
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನೆಡೆ ಉಂಟಾಗಿದೆ. ಪವಿತ್ರಾ ಗೌಡ ಅವರು ತಮ್ಮ ಬ್ಯಾಕರ್ ಬದಲಾವಣೆ ಕೋರಿ ಅರ್ಜಿ ಹಾಕಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ 59ನೇ ಸಿಸಿಎಚ್ ನ್ಯಾಯಾಲಯ ಆದೇಶವನ್ನು ಇಂದಿಗೆ (ಅಕ್ಟೋಬರ್ 23)ಕ್ಕೆ ಕಾಯ್ದಿರಿಸಿತ್ತು. ಇಂದು ಆದೇಶ ಹೊರಬಿದ್ದಿದ್ದು ನ್ಯಾಯಾಧೀಶರು ಅರ್ಜಿಯನ್ನು ವಜಾ ಮಾಡಿದ್ದಾರೆ.
ತಮ್ಮ ಬ್ಯಾರಕ್ನಲ್ಲಿ ಇರುವ ನೈಜೀರಿಯನ್ ಮೂಲದ ಆರೋಪಿಗಳಿಂದ ಸಮಸ್ಯೆ ಆಗುತ್ತಿದೆ. ತಮ್ಮ ಉಡುಪುಗಳನ್ನು ಬೇರೆ ಆರೋಪಿಗಳು ಬಳಸುತ್ತಿದ್ದಾರೆ. ಪದೇ ಪದೇ ತಮಗೆ ತೊಂದರೆ ನೀಡುತ್ತಿದ್ದಾರೆ. ತಮಗೆ ಬ್ಯಾರಕ್ನಲ್ಲಿ ಇರುವುದಕ್ಕೆ ಆಗುತ್ತಿಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ನ್ಯಾಯಾಧೀಶರ ಸಮಿತಿಯೇ ಬಂದು ಇಲ್ಲಿನ ವ್ಯವಸ್ಥೆ ನೋಡುವಂತೆ ಪವಿತ್ರಾ ಹೇಳಿದ್ದರು. ಜೊತೆಗೆ ತಮ್ಮ ಬ್ಯಾರಕ್ ಬದಲಾವಣೆಗೆ ಅನುಮತಿ ನೀಡಬೇಕು ಎಂದು ಅವರು ಕೋರಿದ್ದರು. ಜೊತೆಗೆ ಪ್ರತ್ಯೇಕ ಆರೋಗ್ಯ ತಪಾಸಣೆಗೂ ಅನುಮತಿ ಕೋರಿದ್ದರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ನಟ ದರ್ಶನ್ ಖುದ್ದು ಹಾಜರಿ ಕೋರಿ ವಕೀಲರ ಅರ್ಜಿ
ಆದರೆ ವಿಚಾರಣೆ ಆಲಿಸಿದ್ದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ, ಪವಿತ್ರಾ ಗೌಡ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಪವಿತ್ರಾ ಗೌಡ ಮಾತ್ರವೇ ಅಲ್ಲದೆ ಇತರೆ ಆರೋಪಿಗಳಾದ ಅನುಕುಮಾರ್, ಜಗದೀಶ್ ಸಹ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಆ ಅರ್ಜಿಯನ್ನೂ ಸಹ ವಜಾ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ