
ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಕಾಂತಾರ’ ಸಿನಿಮಾ, ರಿಷಬ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ನೀಡಿದೆ. ಇದೀಗ ಭಾರತದ ಹಲವು ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರುಗಳು ರಿಷಬ್ ಶೆಟ್ಟಿ ಅವರೊಟ್ಟಿಗೆ ಸಿನಿಮಾ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ತೆಲುಗಿನ ಸ್ಟಾರ್ ಯುವ ನಿರ್ದೇಶಕ ಪ್ರಶಾಂತ್ ವರ್ಮಾ ರಿಷಬ್ ಅವರಿಗಾಗಿ ‘ಜೈ ಹನುಮಾನ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ರಿಷಬ್ ಅವರು ಬಾಲಿವುಡ್ ಸಿನಿಮಾ ಒಂದರಲ್ಲೂ ನಟಿಸುತ್ತಿದ್ದಾರೆ. ಇದೀಗ ಮಲಯಾಳಂನ ಸ್ಟಾರ್ ನಿರ್ದೇಶಕರೊಬ್ಬರು ರಿಷಬ್ ಅವರಿಗೆ ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಅದೂ ಕೇವಲ ಒಂದಲ್ಲ, ಎರಡು ಸಿನಿಮಾ.
‘ಕಾಂತಾರ’ ಖ್ಯಾತಿಯ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಲಯಾಳಂನ ಬ್ಲಾಕ್‌ಬಸ್ಟರ್ ‘ಮಂಜುಮ್ಮೇಲ್ ಬಾಯ್ಸ್’, ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಹಿಟ್ ಆದ ‘ಬಾಲನ್’ ಸಿನಿಮಾದ ನಿರ್ದೇಶಕ ಚಿದಂಬರಂ ಅವರೊಂದಿಗೆ ಕೈಜೋಡಿಸಿದ್ದು, ಹೊಸ ಸಿನಿಮಾಗೆ ಮುಂದಾಗಿದ್ದಾರೆ. ಈ ಪ್ರತಿಭಾವಂತ ಜೋಡಿಯು ಒಟ್ಟು ಎರಡು ಚಿತ್ರಗಳಿಗಾಗಿ ಒಂದಾಗುತ್ತಿದ್ದು, ಮೊದಲ ಯೋಜನೆಯಾಗಿ ಕ್ರೀಡಾ ಆಧಾರಿತ (ಸ್ಪೋರ್ಟ್ಸ್ ಡ್ರಾಮಾ) ಸಿನಿಮಾವನ್ನು ತೆರೆಗೆ ತರಲಿದೆ. ಪ್ರಸ್ತುತ ಈ ಚಿತ್ರದ ಪೂರ್ವಸಿದ್ಧತೆಗಳು ಭರದಿಂದ ಸಾಗಿದ್ದು, ಮುಂದಿನ ವರ್ಷ ಸೆಟ್ಟೇರುವ ನಿರೀಕ್ಷೆಯಿದೆ. ಈ ಬೃಹತ್ ಯೋಜನೆಗೆ ಶಿಬು ತಮೀನ್ಸ್ ಬಂಡವಾಳ ಹೂಡಲಿದ್ದಾರೆ.
ಇದನ್ನೂ ಓದಿ:ಸೈಮಾ ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡಿದ ಧ್ರುವ ವಿಕ್ರಮ್ ; ರಿಷಬ್ ಶೆಟ್ಟಿ ಬಗ್ಗೆ ಮೆಚ್ಚುಗೆ
ಭಿನ್ನ ಪ್ರಕಾರದ ಕಥೆಗಳೊಂದಿಗೆ ಪ್ರಯೋಗ ಮಾಡುತ್ತಿರುವ ರಿಷಬ್ ಶೆಟ್ಟಿ ಈ ಸ್ಪೋರ್ಟ್ಸ್ ಡ್ರಾಮಾ ಮೂಲಕ ಮತ್ತೊಮ್ಮೆ ಹೊಸ ಜಾನರ್‌ಗೆ ಕಾಲಿಡುತ್ತಿದ್ದಾರೆ. ರಿಷಬ್ ಅವರು ಹೊಸ ಹೊಸ ಜಾನರ್ಗಳ ಜೊತೆಗೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇನ್ನು ಚಿದಂಬಂರಂ ಸಹ ಅದ್ಭುತ ನಿರ್ದೇಶಕ, ‘ಮಂಜ್ಞುಮೆಲ್ ಬಾಯ್ಸ್’ ಮತ್ತು ‘ಬಾಲನ್’ ಸಿನಿಮಾ ಮೂಲಕ ತಮ್ಮ ಪ್ರತಿಭೆಯನ್ನು ಸಾರಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗೆ ಕೈಜೋಡಿಸಲು ಮುಂದಾಗಿದ್ದು, ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ.
ಪ್ರಸ್ತುತ ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ ಸಿನಿಮಾನಲ್ಲಿ ನಟನೆ ಮಾಡುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅದಾದ ಬಳಿಕ ಶಿವಾಜಿ ಜೀವನ ಆಧರಿತ ಹಿಂದಿ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ. ಆ ಸಿನಿಮಾದ ಬಳಿಕ ಅವರು ‘ಮಂಜ್ಞುಮೆಲ್ ಬಾಯ್ಸ್’ ನಿರ್ದೇಶಕನ ಸಿನಿಮಾನಲ್ಲಿ ನಟಿಸುವ ಸಾಧ್ಯತೆ ಇದೆ. ‘ಕಾಂತಾರ 3’ ಸಿನಿಮಾ ಸಹ ಅವರ ಕೈಯಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ