ಬೆಂಗಳೂರು: ಕೊರೊನಾದಿಂದ ಜನ ಜೀವನವೇ ಬದಲಾಗಿದೆ. ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಎಲ್ಲಾ ಕ್ಷೇತ್ರಗಳಿಗೂ ಕೊರೊನಾ ಬಿಸಿ ತಟ್ಟಿದೆ. ಸದ್ಯ ಈಗ ದೇಶ ಕೊರೊನಾದಿಂದ ಚೇತರಿಸಿಕೊಳ್ಳುತ್ತಿದ್ದು ಕಲಾವಿದರಿಗೆ ಮಾತ್ರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆನೇ ಗತಿಯಾಗಿದೆ.
ಉತ್ತರ ಕರ್ನಾಟಕದ ಅದ್ಭುತ ಪ್ರತಿಭೆ ಚಂದ್ರು, ಏಕಲವ್ಯ ಅಂತಾನೇ ಫೇಮಸ್ ಆಗಿದ್ದಾನೆ. ಮೂಲತ: ರಾಣೆಬೆನ್ನೂರಿನವರಾದ ಏಕಲವ್ಯನ ಸ್ಟಂಟ್ ಪರ್ಫಾರ್ಮೆನ್ಸ್ ನೋಡಿ ಹಲವು ಸ್ಟಾರ್ಗಳು ಇಂಪ್ರೆಸ್ ಆಗಿದ್ದಾರೆ. ಡ್ಯಾನಿ ಮಾಸ್ಟರ್, ಪುನೀತ್, ಶಿವಣ್ಣ, ಉಪೇಂದ್ರ ಸೇರಿದಂತೆ ಹಲವರಿಗೆ ಈತನ ಪ್ರತಿಭೆಗೆ ಮನಸೋತಿದ್ದಾರೆ.
ಇವನ ಸ್ಟಂಟ್ಗಳನ್ನು ನೋಡಿದವರು ಸ್ವತಃ ಅವರೇ ಕರೆ ಮಾಡಿ ಏಕಲವ್ಯನ ಜೊತ ಮಾತನಾಡಿ ಶುಭ ಹಾರೈಸಿದ್ದಾರೆ. ಇನ್ನು ಜೋಗಿ.. ವಿಲನ್ ಸಿನಿಮಾಗಳ ಸ್ಟಾರ್ ನಿರ್ದೇಶಕ ಪ್ರೇಮ್ ಈತನ ಪ್ರತಿಭೆ ಬಗ್ಗೆ ಮಾತನಾಡಿದ್ದು ಹಿಂದಿ, ಮಲಯಾಳಂಗೆ ಇದನ್ನ ಪರಿಚಯಿಸುವಂತೆ ಸಲಹೆ ಕೊಟ್ಟಿದ್ದಾರೆ.
ಕಲಿವೀರ ರಿಲೀಸ್ಗೆ ಕೊರೊನಾ ಕಾಟ
ಆದ್ರೆ ಕೊರೊನಾ ಹೊಡೆತಕ್ಕೆ ತತ್ತರಿಸಿರೋ ನಟ ಏಕಲವ್ಯನ ಸಿನಿಮಾ ‘ಕಲಿವೀರ’ ರಿಲೀಸ್ ಆಗೋಕೆ ಸಿದ್ದವಾದ್ರು ಕೊರೊನಾ ಹಿನ್ನೆಲೆ ಸಮಯ ಬೇಕಾಗಿದೆ. ಹೀಗಾಗಿ ದಿಕ್ಕು ದೆಸೆ ಇಲ್ಲದ ಅನಾಥ ಸದ್ಯ ಹೊಟ್ಟೆ ಪಾಡಿಗಾಗಿ ಬೇರೊಬ್ಬರ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡ್ತಾ ದಿನಗಳನ್ನ ದೂಡ್ತಿದ್ದಾನೆ.
ಕುದುರೆ ಸವಾರಿ ಕಲಿಯಲು ಹೋಗಿ ಕೆಲಸಗಾರನಾದ ನಟ
ಕುದುರೆ ಸವಾರಿ ಕಲಿಯೋಕೆ ಹೋಗಿ ಅಲ್ಲಿಯೇ ಕೆಲಸ ಮಾಡ್ತಾ ಆಶ್ರಯ ಪಡೆದಿದ್ದಾನೆ ನಟ ಏಕಲವ್ಯ. ಸದ್ಯ ಕೋಳಿಗೆ ಕಾಳು ಹಾಕೋದು.. ಕುದುರೆಗೆ ಹುಲ್ಲು ಹಾಕೋ ಕೆಲಸ ಮಾಡಿ ಕಾಲ ಕಳೆಯುತ್ತಿದ್ದಾನೆ. ಈಗ ತಮ್ಮ ಸಿನಿಮಾದ ಪ್ರಮೋಶನ್ ತಾವೇ ಮಾಡ್ತಾ ಆಟೋಗಳ ಹಿಂದೆ ಪೋಸ್ಟರ್ ಹಚ್ಚಿ ಸಾಮಾನ್ಯರಂತೆ ದಿನ ಕಳೆಯುತ್ತಿರುವ ನಟನಿಗೆ ಆದಷ್ಟು ಬೇಗ ಒಳ್ಳೆ ದಿನಗಳು ಬರಲಿ ಅಂತ ಗಾಂಧಿನಗರ ಹಾರೈಸುತ್ತಿದೆ.