ತಿರುವನಂತಪುರಂ: ದಕ್ಷಿಣ ಭಾರತದ ನಟಿ ಶಾಮ್ನಾ ಕಾಸಿಮ್ ಅವರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಮುಂದಾಗಿದ್ದ 7 ಆರೋಪಿಗಳನ್ನು ಕೊಚ್ಚಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಸೆಲೆಬ್ರೆಟಿ ಹೇರ್ ಸ್ಟೈಲಿಸ್ಟ್ ಹ್ಯಾರಿಸ್ನನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಟಿ ಶಾಮ್ನಾ ಕಾಸಿಮ್ ಅವರ ಬಳಿ ಹಣ ಸುಲಿಗೆ ಮಾಡಲು ಆರೋಪಿಗಳು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ನಟಿಯ ಪೋಷಕರನ್ನು ಈ ಗ್ಯಾಂಗ್ ಸಂಪರ್ಕಿಸಿತ್ತು. ಈ ಬಗ್ಗೆ ಹಲವು ಬಾರಿ ಚರ್ಚೆಗಳು ಹಾಗೂ ದೂರವಾಣಿ ಸಂಭಾಷಣೆ ನಡೆದ ನಂತರ ಪೋಷಕರಿಗೆ ಅನುಮಾನ ಬಂದಿದೆ. ಬಳಿಕ ನಟಿಯ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದರು.
ನಟಿ ಶಾಮ್ನಾ ಕಾಸಿಮ್ ಅವರನ್ನು ಸಂಪರ್ಕಿಸಲು ಚಿತ್ರರಂಗದ ಲಿಂಕ್ ಇರುವ ಹೇರ್ ಸ್ಟೈಲಿಸ್ಟ್ ಹ್ಯಾರಿಸ್ನನ್ನು ಈ ಗ್ಯಾಂಗ್ ಬಳಸಿಕೊಂಡಿದೆ. ಈ ಗ್ಯಾಂಗ್ ವಿರುದ್ಧ ಈಗಾಗಲೇ ಹಲವರು ದೂರು ನೀಡಿದ್ದಾರೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ವಿಜಯ್ ಸಖಾರೆ ಅವರು ತಿಳಿಸಿದ್ದಾರೆ.
ಇದು ಗೋಲ್ಡ್ ಸ್ಮಗ್ಲಿಂಗ್ ಗ್ಯಾಂಗ್ ವಂಚನೆ ಜಾಲ
ಬಂಧಿತರು ದೊಡ್ಡ ಚಿನ್ನದ ಕಳ್ಳ ಸಾಗಣೆ ವಂಚನೆ ಜಾಲಕ್ಕೆ ಸೇರಿದವರು. ತನ್ನ ಬಲೆಗೆ ಬಿದ್ದ ತಾರಾಮಣಿಗಳನ್ನು ಸುಲಭವಾಗಿ ಗೋಲ್ಡ್ ಸ್ಮಗ್ಲಿಂಗ್ ಜಾಲದಲ್ಲಿ ಬಳಸುವುದು ಇವರ ಉದ್ದೇಶ, ಸಕಾಲದಲ್ಲಿ ತಮ್ಮ ಕುಟುಂಬಸ್ಥರು ಎಚ್ಚೆತ್ತುಕೊಂಡಿದ್ದರಿಂದ ನಟಿ ಶಾಮ್ನಾ ಕಾಸಿಮ್ ಈ ಜಾಲದಲ್ಲಿ ಸಿಲುಕುವುದು ತಪ್ಪಿದೆ. ಇನ್ನೂ ಅನೇಕ ತಾರಾಮಣಿಗಳು ಇಂತಹ ಜಾಲದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಕೇರಳ ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.
Published On - 6:58 pm, Tue, 30 June 20