ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಮೂಕನ ಮಕ್ಕಳು ಸಹ ಒಂದು. ಈ ಕೃತಿಯನ್ನು ಅನೇಕರು ಓದಿರುತ್ತಾರೆ. ಈಗ, ಮಾಸ್ತಿಯವರ ಕೃತಿ ಸಿನಿಮಾ ರೂಪದಲ್ಲಿ ಸಿದ್ಧಗೊಂಡಿದ್ದು ಅತಿ ಶೀಘ್ರದಲ್ಲಿ ತೆರೆಮೇಲೆ ಬರಲಿದೆ.
ಕರಿಗಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಜ್ಜಾಗುತ್ತಿರುವ ಚಿತ್ರಕ್ಕೆ ಪವಿತ್ರಾ ಕ್ರಿಷ್ ಗೌರಿಬಿದನೂರು ನಿರ್ಮಾಪಕಿ. ರಂಗಭೂಮಿ ಕಲಾವಿದರಾದ ಹಾಗೂ ಈ ಹಿಂದೆ ಶಂಭೋ ಮಹಾದೇವ ಸಿನಿಮಾ ನಿರ್ದೇಶಿಸಿದ್ದ ಮೈಸೂರು ಮಂಜು ಸದ್ಯ ಸಿನಿಮಾಗೆ ಌಕ್ಷನ್ಕಟ್ ಹೇಳಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಹ ನಿರ್ದೇಶನವನ್ನು ಮಂಜು ಕ್ರಿಷ್ ಗೌರಿಬಿದನೂರು ಮಾಡಿದ್ದಾರೆ. ಪರಿಸರದಲ್ಲಿ ನಡೆಯುವ ಭಾವನಾತ್ಮಕ ಸಂಕೋಲೆಯ ಕಥಾಹಂದರವುಳ್ಳ ಈ ಸಿನಿಮಾದಲ್ಲಿ, ಮೊದಲ ಬಾರಿಗೆ ವಿಶೇಷ ಚೇತನನ ಪಾತ್ರದಲ್ಲಿ ಮಂಜು ಕ್ರಿಷ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಗರಾಜ ಶೆಟ್ಟಿ ಮಳಗಿ ಛಾಯಾಗ್ರಹಣವಿದ್ದು ಗಣೇಶ್ ಭಟ್ ಸಂಗೀತ ಸಂಯೋಜನೆಯಿದೆ. ಜೊತೆಗೆ, ಸಿನಿಮಾದ ಸಂಕಲನವನ್ನು ಸಂಜೀವ ರೆಡ್ಡಿ ಮಾಡಿದ್ದಾರೆ.
ಈಗಾಗಲೇ, ಮೂಕನ ಮಕ್ಕಳು ಕೊಲ್ಕತ್ತ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ನಲ್ಲಿ ಪ್ರದರ್ಶನಗೊಂಡು ಉತ್ತಮ ಚಿತ್ರವೆಂಬ ಖ್ಯಾತಿ ಪಡೆದಿದೆ. ಇದಲ್ಲದೆ, ಅಮೆರಿಕದ ಎರಡು ಇಂಟರ್ ನ್ಯಾಷನಲ್ ಫೆಸ್ಟಿವಲ್ಗೆ ಈ ಚಿತ್ರ ಆಯ್ಕೆಯಾಗಿದೆ. ಜೊತೆಗೆ, ಪನೋರಮಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಜ್ಜಾಗಿದೆ.
ಚಿತ್ರರಂಗದ ಹಲವರಿಂದ ಬಹಳಷ್ಟು ಮೆಚ್ಚುಗೆ ಪಡೆದಿರುವ ಈ ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಮಾಸ್ತಿ ಅವರ ಮೂಕನ ಮಕ್ಕಳು ಕೃತಿ ಬಹಳಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಅದೇ ರೀತಿ ಸಿನಿಮಾ ಕೂಡ ಪ್ರಸಿದ್ಧತೆಯನ್ನು ಪಡೆಯುತ್ತದೆಯೇ ಎಂದು ಕಾದು ನೋಡಬೇಕಿದೆ.
Published On - 7:56 pm, Sun, 15 November 20