
ಪ್ರತಿ ವರ್ಷವೂ ವಿಷ್ಣುವರ್ಧನ್ (Vishnuvardhan) ಹುಟ್ಟುಹಬ್ಬದಂದು ಅಭಿಮಾನ್ ಸ್ಟುಡಿಯೋಕ್ಕೆ ತೆರಳಿ ಅಲ್ಲಿನ ಸಮಾಧಿಗೆ ಪೂಜೆ ಮಾಡಿ, ರಕ್ತದಾನ, ಅನ್ನದಾನ ಇತರೆಗಳನ್ನು ಅಭಿಮಾನಿಗಳು ಮಾಡಿಕೊಂಡು ಬಂದಿದ್ದರು. ಆದರೆ ಇತ್ತೀಚೆಗಷ್ಟೆ ಅಭಿಮಾನ್ ಸ್ಟುಡಿಯೋನಲ್ಲಿರುವ ವಿಷ್ಣುಸಮಾಧಿಯನ್ನು ಧ್ವಂಸ ಮಾಡಲಾಗಿದೆ. ಅದರ ಬೆನ್ನಲ್ಲೆ ಅಭಿಮಾನ್ ಸ್ಟುಡಿಯೋನಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಿಸುವಂತಿಲ್ಲ ಎಂದು ನ್ಯಾಯಾಲಯದಿಂದ ಆದೇಶವನ್ನು ಸಹ ಬಾಲಣ್ಣ ಕುಟುಂಬದವರು ತಂದಿದ್ದಾರೆ. ಇದು ವಿಷ್ಣು ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ.
ಅಭಿಮಾನ್ ಸ್ಟುಡಿಯೋ ಖಾಸಗಿ ಸ್ಥಳವಾಗಿದ್ದು ಅಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇದೇ ಕಾರಣಕ್ಕೆ ಈಗ ಅಭಿಮಾನಿಗಳು ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಆಚರಣೆಗೆ ಪರ್ಯಾಯ ವ್ಯವಸ್ಥೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ಅಭಿಮಾನ್ ಸ್ಟುಡಿಯೋದ ಸಮೀಪದಲ್ಲೆಲ್ಲೂ ಹುಟ್ಟುಹಬ್ಬ ಆಚರಣೆಗೆ ಅನುಮತಿ ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಮಾತ್ರವಲ್ಲ ಕೆಂಗೇರಿಯಲ್ಲೂ ಸಹ ವಿಷ್ಣು ಹುಟ್ಟುಹಬ್ಬ ಆಚರಣೆಗೆ ಪೊಲೀಸರು ಅನುಮತಿ ನೀಡುತ್ತಿಲ್ಲವಂತೆ. ಹೀಗೆಂದು ವೀರಕಪುತ್ರ ಶ್ರೀನಿವಾಸ್ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅಭಿಮಾನಿ ಸಂಘದ ಮುಖಂಡ ವೀರಕಪುತ್ರ ಶ್ರೀನಿವಾಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ನ್ಯಾಯಾಲಯದ ಆದೇಶವನ್ನು ಗೌರವಿಸೋಣ, ಅಭಿಮಾನಿಗಳು ಯಾರೂ ಸಹ ಅಭಿಮಾನ್ ಸ್ಟುಡಿಯೋದ ಬಳಿ ಹೋಗುವುದು ಬೇಡ ಎಂದು ಕರೆ ನೀಡಿದ್ದಾರೆ. ‘ಅಭಿಮಾನ್ ಸ್ಟುಡಿಯೋದಲ್ಲಿ ಆಚರಣೆಗೆ ಅವಕಾಶವಿಲ್ಲವೆಂದು ಕೋರ್ಟ್ ಹೇಳಿದೆ. ನಮ್ಮಗಳ ಭಾವುಕತೆ ಕೋರ್ಟಿಗೆ ಅರ್ಥವಾಗಬೇಕಿತ್ತು. ಆದರೆ ಕಾನೂನಿನ ರೀತಿಯೇ ಬೇರೆ! ಇರಲಿ… ಕೋರ್ಟಿನ ಆದೇಶವನ್ನು ಗೌರವಿಸೋಣ. ಮುಂದೆ ಕಾನೂನಿನ ಹೋರಾಟ ಮತ್ತು ಸರ್ಕಾರದ ಕ್ರಮಗಳಿಂದಾಗಿ ಆ ಜಾಗ ನಮ್ಮದೇ ಆದಾಗ ಅಲ್ಲಿ ಇದಕ್ಕಿಂತ ದೊಡ್ಡಮಟ್ಟದಲ್ಲಿ ಸಂಭ್ರಮಿಸೋಣ. ಆದರೆ ಈಗ ನಾವ್ಯಾರೂ ಅಭಿಮಾನ್ ಸ್ಟುಡಿಯೋದ ಬಳಿ ಹೋಗುವುದು ಬೇಡ’ ಎಂದಿದ್ದಾರೆ.
ಇದನ್ನೂ ಓದಿ:ಊಟದ ವಿಚಾರದಲ್ಲಿ ಸಖತ್ ಮೂಡಿ ಆಗಿದ್ದ ವಿಷ್ಣುವರ್ಧನ್
‘ಜೊತೆಗೆ, ಅಲ್ಲೇ ಪಕ್ಕದಲ್ಲಿ ಖಾಸಗಿ ಜಾಗವೊಂದನ್ನು ಬಾಡಿಗೆ ಪಡೆದು ರಾಜ್ಯದ ಯಾವ ಯಾವುದೋ ಮೂಲೆಗಳಿಂದ ಬರುತ್ತಿರುವ ಅಭಿಮಾನಿಗಳಿಗಾಗಿ ಪೂಜೆಗೆ ಅವಕಾಶ ಮತ್ತು ಅನ್ನದಾನ, ನೇತ್ರದಾನ, ರಕ್ತದಾನದಂತಹ ಸಾಮಾಜಿಕ ಕೈಂಕರ್ಯಗಳನ್ನು ಕೈಗೊಳ್ಳುವುದು ವಿಷ್ಣು ಸೇನಾ ಸಮಿತಿಯ ಉದ್ದೇಶವಾಗಿತ್ತು. ಆದರೆ ಅಕ್ಕಪಕ್ಕದಲ್ಲೂ ಕಾರ್ಯಕ್ರಮ ಮಾಡಬಾರದು ಅಂತ ಪೊಲೀಸರು ತಾಕೀತು ಮಾಡ್ತಿದ್ದಾರೆ. ಕೆಂಗೇರಿ ವ್ಯಾಪ್ತಿಯ ಇನ್ನೂ ಒಂದೆರಡು ಕಾರ್ಯಕ್ರಮಗಳಿಗೂ ಅವರು ಅನುಮತಿಯನ್ನು ನಿರಾಕರಿಸಿದ್ದಾರೆ. ಬೆಳಿಗ್ಗೆ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರನ್ನು ಭೇಟಿಯಾಗಿ ವಿನಂತಿಸಿದೆವು. ಎಂಎಲ್ಎ ಸಾಹೇಬ್ರು ಸರಿಯಾಗಿ ಸ್ಪಂದಿಸಲಿಲ್ಲ! ಅವರಿಗೂ ಎಂತಹುದ್ದೋ ಒತ್ತಡವಿರಬೇಕು. ಕೊನೇ ಪ್ರಯತ್ನವಾಗಿ ಇನ್ನೊಂದು ಕಡೆ ಹೋಗುತ್ತಿದ್ದೇನೆ. ನೋಡೋಣ ಏನಾಗುತ್ತೆ ಅಂತ’ ಎಂದಿದ್ದಾರೆ.
ಆ ಮೂಲಕ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಯಾರೋ ಪ್ರಭಾವಿಗಳು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಲಾಗುತ್ತಿದೆ. ಸರ್ಕಾರದ ಹಂತದಲ್ಲಿಯೇ ಅಡ್ಡಿ ಪಡಿಸುವ ಕೆಲಸ ಆಗುತ್ತಿದೆ ಎನ್ನುವ ಆರೋಪಗಳೂ ಸಹ ಕೇಳಿ ಬರುತ್ತಿದೆ. ವಿಷ್ಣುವರ್ಧನ್ ಅವರಿಗೆ ಇದೇ ಸರ್ಕಾರ ಕರ್ನಾಟಕ ರತ್ನ ನೀಡಿದೆ. ಈಗ ವಿಷ್ಣುವರ್ಧನ್ ಹುಟ್ಟುಹಬ್ಬ ಆಚರಣೆಗೆ ಅನುಮತಿಯನ್ನು ನಿರಾಕರಿಸಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:13 pm, Wed, 17 September 25