ನಟಿ ರಶ್ಮಿಕಾ ಮಂದಣ್ಣ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಯಶಸ್ಸು ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. ಅದರಲ್ಲಿ ಸಿಕ್ಕ ಗೆಲುವಿನ ಬಲದಿಂದಾಗಿ ಅವರು ಕನ್ನಡದ ಬೇರೆ ಸ್ಟಾರ್ ನಟರ ಸಿನಿಮಾಗಳಿಗೆ ನಾಯಕಿ ಆಗುವಂತಾಯಿತು. ಆ ಮೇಲೆ ನೇರವಾಗಿ ಟಾಲಿವುಡ್ಗೆ ಎಂಟ್ರಿ ಸಿಕ್ಕಿತು. ಈಗಂತೂ ಅವರು ಬಾಲಿವುಡ್ನಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ. ಆದರೆ ಕಿರಿಕ್ ಪಾರ್ಟಿ ಸಿನಿಮಾದ ಹಿಂದಿ ರಿಮೇಕ್ನಲ್ಲಿ ನಟಿಸಲು ಮಾತ್ರ ತಾವು ಯಾವುದೇ ಕಾರಣಕ್ಕೂ ಸಿದ್ಧರಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ. ಈ ಬಗ್ಗೆ ಸಿನಿಪ್ರಿಯರ ವಲಯದಲ್ಲಿ ಚರ್ಚೆ ಆಗುತ್ತಿದೆ.
ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾ 2016ರ ಡಿಸೆಂಬರ್ನಲ್ಲಿ ತೆರೆಕಂಡು ಸೂಪರ್ ಹಿಟ್ ಆಯಿತು. ಕೂಡಲೇ ಅದರ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬಂತು. ಬಾಲಿವುಡ್ಗೂ ಆ ಚಿತ್ರ ರಿಮೇಕ್ ಆಗಲಿದೆ ಎಂಬ ಮಾತುಗಳು ಕೇಳಿಬಂದವು. ಸ್ಟಾರ್ ನಟ ಕಾರ್ತಿಕ್ ಆರ್ಯನ್ ಮತ್ತು ಜಾಕ್ವಲಿನ್ ಫರ್ನಾಂಡಿಸ್ ಅವರು ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ಸಿನಿಮಾ ಸೆಟ್ಟೇರಲೇ ಇಲ್ಲ.
ಈಗ ರಶ್ಮಿಕಾ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಒಂದು ವೇಳೆ ಕಿರಿಕ್ ಪಾರ್ಟಿ ರಿಮೇಕ್ ಸೆಟ್ಟೇರಿದರೆ ಅದರಲ್ಲಿ ನೀವು ನಾಯಕಿಯಾಗಿ ನಟಿಸುತ್ತೀರಾ ಎಂಬ ಪ್ರಶ್ನೆ ಅವರಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಎದುರಾಗಿದೆ. ಅದಕ್ಕೆ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ‘ಖಂಡಿತವಾಗಿಯೂ ನಟಿಸುವುದಿಲ್ಲ. ಒಮ್ಮೆ ಆ ಪಾತ್ರದಲ್ಲಿ ನಟಿಸಿ, ಅದರ ಭಾವನೆಗಳನ್ನು ಫೀಲ್ ಮಾಡಿಕೊಂಡಿದ್ದೇನೆ. ಮತ್ತೆ ಅದನ್ನೇ ಮಾಡಿದರೆ ಹೊಸತನ ನೀಡಲು ನನ್ನಲ್ಲಿ ಏನೂ ಇಲ್ಲ. ಹೊಸ ಕಥೆಗಳ ಮೂಲಕ ಹೊಸ ಅನುಭವವನ್ನು ಪಡೆಯುವ ಅವಕಾಶ ನನ್ನೆದುರು ಇರುವಾಗ ಮತ್ತೆ ನಾನೇಕೆ ಹಳೇ ಅನುಭವಕ್ಕೆ ಗಂಟುಬೀಳಲಿ?’ ಎಂದಿದ್ದಾರೆ ರಶ್ಮಿಕಾ.
‘ಈಗ ನಾನು ಹೊಸ ಕಥೆಗಳನ್ನು ಹೇಳಬೇಕು. ಕಿರಿಕ್ ಪಾರ್ಟಿ ಮಾತ್ರವಲ್ಲದೆ, ನನ್ನದೇ ಬೇರೆ ಯಾವ ಸಿನಿಮಾಗಳ ರಿಮೇಕ್ನಲ್ಲಿಯೂ ನಾನು ನಟಿಸುವುದಿಲ್ಲ’ ಎಂದು ರಶ್ಮಿಕಾ ಹೇಳಿದ್ದಾರೆ. ಸದ್ಯ ಅವರು ಕೈಯಲ್ಲಿ ಹಲವು ಸಿನಿಮಾಗಳಿವೆ. ಅಲ್ಲು ಅರ್ಜುನ್ ಜೊತೆ ನಟಿಸಿರುವ ಪುಷ್ಪ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬರಲಿದೆ. ಮೊದಲನೇ ಪಾರ್ಟ್ಗೆ ಪುಷ್ಪ ಎಂಬ ಹೆಸರೇ ಇರಲಿದ್ದು, ಎರಡನೇ ಪಾರ್ಟ್ಗೆ ಶೀರ್ಷಿಕೆ ಬದಲಾಯಿಸಲು ನಿರ್ದೇಶಕರು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇದನ್ನೂ ಓದಿ:
ತಮಿಳು ಹುಡುಗನನ್ನು ಮದುವೆ ಆಗ್ತಾರಾ ರಶ್ಮಿಕಾ ಮಂದಣ್ಣ? ಹರಿದಾಡುತ್ತಿದೆ ಹೊಸ ಗಾಸಿಪ್
Rashmika Mandanna: ವಿಜಯ್ ದೇವರಕೊಂಡ ಅಲ್ಲ; ಉಂಗುರ ತೋರಿಸಿ ಬಾಯ್ಫ್ರೆಂಡ್ ಯಾರು ಅಂತ ಹೇಳಿದ ರಶ್ಮಿಕಾ