ಜನ್ಮದಿನದಂದು ‘ಡಾಲಿ’ ಧನಂಜಯ್ ಹೊಸ ಘೋಷಣೆ; ಹೊಸ ಪ್ರತಿಭೆಗಳಿಗೆ ಸಿಗಲಿದೆ ಅವಕಾಶ
ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ಮಾಣದ ‘ಬಡವ ರಾಸ್ಕಲ್’ ಸಿನಿಮಾ ಯಶಸ್ಸು ಕಂಡಿತು. ಇದರಿಂದ ಧನಂಜಯ್ ಒಳ್ಳೆಯ ಲಾಭ ಕಂಡಿದ್ದಾರೆ.
ನಟ ಧನಂಜಯ್ (Dhananjay) ಅವರಿಗೆ ಇಂದು (ಆಗಸ್ಟ್ 23) ಜನ್ಮದಿನ. ಪುನೀತ್ ರಾಜ್ಕುಮಾರ್ ನಿಧನದ ನೋವು ಇನ್ನೂ ಮಾಸದ ಕಾರಣ ಅವರು ಬರ್ತ್ಡೇ ಆಚರಿಸಿಕೊಂಡಿಲ್ಲ. ಇದು ಅವರ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ. ಆದರೆ, ಧನಂಜಯ್ ಬರ್ತ್ಡೇ (Dhananjay Birthday) ದಿನ ಒಂದು ಒಳ್ಳೆಯ ಘೋಷಣೆ ಮಾಡಿದ್ದಾರೆ. ಅವರ ಈ ಕಾರ್ಯದಿಂದ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ. ಧನಂಜಯ್ ಕೆಲಸಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಮೂಲಕ ಅವರು ನಿರ್ಮಾಪಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ಮಾಣದ ‘ಬಡವ ರಾಸ್ಕಲ್’ ಸಿನಿಮಾ ಯಶಸ್ಸು ಕಂಡಿತು. ಇದರಿಂದ ಧನಂಜಯ್ ಒಳ್ಳೆಯ ಲಾಭ ಕಂಡಿದ್ದಾರೆ. ಒಂದು ಸಿನಿಮಾ ಗೆದ್ದ ನಂತರ ಲಾಭ ಆಯಿತು ಎಂದು ಅವರು ಸುಮ್ಮನೆ ಕೂತಿಲ್ಲ. ಈ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಬಳಕೆ ಮಾಡಲು ಧನಂಜಯ್ ಅವರು ನಿರ್ಧರಿಸಿದ್ದಾರೆ. ಜತೆಗೆ ಹೊಸಬರಿಗೆ ಅವಕಾಶ ನೀಡಲು ನಿರ್ಧರಿಸಿದ್ದಾರೆ. ಬರ್ತ್ಡೇ ಪ್ರಯುಕ್ತ ಈ ಬಗ್ಗೆ ಘೋಷಣೆ ಆಗಿದೆ.
‘ಡಾಲಿ ಪಿಕ್ಚರ್ಸ್ ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯ್ ಅವರ ಹುಟ್ಟುಹುಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ. ಅವರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಒಂದು ಹಿಡಿಯಷ್ಟು ಆಸೆ ಮತ್ತು ಬೆಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟರು. ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲು ಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು. ಅನೇಕ ಅಡಚಣೆಗಳನ್ನು ದಾಟಿ ಸಾಗಿದ ಅವರ ಪಯಣ ಕರುನಾಡಿಗೆ ತಿಳಿಯದ ಕಥೆಯೇನಲ್ಲ. ಅವರ ಅಷ್ಟೂ ಪ್ರಯತ್ನಕ್ಕೆ ಸಾರ್ಥಕತೆ ದೊರೆತಿದ್ದು ‘ಡಾಲಿ’ ಪಾತ್ರಕ್ಕೆ ಸಿಕ್ಕಿದ ಜನಮನ್ನಣೆ ಹಾಗೂ, ‘ನಟರಾಕ್ಷಸ’ ಎಂಬ ಬಿರುದಿನಲ್ಲಿ’ ಎಂದು ಪತ್ರ ಆರಂಭಿಸಲಾಗಿದೆ.
ಇದನ್ನೂ ಓದಿ: Daali Dhananjay: ಬರ್ತ್ಡೇ ಹುಡುಗ ಧನಂಜಯ್ ಕೈಯಲ್ಲಿವೆ ಏಳು ಚಿತ್ರಗಳು; ಎಲ್ಲವೂ ಒಂದಕ್ಕಿಂತ ಒಂದು ಭಿನ್ನ
‘ಹೊಸಬರ ಆರಂಭದ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದು ಸ್ವತಃ ಆ ದಾರಿಯಲ್ಲಿ ನಡೆದುಬಂದಿರುವ ‘ಡಾಲಿ’ ಧನಂಜಯ್ ಅವರ ಆಲೋಚನೆಯೇ ಈ ಘೋಷಣೆಗೆ ಹಿನ್ನೆಲೆ. ಇನ್ನು ಮುಂದೆ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಠ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ. ನಮ್ಮನ್ನು ಇಷ್ಟು ವರ್ಷ ಕೈ ಹಿಡಿದು ನಡೆಸಿದ ಹಾಗೆ ಇನ್ನು ಮುಂದೆ ಕೂಡ ನಮ್ಮ ಈ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೀತಿ ವಿಶ್ವಾಸ ಹಾರೈಕೆ ಇರಲಿ ಎಂದು ಬಯಸುತ್ತೇವೆ’ ಎಂದು ಪತ್ರ ಪೂರ್ಣಗೊಳಿಸಲಾಗಿದೆ.