
ಸ್ಯಾಂಡಲ್ವುಡ್ನಲ್ಲಿ ಎಲ್ಲರ ಜೊತೆಗೂ ಉತ್ತಮ ಒಡನಾಟ ಹೊಂದಿರುವ ನಟ ಪುನೀತ್ ರಾಜ್ಕುಮಾರ್ ಬುಧವಾರ (ಮಾ.17) 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲರಿಂದ ಶುಭ ಹಾರೈಕೆಗಳು ಹರಿದುಬರುತ್ತಿದೆ. ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ‘ಪವರ್ ಸ್ಟಾರ್’ಗೆ ವಿಶ್ ಮಾಡುತ್ತಿದ್ದಾರೆ.
ಡಾ. ರಾಜ್ ಕುಟುಂಬದವರನ್ನು ಕಂಡರೆ ಇಡೀ ಚಿತ್ರರಂಗಕ್ಕೆ ಎಲ್ಲಿಲ್ಲದ ಅಭಿಮಾನ. ಬಾಲನಟ ಆಗಿದ್ದಾಗಿನಿಂದಲೂ ಸ್ಯಾಂಡಲ್ವುಡ್ನಲ್ಲಿ ಸಕ್ರಿಯವಾಗಿರುವ ಪುನೀತ್ ರಾಜ್ಕುಮಾರ್ ಹಲವಾರು ಸ್ನೇಹಿತರನ್ನು ಸಂಪಾದಿಸಿದ್ದಾರೆ. ಇಂದು ಅವರ ಜನ್ಮದಿನಕ್ಕೆ ಎಲ್ಲರೂ ಶುಭಕೋರುತ್ತಿದ್ದಾರೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಟ್ವೀಟ್ ಮಾಡುವ ಮೂಲಕ ಪುನೀತ್ಗೆ ಶುಭ ಹಾರೈಸಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು ಪುನೀತ್ ರಾಜ್ಕುಮಾರ್’ ಎಂದು ಅಭಿಮಾನಿಗಳ ಪ್ರೀತಿಯ ‘ದಾಸ’ ಟ್ವೀಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರಿಗೂ ಪುನೀತ್ ರಾಜ್ಕುಮಾರ್ ಎಂದರೆ ಅಚ್ಚುಮೆಚ್ಚು. ಇಬ್ಬರ ನಡುವೆ ಒಳ್ಳೆಯ ಒಡನಾಟ ಇದೆ. ಅವರು ಕೂಡ ಸೋಶಿಯಲ್ ಮೀಡಿಯಾ ಮೂಲಕ ಅಪ್ಪುಗೆ ಶುಭ ಕೋರಿದ್ದಾರೆ. ಸುದೀಪ್ ಮತ್ತು ದರ್ಶನ್ ಮಾತ್ರವಲ್ಲದೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು ಪುನೀತ್ ರಾಜ್ಕುಮಾರ್ಗೆ ವಿಶ್ ಮಾಡಿದ್ದಾರೆ.
ಪರಿಸ್ಥಿತಿ ಚೆನ್ನಾಗಿ ಇದ್ದಿದ್ದರೆ ಪುನೀತ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಜಾತ್ರೆಯ ರೀತಿ ಆಚರಿಸುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಆ ಸಂಭ್ರಮಕ್ಕೆ ಬ್ರೇಕ್ ಹಾಕಲಾಗಿದೆ. ಕಳೆದ ವರ್ಷ ಕೂಡ ಕೋವಿಡ್-19 ಭೀತಿಯಿಂದ ಪುನೀತ್ ಬರ್ತ್ಡೇ ಕ್ಯಾನ್ಸಲ್ ಮಾಡಲಾಗಿತ್ತು. ‘ಈ ಬಾರಿಯೂ ನಾನು ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಯಾರೂ ಕೂಡ ಮನೆ ಬಳಿ ಬರುವುದು ಬೇಡ’ ಎಂದು ಪುನೀತ್ ಎರಡು ದಿನ ಮುನ್ನವೇ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದರು.
ಕುಟುಂಬದವರ ಜೊತೆ ಸೇರಿ ಪುನೀತ್ ಇಂದು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದೇ ತಿಂಗಳ 23ರಿಂದ ಪ್ರತಿ ಜಿಲ್ಲೆಗಳಿಗೂ ತೆರಳಿ ಅಭಿಮಾನಿಗಳ ಜೊತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ಪುನೀತ್ ತಿಳಿಸಿದ್ದಾರೆ. ಏ.1ರಂದು ಅವರ ಯುವರತ್ನ ಸಿನಿಮಾ ಬಿಡುಗಡೆ ಆಗಲಿದ್ದು, ಈಗಾಗಲೇ ದೊಡ್ಡಮಟ್ಟದ ಹೈಪ್ ಸೃಷ್ಟಿ ಮಾಡಿದೆ.