Drama Juniors: ‘ಡ್ರಾಮಾ ಜ್ಯೂನಿಯರ್ಸ್ 4’ ಫಿನಾಲೆಯಲ್ಲಿ ಗೆದ್ದ ಮಕ್ಕಳಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು?
Drama Juniors Season 4 winners: ‘ಡ್ರಾಮಾ ಜೂನಿಯರ್ಸ್’ ರಿಯಾಲಿಟಿ ಶೋ 4ನೇ ಸೀಸನ್ನಲ್ಲಿ ಗೆದ್ದ ಮಕ್ಕಳಿಗೆ ಟ್ರೋಫಿ ಜತೆ ನಗದು ಬಹುಮಾನ ಸಿಕ್ಕಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಹಣ ಬಳಕೆ ಆಗಲಿದೆ.
ಕಿರುತೆರೆ ಪ್ರೇಕ್ಷಕರ ಮೆಚ್ಚಿನ ‘ಡ್ರಾಮಾ ಜೂನಿಯರ್ಸ್’ (Drama Juniors) ರಿಯಾಲಿಟಿ ಶೋ 4ನೇ ಸೀಸನ್ ಅಂತ್ಯವಾಗಿದೆ. ಮಕ್ಕಳು ಭರ್ಜರಿಯಾಗಿ ಮನರಂಜನೆ ನೀಡುವ ಈ ಕಾರ್ಯಕ್ರಮ ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ಪ್ರಸಾರವಾಗಿದೆ. ಸತತ 23 ವಾರಗಳ ಕಾಲ ಕರುನಾಡನ್ನು ರಂಜಿಸಿದ ಈ ಶೋಗೆ ತನ್ನದೇ ಆದ ಪ್ರೇಕ್ಷಕರ ವರ್ಗವಿದೆ. ‘ಡ್ರಾಮಾ ಜ್ಯೂನಿಯರ್ಸ್ ಸೀಸನ್ 4’ ವಿನ್ನರ್ (Drama Juniors Season 4 winners) ಆಗಿ ಸಮೃದ್ಧಿ ಎಸ್. ಮೊಗವೀರ್ ಹೊರಹೊಮ್ಮಿದ್ದಾಳೆ. ಮೂಲತಃ ಕುಂದಾಪುರದವಳಾದ ಆಕೆಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆಕರ್ಷಕ ಟ್ರೋಫಿ ಜೊತೆಗೆ 5 ಲಕ್ಷ ರೂಪಾಯಿ ನಗದು ಬಹುಮಾನ ಸಮೃದ್ಧಿಗೆ ಸಿಕ್ಕಿದೆ. ಚಾಮರಾಜನಗರದ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ಸಮಬಲ ಸಾಧಿಸಿಕೊಂಡು ಎರಡನೇ ಸ್ಥಾನ ಪಡೆದಿದ್ದಾರೆ.
ಮನಸೆಳೆಯುವ ಅಭಿನಯದ ಮೂಲಕ ಹೈಲೈಟ್ ಆಗಿದ್ದ 15 ಮಕ್ಕಳು ಫೈನಲ್ಗೆ ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಕ್ಕಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದರು. ಉತ್ತಮರಲ್ಲಿ ಅತ್ಯುತ್ತಮರನ್ನು ವಿಜೇತರನ್ನಾಗಿ ಘೋಷಿಸಲಾಗಿದೆ. ಅಲ್ಲದೇ, ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಜೀ ಕನ್ನಡ ವಾಹಿನಿ ಕಡೆಯಿಂದ ಗೌರವಿಸಲಾಯಿತು.
ಎರಡನೇ ಸ್ಥಾನ ಹಂಚಿಕೊಂಡ ಗೌತಮ್ ರಾಜ್ ಮತ್ತು ಉಡುಪಿಯ ಸಾನಿಧ್ಯ ಆಚಾರ್ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಮಂಗಳೂರಿನ ವೇದಿಕ್ ಅವರು ಮೂರನೇ ಸ್ಥಾನ ಪಡೆದು ಜನಮೆಚ್ಚುಗೆ ಗಳಿಸಿದರು. ‘ಡ್ರಾಮಾ ಜ್ಯೂನಿಯರ್ಸ್’ 4ನೇ ಆವೃತ್ತಿಯ ವಿಶಿಷ್ಟ ಪ್ರತಿಭೆಯಾಗಿ ವೇದಿಕೆಗೆ ಆಗಮಿಸಿದ್ದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್ ಅವರಿಗೆ ವಿಶೇಷ ಬಹುಮಾನವಾಗಿ 1 ಲಕ್ಷ ರುಪಾಯಿ ನಗದು ಬಹುಮಾನವನ್ನು ನೀಡಲಾಯಿತು. ಮಕ್ಕಳಿಗೆ ನೀಡಿರುವ ನಗದು ಬಹುಮಾನ ಅವರ ವಿದ್ಯಾಭ್ಯಾಸಕ್ಕೆ ಬಳಕೆ ಆಗಲಿದೆ.
ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿಭಾಯಿಸಿದ ಎಲ್ಲಾ ಕಾರ್ಮಿಕರು, ಮೆಂಟರ್ಗಳು, ತೀರ್ಪುಗಾರರು, ಛಾಯಾಗ್ರಾಹಕರು ಹಾಗೂ ಸ್ಕಿಟ್ ಬರಹಗಾರರಿಗೆ ಈ ಶೋ ನಿರ್ದೇಶಕ ಹಾಗು ಜೀ ಕನ್ನಡ ವಾಹಿನಿಯ ನಾನ್ ಫಿಕ್ಷನ್ ಮುಖ್ಯಸ್ಥರಾದ ಶರಣಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಶೋನಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅಭಿನಂದನೆ ಸಲ್ಲಿಸಿದ್ದಾರೆ.
View this post on Instagram
ವೀಕ್ಷಕರನ್ನು ನಕ್ಕು ನಗಿಸಲು ಶೀಘ್ರವೇ ‘ಕಾಮಿಡಿ ಕಿಲಾಡಿಗಳು ಸೀಸನ್ 4’ ಶುರುವಾಗಲಿದೆ ಎಂದು ರಾಘವೇಂದ್ರ ಹುಣಸೂರು ಮಾಹಿತಿ ನೀಡಿದ್ದಾರೆ. ಹೊಸ ಸೀಸನ್ನಲ್ಲೂ ನಿರ್ದೇಶಕ ಯೋಗರಾಜ್ ಭಟ್, ನಟ ಜಗ್ಗೇಶ್ ಮತ್ತು ನಟಿ ರಕ್ಷಿತಾ ಪ್ರೇಮ್ ಅವರು ತೀರ್ಪುಗಾರರಾಗಿ ಮುಂದುವರಿಯುತ್ತಾರೆ. ಮಾಸ್ಟರ್ ಆನಂದ್ ನಿರೂಪಣೆ ಮಾಡಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.