‘ನರಸಿಂಹ’ ಬಳಿಕ ಈಗ ‘ಪರಶುರಾಮ’ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ

Hombale films: ‘ಮಹಾವತಾರ ನರಸಿಂಹ’ ಅನಿಮೇಟೆಡ್ ಸಿನಿಮಾವನ್ನು ವಿತರಣೆ ಮಾಡಿದ್ದ ಹೊಂಬಾಳೆ ಫಿಲಮ್ಸ್ ಒಳ್ಳೆಯ ವಿತರಣೆ ಮತ್ತು ಮಾರುಕಟ್ಟೆ ತಂತ್ರಗಳಿಂದ ಹೇಗೆ ಒಂದು ಸಿನಿಮಾವನ್ನು ಅದ್ಧೂರಿಯಾಗಿ ಗೆಲ್ಲಿಸಬಹುದು ಎಂದು ತೋರಿಸಿಕೊಟ್ಟಿತು. ಇದೀಗ ಅದೇ ‘ಮಹಾವತಾರ’ ಸರಣಿಯ ಎರಡನೇ ಸಿನಿಮಾವನ್ನು ಹೊಂಬಾಳೆ ಘೋಷಿಸಿದೆ. ಈ ಬಾರಿ ಹೊಂಬಾಳೆಯೂ ನಿರ್ಮಾಣ ಕ್ರಿಯೆಯಲ್ಲಿ ಭಾಗಿ ಆಗಲಿದೆ.

‘ನರಸಿಂಹ’ ಬಳಿಕ ಈಗ ‘ಪರಶುರಾಮ’ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ
Mahavatar Parasuram

Updated on: Apr 19, 2026 | 2:41 PM

‘ಕೆಜಿಎಫ್’ (KGF), ‘ಕಾಂತಾರ’ ಸರಣಿ, ‘ಸಲಾರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲಮ್ಸ್ (Hombale Films), ಕಳೆದ ವರ್ಷ ವಿಶಿಷ್ಟ ಸಾಹಸವೊಂದನ್ನು ಮಾಡಿತು. ‘ಮಹಾವತಾರ ನರಸಿಂಹ’ ಅನಿಮೇಟೆಡ್ ಸಿನಿಮಾವನ್ನು ವಿತರಣೆ ಮಾಡಿತು. ಒಳ್ಳೆಯ ವಿತರಣೆ ಮತ್ತು ಮಾರುಕಟ್ಟೆ ತಂತ್ರಗಳಿಂದ ಹೇಗೆ ಒಂದು ಸಿನಿಮಾವನ್ನು ಅದ್ಧೂರಿಯಾಗಿ ಗೆಲ್ಲಿಸಬಹುದು ಎಂದು ತೋರಿಸಿಕೊಟ್ಟಿತು. ‘ಕ್ಲೀಮ್ ಪ್ರೊಡಕ್ಷನ್ಸ್’ ನಿರ್ಮಿಸಿದ್ದ ‘ಮಹಾವತಾರ ನರಸಿಂಹ’ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ಪ್ರೆಸೆಂಟ್ ಮಾಡಿತ್ತು. ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಇದೀಗ ಅದೇ ‘ಮಹಾವತಾರ’ ಸರಣಿಯ ಎರಡನೇ ಸಿನಿಮಾವನ್ನು ಹೊಂಬಾಳೆ ಘೋಷಿಸಿದೆ. ಈ ಬಾರಿ ಹೊಂಬಾಳೆಯೂ ನಿರ್ಮಾಣ ಕ್ರಿಯೆಯಲ್ಲಿ ಭಾಗಿ ಆಗಲಿದೆ.

‘ಮಹಾವತಾರ ನರಸಿಂಹ’ ಬಿಡುಗಡೆ ಆದಾಗಲೇ ಈ ‘ಮಹಾವತಾರ’ ಸರಣಿ ಮುಂದುವರೆಯುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಅದರಂತೆ ಈಗ ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಘೋಷಿಸಲಾಗಿದೆ. ‘ಯಾವಾಗ ಧರ್ಮ ಬೀಳುತ್ತದೆಯೋ ಆಗೆಲ್ಲ ‘ಪರಶು’ ಏಳುತ್ತದೆ’ ಎಂಬ ಕ್ಯಾಚಿ ಲೈನ್ ಜೊತೆಗೆ ಅನಿಮೇಟೆಡ್ ವಿಡಿಯೋ ಒಂದನ್ನು ಟೀಸರ್ ರೀತಿ ಬಿಡುಗಡೆ ಮಾಡಲಾಗಿದೆ. ಪೌರಾಣಿಕ ಕತೆಯಾದ ಪರಶುರಾಮನ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾ ಮುಂದಿನ ವರ್ಷ ಡಿಸೆಂಬರ್​​ನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:ಹೊಂಬಾಳೆ ಬಳಿಕ ರಾಜ್ ಬಿ ಶೆಟ್ಟಿಯಿಂದಲೂ ದೂರಾದರೇ ರಿಷಬ್?

‘ಮಹಾವತಾರ ಪರಶುರಾಮ’ ಸಿನಿಮಾವನ್ನು ಅಶ್ವಿನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ‘ಮಹಾವತಾರ ನರಸಿಂಹ’ ಸಿನಿಮಾವನ್ನೂ ಇದೇ ಅಶ್ವಿನ್ ಅವರೇ ನಿರ್ದೇಶಿಸಿದ್ದರು. ‘ಮಹಾವತಾರ ಪರಶುರಾಮ’ ಸಿನಿಮಾವನ್ನು ಹೊಂಬಾಳೆ ಮತ್ತು ಕ್ಲೀಮ್ ಜಂಟಿಯಾಗಿ ನಿರ್ಮಿಸುತ್ತಿದ್ದು, ವಿಜಯ್ ಕಿರಗಂದೂರು ಜೊತೆಗೆ ಶಿಲ್ಪಾ ಧವನ್ ಸಹ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾ, ಅನಿಮೇಟೆಡ್ ಸಿನಿಮಾ ಆಗಿರಲಿದ್ದು, ‘ಮಹಾವತಾರ ನರಸಿಂಹ’ ಸಿನಿಮಾಕ್ಕಿಂತಲೂ ತಾಂತ್ರಿಕವಾಗಿ ಇನ್ನಷ್ಟು ಗುಣಮಟ್ಟ ಹೊಂದಿರುವ ಸ್ಪಷ್ಟ ಸುಳಿವು ಟೀಸರ್​ನಿಂದ ಸಿಗುತ್ತಿದೆ.

ವಿಷ್ಣುವಿನ ಅವತಾರಗಳ ಕತೆಯನ್ನು ಅನಿಮೇಟೆಡ್ ಸಿನಿಮಾಗಳನ್ನಾಗಿ ನಿರ್ಮಿಸಲಾಗುತ್ತಿದ್ದು, ಈಗಾಗಲೇ ‘ಮಹಾವತಾರ ನರಸಿಂಹ’ ಸಿನಿಮಾ ಆಗಿ ಸೂಪರ್ ಹಿಟ್ ಆಗಿದೆ. ಇದೀಗ ‘ಮಹಾವತಾರ ಪರಶುರಾಮ’ ಸಿನಿಮಾ ಆಗುತ್ತಿದೆ. 2029 ಕ್ಕೆ ರಾಮನ ಕುರಿತಾದ ‘ಮಹಾವತಾರ ರಘುರಾಮ’, ಬಳಿಕ ಕೃಷ್ಣನ ಕುರಿತಾಗಿ ‘ಮಹಾವತಾರ ದ್ವಾರಕಾದೀಶ’, ‘ಮಹಾವತಾರ ಗೋಕುಲನಂದ’, ಬಳಿಕ ಕಲ್ಕಿ ಅವತಾರದ ಕುರಿತಾಗಿ ‘ಮಹಾವತಾರ ಕಲ್ಕಿ 1’ ಮತ್ತು ‘ಮಹಾವತಾರ ಕಲ್ಕಿ 2’ ಸಿನಿಮಾಗಳು ನಿರ್ಮಾಣ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us