‘ನಾಲ್ಕು ನೋಟೀಸ್ ಬಂದಿದೆ’: ‘ಕಾಟೇರ’ ಕಲೆಕ್ಷನ್ ಬಗ್ಗೆ ರಾಕ್​ಲೈನ್ ಮಾತು

Rockline Venkatesh: ‘ಕಾಟೇರ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾದ ಕಲೆಕ್ಷನ್ ಬಗ್ಗೆ ಹಲವು ಊಹಾಪೋಹ ಹರಿದಾಡುತ್ತಿದೆ. ಸಿನಿಮಾದ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ‘ಕಾಟೇರ’ ಕಲೆಕ್ಷನ್ ಬಗ್ಗೆ ಮಾತನಾಡಿದ್ದಾರೆ.

‘ನಾಲ್ಕು ನೋಟೀಸ್ ಬಂದಿದೆ’: ‘ಕಾಟೇರ’ ಕಲೆಕ್ಷನ್ ಬಗ್ಗೆ ರಾಕ್​ಲೈನ್ ಮಾತು

Updated on: Feb 20, 2024 | 5:27 PM

ದರ್ಶನ್ (Darshan Thoogudeepa) ನಟನೆಯ ‘ಕಾಟೇರ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಇಂದು ಸಿನಿಮಾದ 50ನೇ ದಿನದ ಸಂಭ್ರಮಾಚರಣೆಯನ್ನು ಪ್ರಸನ್ನ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. ದರ್ಶನ್, ಅನುರಾಧಾ, ಶ್ರುತಿ ಇನ್ನೂ ಹಲವು ನಟರ ಜೊತೆಗೆ, ಚಿತ್ರದ ತಾಂತ್ರಿಕ ತಂಡವೂ ಕಾರ್ಯಕ್ರಮದಲ್ಲಿ ಹಾಜರಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿನಿಮಾ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್, ‘ಕಾಟೇರ’ ಸಿನಿಮಾ ಆಗಿದ್ದು ಹೇಗೆ ಎಂಬುದನ್ನು ಮಾತನಾಡುವ ಜೊತೆಗೆ ಸಿನಿಮಾದ ಕಲೆಕ್ಷನ್ ಬಗ್ಗೆಯೂ ಮಾತನಾಡಿದರು. ಸಿನಿಮಾದ ಕಲೆಕ್ಷನ್​ನಿಂದ ತಾವು ಸಂಕಷ್ಟಕ್ಕೆ ಸಿಲುಕಿರುವುದಾಗಿಯೂ ಹೇಳಿದರು.

‘ಕಾಟೇರ’ ಸಿನಿಮಾ ದೊಡ್ಡ ಹಿಟ್ ಆಗಿದೆ. ದರ್ಶನ್​ರ ಈ ವರೆಗಿನ ಸಿನಿಮಾಗಳಲ್ಲಿ ಅತಿ ದೊಡ್ಡ ಕಲೆಕ್ಷನ್ ಮಾಡಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದ ಕಲೆಕ್ಷನ್ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ‘ಕಾಟೇರ’ 300 ಕೋಟಿ ಕಲೆಕ್ಷನ್ ಮಾಡಿದೆ ಎಂದು ಕೆಲವರು, ‘ಕಾಟೇರ’ 250 ಕೋಟಿ ಕಲೆಕ್ಷನ್ ಮಾಡಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಇಂದು (ಫೆಬ್ರವರಿ 20) ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಈ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ:ದರ್ಶನ್​ ವರ್ಸಸ್​ ಉಮಾಪತಿ: ‘ಕಾಟೇರ’ ಶೀರ್ಷಿಕೆ ಬಗ್ಗೆ ​ಕೊನೆಗೂ ಮೌನ ಮುರಿದ ಡಿ ಬಾಸ್​

‘ಏನೋ ಮಾಡಲು ಹೋಗಿ ‘ಕಾಟೇರ’ ಸಿನಿಮಾ ಆಯ್ತು. ‘ಮದಕರಿ ನಾಯ್ಕ’ ಸಿನಿಮಾ ಮಾಡಲು ಪ್ರಯತ್ನಿಸಿದೆವು, ಅದು ಪೂರ್ಣವಾಗಲಿಲ್ಲ. ಆದರೆ ಅದು ನನ್ನ ಕನಸಿಕ ಯೋಜನೆ, ಆ ಸಿನಿಮಾವನ್ನು ಮಾಡಿಯೇ ಮಾಡುತ್ತೇನೆ. ಯಾವಾಗ ಆಗುತ್ತದೆಯೋ ನೋಡೋಣ. ಖಂಡಿತ ಮಾಡುತ್ತೇನೆ’ ಎಂದ ರಾಕ್​ಲೈನ್ ವೆಂಕಟೇಶ್, ‘ಕಾಟೇರ’ ಸಿನಿಮಾದ ಕಲೆಕ್ಷನ್​ ಬಗ್ಗೆ ಹಲವರು ಹಲವು ರೀತಿ ಹೇಳುತ್ತಿದ್ದಾರೆ. ಮಾಧ್ಯಮಗಳವರು ಒಬ್ಬೊಬ್ಬರು ಒಂದೊಂದು ಲೆಕ್ಕ ಕೊಟ್ಟಿದ್ದಾರೆ. ಇದರಿಂದ ನನಗೆ ಸಂಕಷ್ಟ ಎದುರಾಗಿದೆ’ ಎಂದರು.

‘ಕಾಟೇರ’ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಹರಿದಾಡುತ್ತಿರುವ ಕಾರಣಕ್ಕೆ ನನಗೆ ನಾಲ್ಕು ನೋಟೀಸ್​ಗಳು ಬಂದಿವೆ. ಮೊದಲೆಲ್ಲ ತೆರಿಗೆ ಇಲಾಖೆಯವರು ಮಾತ್ರವೇ ನೊಟೀಸ್ ಕಳಿಸುತ್ತಿದ್ದರು. ಆದರೆ ಈಗ ಇಡಿ ಯವರೂ ಸಹ ಬಂದಿದ್ದಾರೆ. ಅವರೂ ಬರ್ತಿದ್ದಾರೆ. ನನಗೇನಿಲ್ಲ, ಯಾರ್ಯಾರು ‘ಕಾಟೇರ’ ಸಿನಿಮಾದ ಕಲೆಕ್ಷನ್​ ಬಗ್ಗೆ ಯಾರು ಯಾರು ಮಾಹಿತಿ ಹಂಚಿಕೊಂಡಿದ್ದಾರೊ ಅವರ ಲಿಂಕ್ ಹಾಗೂ ಅವರ ಫೋನ್ ನಂಬರ್ ಅನ್ನು ಇಡಿ ಹಾಗೂ ತೆರಿಗೆ ಇಲಾಖೆಯವರಿಗೆ ಕೊಡ್ತೀನಿ. ಯಾರು ಮಾಹಿತಿ ಹಂಚಿಕೊಂಡಿರುತ್ತಾರೊ ಅವರನ್ನು ಕಚೇರಿಗೋ, ಪೊಲೀಸ್ ಠಾಣೆಗೋ ಕರೆಸಿ ವಿಚಾರಣೆ ನಡೆಸಿಕೊಳ್ಳಲಿ’ ಎಂದರು.

‘ಕಾಟೇರ’ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ ಎಂದು ನನಗೆ ಪೂರ್ತಿ ಮಾಹಿತಿ ಇದೆ. ಆ ಮಾಹಿತಿ ನನ್ನ ಕಚೇರಿಯಲ್ಲಿದೆ. ಯಾರಿಗೆ ಬೇಕಾದರೂ ನನ್ನ ಕಚೇರಿಗೆ ಬಂದರೆ ‘ಕಾಟೇರ’ ಸಿನಿಮಾದ ಕಲೆಕ್ಷನ್ ಬಗ್ಗೆ ಪೂರ್ತಿ ಮಾಹಿತಿ ಕೊಡ್ತೀನಿ’ ಎಂದಿದ್ದಾರೆ ರಾಕ್​ಲೈನ್ ವೆಂಕಟೇಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Tue, 20 February 24