ಶಿವರಾಜ್ ಕುಮಾರ್ ಯಶಸ್ಸಿನ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರ ಶ್ರಮವೂ ಸಾಕಷ್ಟಿದೆ. ಈ ಬಗ್ಗೆ ಸ್ವತಃ ಶಿವರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರು ಸಿನಿಮಾ ನಿರ್ಮಾಪಕಿಯೂ ಹೌದು, ಪಾರ್ವತಮ್ಮ ರಾಜ್ಕುಮಾರ್ ನಿಧನದ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಜವಾಬ್ದಾರಿವಹಿಸಿಕೊಂಡು ಅದರ ನಿರ್ವಹಣೆ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಅವರು ಶಿಕ್ಷಕಿಯಾಗಿಯೂ ಬದಲಾಗಿದ್ದಾರೆ. ತಮ್ಮ ಶಕ್ತಿಧಾಮದ ಮಕ್ಕಳಿಗಾಗಿ ಅವರು ಈ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅವರು ಕೈರಾಮ್ ವಾಶಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ಗೀತಾ ಅವರಿಗೆ ಮೊದಲಿನಿಂದಲೂ ಬೇಕಿಂಗ್ ಬಗ್ಗೆ ಆಸಕ್ತಿ ಇತ್ತಂತೆ. ಅವರು ಶಿವಣ್ಣನ ಮದುವೆಯಾಗಿ ಬೆಂಗಳೂರಿಗೆ ಬಂದಾಗ ಅವರಿದ್ದ ಮನೆಯ ಬಳಿ ಒಬ್ಬ ಮುಂಬೈ ಮಹಿಳೆ ಇದ್ದರಂತೆ, ಅವರು ಕಪ್ಕೇಕ್ ಮಾಡುತ್ತಿದ್ದರಂತೆ. ಅಲ್ಲದೆ ಆಗ ಕೋಶೀಸ್ ಅವರು ಸೈಕಲ್ನಲ್ಲಿ ಕಪ್ ಕೇಕ್ ಮಾರಾಟ ಮಾಡುತ್ತಿದ್ದರಂತೆ. ಆಗೆಲ್ಲ ಇದನ್ನು ಹೇಗೆ ಮಾಡುತ್ತಾರೆ, ಇದನ್ನು ಕಲಿಯಬೇಕು ಅನಿಸಿತಂತೆ. ಅದೇ ಸಮಯದಲ್ಲಿ ಗೀತಾ ಅವರ ಸಹೋದರಿ ಅವರಿಗೆ ಅವನ್ ಒಂದನ್ನು ತಂದುಕೊಟ್ಟರಂತೆ ಆಗಿನಿಂದ ಅವರು ಬೇಕಿಂಗ್ ಮಾಡುತ್ತಿದ್ದಾರೆ.
ಪಾರ್ವತಮ್ಮ ಅವರು ತೀರಿಕೊಂಡ ಬಳಿಕ ಗೀತಾ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಜವಾಬ್ದಾರಿವಹಿಸಿಕೊಂಡರು, ಅದಾದ ಬಳಿಕ ಒಮ್ಮೆ ಅಲ್ಲಿ ವರ್ಷಗಳಿಂದ ಕೋಣೆಯಲ್ಲಿ ತೆಗೆಸಿದಾಗ ಅಲ್ಲಿ ಕೆಲವು ಮಷೀನ್ಗಳು ಕಂಡಿವೆ. ಮೊದಲಿಗೆ ಅವು ಏನು ಎಂಬುದು ಗೀತಾ ಅವರಿಗೂ ಗೊತ್ತಾಗಿರಲಿಲ್ಲ. ಬಳಿಕ ತಿಳಿದು ಬಂದಿದ್ದು ಅವು ಬೇಕಿಂಗ್ ಯಂತ್ರಗಳೆಂದು. ಆದರೆ ಅವೆಲ್ಲ ಕಮರ್ಶಿಯಲ್ ಬೇಕಿಂಗ್ ಯಂತ್ರಗಳು, ಬಹಳ ದೊಡ್ಡ ಯಂತ್ರಗಳು.
ಇದನ್ನೂ ಓದಿ:ಶಿವರಾಜ್ ಕುಮಾರ್ ನೂತನ ಫಾರ್ಮ್ ಹೌಸ್ ಅದ್ಧೂರಿ ಗೃಹ ಪ್ರವೇಶ
ಅವು ಹಾಗೆಯೇ ಇರಬೇಕಾದರೆ, ಗೀತಾ ಅವರು ಶಕ್ತಿಧಾಮದ ಮಕ್ಕಳಲ್ಲಿ ಕಾಲ ಕಾಲಕ್ಕೆ ಕೆಲವು ಬದಲಾವಣೆಗಳನ್ನು ಗುರುತಿಸಿದರಂತೆ. ಮಕ್ಕಳು ರಜೆಗೆ ಊರಿಗೆ ಹೋಗಿ ಬಂದಾಗ ಅವರು ತೂಕ ಕಳೆದುಕೊಂಡಿರುತ್ತಾರೆ, ಸಣ್ಣ ಆಗಿರುತ್ತಾರೆ, ಮುಖ ಕಪ್ಪಾಗಿರುತ್ತದೆ, ಯಾಕೆ ಈಗೆ ಆಗುತ್ತಿದೆ ಎಂದು ಮಕ್ಕಳ ಬಳಿ ವಿಚಾರಿಸಿದಾಗ, ಊರಿಗೆ ಹೋದಾಗ ಅವರನ್ನು ಪೋಷಕರು ದಿನಗೂಲಿಗೆ ಕಳಿಸುತ್ತಿದ್ದರಂತೆ. ಇದು ಗೀತಾ ಅವರ ಬೇಸಕ್ಕೆ ಕಾರಣವಾಗಿ, ಶಕ್ತಿಧಾಮದ ಮಕ್ಕಳಿಗೆ ಬೇಕಿಂಗ್ ಅನ್ನು ಕಲಿಸುವ ನಿರ್ಧಾರ ಮಾಡಿದರಂತೆ.
ಶಕ್ತಿಧಾಮದ ಮಕ್ಕಳಿಗೆ ಕೌಶಲ್ಯ ಕಲಿಸಿದರೆ ಅವರು ರಜೆಯ ಅವಧಿಯಲ್ಲಿ ದಿನಗೂಲಿಗೆ ಹೋಗುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಬೇಕಿಂಗ್ ಕಲಿಸಲು ಪ್ರಾರಂಭ ಮಾಡಿದ್ದಾರೆ ಗೀತಾ ಶಿವರಾಜ್ಕುಮಾರ್, ಏಳರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಿಂಗ್ ಅನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಗೀತಾ ಅವರು ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ತೆಗೆದುಕೊಂಡು ಅಲ್ಲಿಂದಲೇ ಮಕ್ಕಳಿಗೆ ಕಲಿಸುತ್ತಾರೆ.
ಹಲವು ಮಕ್ಕಳು ಈಗ ಚೆನ್ನಾಗಿ ಬೇಕಿಂಗ್ ಮಾಡುತ್ತಿದ್ದಾರಂತೆ. ಕೆಲವು ಹಿರಿಯ ವಿದ್ಯಾರ್ಥಿಗಳಿಗೆ ಈಗಾಗಲೇ 20-25 ಸಂಬಳದ ಆಫರ್ಗಳು ಸಹ ಬೇಕಿಂಗ್ ಫೀಲ್ಡ್ನಲ್ಲಿ ಬರುತ್ತಿವೆಯಂತೆ. ಮಕ್ಕಳು ಬೇಕ್ ಮಾಡಿದ ಪದಾರ್ಥಗಳನ್ನು ಮಾರಾಟ ಮಾಡಲು ಆನ್ಲೈನ್ ಪೋರ್ಟಲ್ ತೆರೆಯುವ ಆಲೋಚನೆಯೂ ಗೀತಾ ಅವರಿಗೆ ಇದೆ. ಅದರಿಂದ ಬಂದ ಹಣವನ್ನು ಶಕ್ತಿಧಾಮದ ಮಕ್ಕಳಿಗಾಗಿ ಬಳಸಲಾಗುತ್ತದೆಯಂತೆ. ಶೀಘ್ರವೇ ಆನ್ಲೈನ್ ಸ್ಟೋರ್ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ