
ಕನ್ನಡದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ‘ರಿಚರ್ಡ್ ಆಂಟೊನಿ’ ಸಹ ಒಂದು. ರಕ್ಷಿತ್ ಶೆಟ್ಟಿ (Rakshit Shetty) ಅವರು ನಿರ್ದೇಶಿಸಲಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಘೋಷಣೆಯಾಗಿ ವರ್ಷಗಳು ಕಳೆದಿವೆ. ಆದರೆ ಸಿನಿಮಾದ ಯಾವುದೇ ಅಪ್ಡೇಟ್ ಹೊರಬಿದ್ದಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ‘ರಿಚರ್ಡ್ ಆಂಟೊನಿ’ ಸಿನಿಮಾದ ಕತೆ ಮತ್ತು ಚಿತ್ರಕತೆ ಹೆಣೆಯುವಲ್ಲಿ ರಕ್ಷಿತ್ ಶೆಟ್ಟಿ ಬ್ಯುಸಿ ಆಗಿದ್ದಾರೆ. ಸಿನಿಮಾದ ಕತೆಯಲ್ಲಿ ಬ್ಯುಸಿ ಆಗಿರುವ ಕಾರಣಕ್ಕೆ ರಕ್ಷಿತ್ ಶೆಟ್ಟಿ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಆದರೆ ಇದೀಗ ಕೊನೆಗೂ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ಒಂದು ದೊರೆತಿದೆ.
ಶೆಟ್ಟಿ ಗ್ಯಾಂಗ್ನಲ್ಲಿ ಒಬ್ಬರಾಗಿರುವ ಪ್ರಮೋದ್ ಶೆಟ್ಟಿ ಇತ್ತೀಚೆಗೆ ತಮ್ಮ ನಟನೆಯ ‘ಶೇಷ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಮಾತನಾಡಿದರು. ‘ರಿಚರ್ಡ್ ಅಂಟೊನಿ’ ಸಿನಿಮಾದ ಚಿತ್ರಕತೆ ರೆಡಿ ಆಗುತ್ತಿದೆ. ನಾವು ಶೀಘ್ರವೇ ಪ್ರೀ ಪ್ರೊಡಕ್ಷನ್ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೇವೆ. ಇನ್ನು ಎರಡು ಮೂರು ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಸಹ ಪ್ರಾರಂಭ ಆಗಲಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ. ಮಾತ್ರವಲ್ಲದೆ, ‘ರಿಚರ್ಡ್ ಆಂಟೊನಿ’ ಸಿನಿಮಾನಲ್ಲಿ ತಾವು ಸಹ ರಕ್ಷಿತ್ ಶೆಟ್ಟಿ ಜೊತೆಗೆ ನಟಿಸುತ್ತಿರುವುದಾಗಿಯೂ ಹೇಳಿದ್ದಾರೆ.
ಇದನ್ನೂ ಓದಿ:ನೇಮೋತ್ಸವದಲ್ಲಿ ಭಕ್ತಿಯಿಂದ ಪಾಲ್ಗೊಂಡ ನಟ ರಕ್ಷಿತ್ ಶೆಟ್ಟಿ
ಶೆಟ್ಟಿ ಗ್ಯಾಂಗ್ನ ಎಲ್ಲ ಸದಸ್ಯರು ಒಟ್ಟಿಗೆ ಒಂದೇ ಸಿನಿಮಾನಲ್ಲಿ ನಟಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಶೆಟ್ಟಿ, ‘ರಾಜ್ ಬಿ ಶೆಟ್ಟಿ ಅವರದ್ದು ಪ್ರತಿ ತಿಂಗಳು ಒಂದೊಂದು ಸಿನಿಮಾ ಬಿಡುಗಡೆ ಆಗ್ತಿದೆ. ಮಲಯಾಳಂ ಚಿತ್ರರಂಗದಲ್ಲೂ ಬ್ಯುಸಿ ಆಗಿದ್ದಾನೆ. ರಿಷಬ್‌ಗೆ ತೆಲುಗು ಚಿತ್ರರಂಗದಲ್ಲಿ ಆಫರ್ ಇರುವುದರಿಂದ ಅಲ್ಲಿ ಬ್ಯುಸಿ ಇದ್ದಾನೆ. ರಕ್ಷಿತ್, ಕತೆ ಬರೆದುಕೊಂಡು ಕೂತಿದ್ದ, ಇನ್ನೇನು ಮೂರು ತಿಂಗಳಲ್ಲಿ ಶೂಟಿಂಗ್ ಶುರು ಮಾಡ್ತಾನೆ. ಎಲ್ಲರೂ ವೈಯಕ್ತಿಕವಾಗಿ ಬ್ಯುಸಿಯಿದ್ದಾರೆ. ಪುರುಸೊತ್ತಿದ್ದಾಗ ಸಿಗ್ತೀವಿ. ಎಲ್ಲಾ ಸಿನಿಮಾ ಕೂಡ ಒಟ್ಟಿಗೆ ಮಾಡ್ತಾ ಇದ್ರೆ ಜನಕ್ಕೆ ಬೋರ್ ಆಗುತ್ತೆ’ ಎಂದಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ರಕ್ಷಿತ್ ಶೆಟ್ಟಿ ಕಾಣೆಯಾಗಿದ್ದಾರೆ. ‘ರಿಚರ್ಡ್ ಆಂಟೊನಿ’ ಸಿನಿಮಾವನ್ನು ಅವರು ಘೋಷಿಸಿ ವರ್ಷಗಳೇ ಕಳೆದಿವೆ. ಸಿನಿಮಾದ ಘೋಷಣೆ ಆದಾಗ ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುವುದಾಗಿ ಹೇಳಿತ್ತು. ಆದರೆ ಚಿತ್ರಕತೆ ತಡವಾದ ಕಾರಣದಿಂದಾಗಿ ಎಲ್ಲವೂ ಅದಲು-ಬದಲಾಗಿದೆ ಎನ್ನಲಾಗುತ್ತಿದೆ. ಇನ್ನು ‘ರಿಚರ್ಡ್ ಆಂಟೊನಿ’ ಸಿನಿಮಾ, ರಕ್ಷಿತ್ ಶೆಟ್ಟಿ ಅವರೇ ನಿರ್ದೇಶಿಸಿದ್ದ ‘ಉಳಿದವರು ಕಂಡಂತೆ’ ಸಿನಿಮಾದ ಪ್ರೀಕ್ವೆಲ್ ಆಗಿದೆ. ‘ಉಳಿದವರು ಕಂಡಂತೆ’ ಸಿನಿಮಾದ ರಿಚ್ಚಿ ಅಲಿಯಾಸ್ ರಿಚರ್ಡ್ ಆಂಟೊನಿ ಪಾತ್ರದ ಕತೆಯನ್ನು ‘ರಿಚರ್ಡ್ ಆಂಟೊನಿ’ ಸಿನಿಮಾ ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ