ಕಾಂತಾರ (Kantara) ಸಿನಿಮಾದ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಬಹುವಾಗಿ ಚರ್ಚೆಯಲ್ಲಿದ್ದಾರೆ. ಅವರ ಪ್ರತಿ ಹೇಳಿಕೆ, ಹಾಕುವ ಬಟ್ಟೆಗಳನ್ನೂ ಗಮನಿಸಿ ಅದರಲ್ಲೊಂದು ‘ಸ್ಟೇಟ್ಮೆಂಟ್’ ಹುಡುಕಲಾಗುತ್ತಿದೆ. ಕಾಂತಾರ ಸಿನಿಮಾವನ್ನು ದೊಡ್ಡ ಸಂಖ್ಯೆಯ ಸಿನಿಮಾ ಪ್ರೇಮಿಗಳು ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ ಅದೇ ಸಿನಿಮಾದ ಚುಂಗು ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಎಡ-ಬಲ ಪಂಥಗಳವರು ಕಿತ್ತಾಡಿದ್ದೂ ಇದೆ, ರಿಷಬ್ ಶೆಟ್ಟಿಯನ್ನು ಒಂದು ಪಕ್ಷದ ವಕ್ತಾರನಂತೆ ಬಿಂಬಿಸಿದ ಉದಾಹರಣೆಗಳೂ ಇವೆ. ಇದೆಲ್ಲದರ ನಡುವೆ ಇಂದು ರಿಷಬ್ ಶೆಟ್ಟಿ ಹಠಾತ್ತನೇ ತಮ್ಮ ರಾಜಕೀಯ (Politics) ಪ್ರವೇಶದ ಬಗ್ಗೆ ಟ್ವೀಟ್ ಒಂದನ್ನು ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ, ವಿಶ್ವಸಂಸ್ಥೆಗೆ ಹೋಗಿದ್ದಾಗ ಅಲ್ಲಿ ತೆಗೆಸಿಕೊಂಡಿದ್ದ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಮೋದಿ ಜಾಕೆಟ್ ಮಾದರಿಯ ನೀಲಿ ಬಣ್ಣದ ಜಾಕೆಟ್ ಧರಿಸಿ ಬಿಳಿ ಬಣ್ಣದ ಕುರ್ತಾ ಧರಿಸಿ ಥೇಟ್ ರಾಜಕಾರಣಿಯಂತೆ ಕಾಣುತ್ತಿದ್ದರು ರಿಷಬ್. ಇದೀಗ ಪತ್ರಕರ್ತೆಯೊಬ್ಬರು ರಿಷಬ್ ಅವರ ಅದೇ ಚಿತ್ರವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡು, ರಿಷಬ್ ಶೆಟ್ಟಿ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಅವರು ಈ ಪೋಸ್ಟ್ ಅನ್ನು ಏಪ್ರಿಲ್ ಫೂಲ್ ಮಾಡಲೆಂದು ತಮಾಷೆಗೆ ಹಂಚಿಕೊಂಡಿದ್ದಾರಷ್ಟೆ.
ಪತ್ರಕರ್ತೆಯ ಟ್ವೀಟ್ಗೆ ತಮಾಷೆಯಾಗಿಯೇ ಪ್ರತಿಕ್ರಿಯಿಸಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ”ಸುಮ್ಮನೆ ಇರಿ ಮಾರಾರ್ಯೆ, ಸುಳ್ಳು ಸುದ್ದಿ ಇದು, ಏಪ್ರಿಲ್ 1 ಎಂದು ಸ್ಪಷ್ಟವಾಗಿ ಹೇಳಿ. ಮೊದಲೇ ಕೆಲವರು ನನ್ನನ್ನು ಒಂದು ಪಕ್ಷಕ್ಕೆ ಸೇರಿಸಿಬಿಟ್ಟಿದ್ದಾರೆ. ನಾನು ರಾಜಕೀಯಕ್ಕೆ ಎಂದೂ ಹೋಗುವುದಿಲ್ಲ” ಎಂದಿದ್ದಾರೆ. ರಿಷಬ್ ಶೆಟ್ಟರ ಈ ಟ್ವೀಟ್ಗೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸಿ ‘ಬನ್ನಿ ಶೆಟ್ರೆ, ನನ್ನ ಫುಲ್ ಬೆಂಬಲ ನಿಮಗೆ’ ಎಂದಿದ್ದಾನೆ. ಆ ವ್ಯಕ್ತಿಗೂ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ, ‘ಬೇಡ ದೇವ್ರು ನನ್ನ ಸಿನಿಮಾಕ್ಕೆ ನಿಮ್ಮ ಬೆಂಬಲ ಇದ್ರೆ ಸಾಕು’ ಎಂದಿದ್ದಾರೆ.
ರಿಷಬ್ ಶೆಟ್ಟಿಯವರ ರಾಜಕೀಯದ ಪ್ರವೇಶದ ಬಗ್ಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಬೆಂಬಲ ನೀಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿದ್ದವು. ಇದೀಗ ಸ್ವತಃ ರಿಷಬ್ ಶೆಟ್ಟಿಯವರು ಎಲ್ಲ ಊಹಾಪೋಹಗಳಿಗೆ ಟ್ವೀಟ್ ಮೂಲಕ ತೆರೆ ಎಳೆದಿದ್ದಾರೆ. ರಿಷಬ್ ಶೆಟ್ಟಿ ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಮಾತ್ರವೇ ಗಮನ ಕೇಂದ್ರೀಕರಿಸಲು ನಿರ್ಧರಿಸಿದಂತಿದೆ.
ರಿಷಬ್ ಶೆಟ್ಟಿಯವರು ಬಿಜೆಪಿ ಪಕ್ಷ ಹಾಗೂ ಅದರ ಆಲೋಚನೆಗಳ ಪರವಾಗಿ ಒಲವಿರುವವರು ಎಂದು ಬ್ರ್ಯಾಂಡ್ ಮಾಡಲಾಗಿದೆ. ಅದಕ್ಕೆ ಕಾರಣವೂ ಇದೆ. ರಿಷಬ್ ಶೆಟ್ಟಿಯವರು ಕೆಲವು ಬಾರಿ ಮೋದಿಯವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮೋದಿಯವರನ್ನು ಹೊಗಳಿ ಆ ನಂತರ ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ನೋ ಕಮೆಂಟ್ಸ್ ಎಂದಿದ್ದರು ರಿಷಬ್, ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಹಿಂದೊಮ್ಮೆ ಬೆಲ್ ಬಾಟಮ್ ಸಿನಿಮಾದ ಸಂದರ್ಭದಲ್ಲಿಯೂ ಸಹ ಬಲಪಂಥೀಯರ ವಾದ ಸರಣಿಯ ರೀತಿಯಲ್ಲಿಯೇ ಬುದ್ಧಿಜೀವಿಗಳನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು ರಿಷಬ್ ಶೆಟ್ಟಿ.
ಏನಾದರಾಗಲಿ ರಿಷಬ್ ಶೆಟ್ಟಿ, ತಾವು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಮಾತ್ರವಲ್ಲ ಎಂದಿಗೂ ರಾಜಕೀಯಕ್ಕೆ ಕಾಲಿಡುವುದಿಲ್ಲ ಎಂದಿದ್ದಾರೆ ಬೇರೆ. ಇದೇ ನಿಲವು ಅಚಲವಾಗಿ ಉಳಿಯುತ್ತದೆಯೇ? ಕಾದು ನೋಡಬೇಕಿದೆ.
Published On - 3:29 pm, Sat, 1 April 23