Rachita Ram: ‘ರಚಿತಾ ಎದೆಯಲ್ಲಿ ಮೋಸ ಇಲ್ಲ, ಅದಕ್ಕೆ ಇಷ್ಟು ವರ್ಷ ಇಂಡಸ್ಟ್ರಿಯಲ್ಲಿ ಇದ್ದಾರೆ’: ದುನಿಯಾ ವಿಜಯ್
Monsoon Raaga: ರಚಿತಾ ರಾಮ್ ಅವರನ್ನು ದುನಿಯಾ ವಿಜಯ್ ಮತ್ತು ಡಾಲಿ ಧನಂಜಯ್ ಅವರು ಬಾಯಿ ತುಂಬ ಹೊಗಳಿದ್ದಾರೆ. ಅವರಿಬ್ಬರ ಮಾತುಗಳನ್ನು ಕೇಳಿದ ಬಳಿಕ ರಚಿತಾ ಎದ್ದು ನಿಂತು ನಮಸ್ಕಾರ ಮಾಡಿದ್ದಾರೆ.
ನಟಿ ರಚಿತಾ ರಾಮ್ (Rachita Ram) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಅನೇಕ ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ಡಾಲಿ ಧನಂಜಯ್ (Daali Dhananjay) ಜೊತೆ ನಟಿಸಿರುವ ‘ಮಾನ್ಸೂನ್ ರಾಗ’ ಸಿನಿಮಾ ಸೆಪ್ಟೆಂಬರ್ 16ರಂದು ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ಗೆ ದುನಿಯಾ ವಿಜಯ್ ಅವರು ಅತಿಥಿಯಾಗಿ ಬಂದಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾಲಿ ಧನಂಜಯ್ ಮತ್ತು ದುನಿಯಾ ವಿಜಯ್ (Duniya Vijay) ಅವರು ಜೊತೆಯಾಗಿ ರಚಿತಾ ರಾಮ್ ಗುಣಗಾನ ಮಾಡಿದ್ದಾರೆ. ‘ರಚಿತಾ ರಾಮ್ ಬಡಬಡ ಅಂತ ಮಾತಾಡುತ್ತಾರೆ. ಅವರ ಎದೆಯಲ್ಲಿ ಮೋಸ ಇಲ್ಲ. ಅದಕ್ಕಾಗಿಯೇ ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ. ಇನ್ನೂ ಸುಮಾರು ವರ್ಷ ಉಳಿದುಕೊಳ್ಳುತ್ತಾರೆ. ಅವರನ್ನು ನಾನು ತುಂಬ ಹತ್ತಿರದಿಂದ ನೋಡಿದ್ದೇನೆ. ಅವರ ಬಗ್ಗೆ ನನಗೆ ತುಂಬ ಗೌರವ ಇದೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ವೇದಿಕೆ ಮೇಲೆ ಡಾಲಿ ಧನಂಜಯ್ ಮತ್ತು ದುನಿಯಾ ವಿಜಯ್ ಅವರು ಹೊಗಳುವಾಗ ಮುಂದಿನ ಸಾಲಿನಲ್ಲಿ ಕುಳಿತಿದ್ದ ರಚಿತಾ ರಾಮ್ ಅವರು ಎದ್ದು ನಿಂತು ನಮಸ್ಕಾರ ಮಾಡಿದರು. ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ರಚಿತಾ ಅವರನ್ನು ನೋಡಲು ಧನಂಜಯ್ ಅವರು ಒಂದಷ್ಟು ಸರ್ಕಸ್ ಮಾಡುತ್ತಿದ್ದರು. ಆ ಬಗ್ಗೆ ಅವರು ಈಗ ಬಾಯಿ ಬಿಟ್ಟಿದ್ದಾರೆ. ‘ರಚಿತಾ ಇಂಡಸ್ಟ್ರಿಗೆ ಬಂದಾಗ ನಾನು ಮತ್ತು ವಿಖ್ಯಾತ್ ಅವರು ಕತ್ರಿಗುಪ್ಪೆಯಲ್ಲಿರುವ ರಚಿತಾ ಮನೆ ಹತ್ತಿರ ಬೀಟ್ ಹಾಕ್ತಾ ಇದ್ವಿ. ಅವರು ಕಾಣ್ತಾರಾ, ಡಿಂಪಲ್ ಕಾಣುತ್ತಾ ಅಂತ ನೋಡಲು ಪ್ರಯತ್ನ ಮಾಡ್ತಿದ್ವಿ’ ಎಂದು ಡಾಲಿ ಹೇಳಿದ್ದಾರೆ.
‘ರಚಿತಾ ರಾಮ್ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಅವರು ಇದ್ದಲ್ಲಿ ಒಂದು ಎನರ್ಜಿ ಇರುತ್ತದೆ. ಅವರು ಭಾವಜೀವಿ. ತಮ್ಮ ಸುತ್ತ ಇರುವ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ತಾರೆ. ಬೇಕಾಗಿರುವ ಜೀವಗಳಿಗೆ ತುಂಬ ಚೆನ್ನಾಗಿ ಸಪೋರ್ಟ್ ಮಾಡುತ್ತಾರೆ. ಅದಕ್ಕಾಗಿಯೇ ಅವರ ಕಣ್ಣುಗಳು ಅಷ್ಟು ಚೆನ್ನಾಗಿ ಪಳಪಳ ಅಂತ ಹೊಳೆಯುತ್ತವೆ’ ಎಂದು ಧನಂಜಯ್ ಅವರು ಬಾಯಿ ತುಂಬ ಹೊಗಳಿದ್ದಾರೆ.
‘ಮಾನ್ಸೂನ್ ರಾಗ’ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಹಾಡುಗಳು ಸೂಪರ್ ಹಿಟ್ ಆಗಿವೆ. ಡಾಲಿ ಧನಂಜಯ್, ರಚಿತಾ ರಾಮ್ ಜೊತೆಗೆ ಯಶಾ ಶಿವಕುಮಾರ್, ಅಚ್ಯುತ್ ಕುಮಾರ್, ಸುಹಾನಿಸಿ ಮಣಿರತ್ನಂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರವೀಂದ್ರನಾಥ್ ನಿರ್ದೇಶನ ಮಾಡಿದ್ದು, ವಿಖ್ಯಾತ್ ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:05 pm, Wed, 14 September 22