂದೆ ಕಣ್ಣೀರು ಸಹ ಹಾಕಿದ್ದಾರಂತೆ.
ಇದನ್ನೂ ಓದಿ:ದರ್ಶನ್ ತೂಗುದೀಪ ಬಂಧನವಾಗಿ ಇಂದಿಗೆ 100 ದಿನ; ಜೂನ್ 11ರಿಂದ ಇಲ್ಲಿಯವರೆಗೆ ಏನೆಲ್ಲ ಆಯ್ತು?
ತಾಯಿ ಭೇಟಿಯ ವಿಚಾರವನ್ನು ಸಿಬ್ಬಂದಿ ಮುಂದೆ ಮಾತನಾಡಿದ ದರ್ಶನ್ ಭಾವುಕಗೊಂಡರಂತೆ. ‘ನಾನು ಮಾಡಿದ ತಪ್ಪಿಗೆ ನನ್ನ ತಾಯಿ ಇಲ್ಲಿಗೆ ಬಂದು ನೋಡುವ ಸ್ಥಿತಿ ಅವರಿಗೆ ಬಂತಲ್ಲಾ, ಮಗನನ್ನ ಜೈಲಿನಲ್ಲಿ ನನ್ನ ತಾಯಿ ಭೇಟಿ ಮಾಡುವ ಪರಿಸ್ಥಿತಿ ಬಂತಲ್ಲಾ’ ಎಂದು ಕಣ್ಣೀರು ಹಾಕಿದರಂತೆ. ‘ಕಷ್ಟದ ಪರಿಸ್ಥಿತಿ ಬಂದಿದೆ ನನ್ನ ತಪ್ಪಿನಿಂದ ಕುಟುಂಬ ನೋವು ಅನುಭವಿಸುವಂತಾಗಿದೆ. ನಾನು ನಂಬಿದ ತಾಯಿ ಚಾಮುಂಡೇಶ್ವರಿ ನನ್ನ ಕೈ ಬಿಡಲ್ಲ’ ಎಂದು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ ದರ್ಶನ್, ಕೊನೆಗೆ ಕಾವಲು ಸಿಬ್ಬಂದಿ ದರ್ಶನ್ಗೆ ಸಮಾಧಾನ ಮಾಡಿದ್ದಾಗಿ ಹೇಳಲಾಗಿದೆ.
ಇನ್ನು ಜಾಮೀನು ಅರ್ಜಿ ಸಲ್ಲಿಸಿದ ಬಳಿಕ ನಟ ದರ್ಶನ್ ತುಸು ನಿರಾಳರಾಗಿದ್ದಾರೆ ಎನ್ನಲಾಗುತ್ತಿದೆ. ಭಾನುವಾರದಂದು ಮಧ್ಯಾಹ್ನ ಎರಡು ಚಪಾತಿ, ಪಲ್ಯಾ, ಮಜ್ಜಿಗೆ ಮಾತ್ರ ಸೇವಿಸಿದ ದರ್ಶನ್, ತಾಯಿ-ಪತ್ನಿ ತಂದುಕೊಂಟ್ಟಿದ್ದ ಹಣ್ಣು, ಡ್ರೈ ಫ್ರೂಟ್ಸ್ಗಳನ್ನು ಸೇವಿಸುತ್ತಿದ್ದಾರೆ. ಒಟ್ಟಾರೆಯಾಗಿ ಆರಾಮವಾಗಿದ್ದು ಬ್ಯಾರಕ್ನಲ್ಲಿ ವಾಕಿಂಗ್ ಮಾಡುತ್ತಾ ಆರಾಮವಾಗಿದ್ದಾರಂತೆ. ದರ್ಶನ್ರ ಜಾಮೀನು ಅರ್ಜಿ ನಿನ್ನೆ ನ್ಯಾಯಾಧೀಶರ ಮುಂದೆ ಬಂದಿದ್ದು, ವಿಚಾರಣೆನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ