
ನಟಿ ರಚಿತಾ ರಾಮ್ (Rachita Ram) ಅವರಿಗೆ ಇಂದು (ಅ.3) ಹುಟ್ಟುಹಬ್ಬದ ಸಡಗರ. ಅವರ ಜನ್ಮದಿನಕ್ಕೆ ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರಚಿತಾ ರಾಮ್ ಅವರ ಮನೆ ಇದೆ. ನೆಚ್ಚಿನ ನಟಿಗೆ ಶುಭ ಕೋರಲು ಹಲವಾರು ಅಭಿಮಾನಿಗಳು ರಚಿತಾ ಮನೆ ಮುಂದೆ ಜಮಾಯಿಸಿದ್ದಾರೆ. ಬಗೆಬಗೆಯ ಕೇಕ್, ಹಾರ, ಉಡುಗೊರೆಗಳನ್ನು ತಂದು ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು, ಅನೇಕ ಚಿತ್ರತಂಡಗಳು ಸಹ ‘ಡಿಂಪಲ್ ಕ್ವೀನ್’ ಹುಟ್ಟುಹಬ್ಬಕ್ಕೆ (Rachita Ram Birthday) ಪೋಸ್ಟರ್ಗಳನ್ನು ರಿಲೀಸ್ ಮಾಡುತ್ತಿವೆ.
ಕನ್ನಡ ಚಿತ್ರರಂಗದಲ್ಲಿ ರಚಿತಾ ರಾಮ್ ಅವರು ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಅವರು ಭರ್ಜರಿಯಾಗಿ ಮಿಂಚಿದರು. ಸುದೀಪ್, ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್, ಉಪೇಂದ್ರ ಮುಂತಾದ ಸ್ಟಾರ್ ನಟರ ಜೊತೆ ಅಭಿನಯಿಸಿ ಫೇಮಸ್ ಆದರು. ಈಗಲೂ ರಚಿತಾ ರಾಮ್ ಕೈಯಲ್ಲಿ ಹಲವು ಆಫರ್ಗಳಿವೆ.
ರಚಿತಾ ರಾಮ್ ಅವರು ಸ್ಯಾಂಡಲ್ವುಡ್ಗೆ ಬಂದು 9 ವರ್ಷ ಕಳೆದಿದೆ. ಇಂದಿಗೂ ಅವರ ಚಾರ್ಮ್ ಕಮ್ಮಿ ಆಗಿಲ್ಲ. ಒಂದೇ ಬಗೆಯ ಪಾತ್ರಗಳಿಗೆ ‘ಡಿಂಪಲ್ ಕ್ವೀನ್’ ಗಂಟುಬಿದ್ದಿಲ್ಲ. ಎಲ್ಲ ಬಗೆಯ ಪಾತ್ರಗಳಿಗೂ ಅವರು ತಮ್ಮನ್ನು ತಾವು ತೆರೆದುಕೊಂಡರು. ಇತ್ತೀಚೆಗೆ ತೆರೆಕಂಡ ‘ಮಾನ್ಸೂನ್ ರಾಗ’ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿ ಗಮನ ಸೆಳೆದರು.
ಹೊಸ ಹೀರೋ – ಸ್ಟಾರ್ ಹೀರೋ ಎಂಬ ಯಾವುದೇ ಭೇದವಿಲ್ಲದೇ ಎಲ್ಲರ ಜೊತೆಗೂ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪರಭಾಷೆಗೂ ರಚಿತಾ ಕಾಲಿಟ್ಟಿದ್ದಾರೆ. ಟಾಲಿವುಡ್ನಲ್ಲಿ ಅವರಿಗೆ ಬೇಡಿಕೆ ಇದೆ. ಕಿರುತೆರೆ ಕಾರ್ಯಕ್ರಮಗಳಿಗೆ ಜಡ್ಜ್ ಆಗಿಯೂ ರಚಿತಾ ರಾಮ್ ಕೆಲಸ ಮಾಡಿದ್ದಾರೆ. ‘ಮಜಾಭಾರತ’, ‘ಡ್ರಾಮಾ ಜ್ಯೂನಿಯರ್ಸ್’ ಶೋಗಳಿಗೆ ಜಡ್ಜ್ ಆಗುವ ಮೂಲಕ ಆ ಕಾರ್ಯಕ್ರಮಗಳ ಮೆರುಗು ಹೆಚ್ಚಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Mon, 3 October 22