
ಎಲ್ಲವೂ ಅಂದುಕೊಂಡಂತೆ ನಡೆದರೆ ‘ಸಲಾರ್’ ಸಿನಿಮಾ (Salaar Movie) ಸೆಪ್ಟೆಂಬರ್ 28ರಂದು ರಿಲೀಸ್ ಆಗಬೇಕಿತ್ತು. ಈ ಚಿತ್ರ ರಿಲೀಸ್ ಆಗೋಕೆ ಇನ್ನು ಒಂದು ತಿಂಗಳು ಕೂಡ ಬಾಕಿ ಇಲ್ಲ. ಹೀಗಿರುವಾಗಲೇ ಚಿತ್ರದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಬಾಲಿವುಡ್ ಬಾಕ್ಸ್ ಆಫೀಸ್ ಟ್ರೇಡ್ ವಿಷ್ಲೇಶಕ ತರಣ್ ಆದರ್ಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಚಿತ್ರತಂಡದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದೊಮ್ಮೆ ಈ ವಿಚಾರ ನಿಜವಾದಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ ಆಗಲಿದೆ.
‘ಸಲಾರ್’ ಚಿತ್ರ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಹಲವು ಕಾರಣದಿಂದ ಸಿನಿಮಾ ಕೆಲಸ ವಿಳಂಬ ಆಯಿತು. ‘ಕೆಜಿಎಫ್ 2’ ಕೆಲಸದಲ್ಲಿ ಪ್ರಶಾಂತ್ ನೀಲ್ ತೊಡಗಿಕೊಂಡರು. ಜೊತೆಗೆ ಪ್ರಭಾಸ್ ಸೆಟ್ನಲ್ಲಿ ಗಾಯಕ್ಕೆ ಒಳಗಾಗಿ ವಿಶ್ರಾಂತಿ ಪಡೆಯಬೇಕಾಯಿತು. ಇನ್ನೂ ಹಲವು ಕಾರಣದಿಂದ ಸಿನಿಮಾ ಕೆಲಸ ವಿಳಂಬ ಆಗುತ್ತಲೇ ಇತ್ತು. ಚಿತ್ರ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎಂದು ತಂಡ ಹೇಳಿಕೊಂಡಿತ್ತು. ಆದರೆ, ಸಿನಿಮಾನ ಅಂದುಕೊಂಡ ದಿನಾಂಕದಂದು ತೆರೆಗೆ ತರೋಕೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ತರಣ್ ಆದರ್ಶ್ ಅವರು, ‘ಸಲಾರ್ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿರುವುದು ಹೌದು’ ಎಂದಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ಪ್ರಭಾಸ್ ಅಭಿಮಾನಿಗಳು ಅಳುತ್ತಿರುವ ಎಮೋಜಿಗಳನ್ನು ಹಾಕಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಸಲಾರ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಗ್ರಾಫಿಕ್ಸ್ ಕೆಲಸಗಳು ಇನ್ನು ಬಾಕಿ ಇವೆ ಎನ್ನಲಾಗಿದೆ. ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೂಡ ನೀಡಬೇಕಿದೆ. ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ಬೇರೆ ಬೇರೆ ನಗರಗಳಿಗೆ ತೆರಳಿ ಪ್ರಮೋಷನ್ ಮಾಡಬೇಕಿದೆ. ಇದಕ್ಕೆ ಒಂದು ತಿಂಗಳು ಸಮಯ ಸಾಲುವುದಿಲ್ಲ. ಈ ಕಾರಣದಿಂದಲೇ ‘ಸಲಾರ್’ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ರಾಜಮೌಳಿ ನಟನೆ? ಹಿರಿದಾಗುತ್ತಿದೆ ಪ್ರಭಾಸ್ ಸಿನಿಮಾದ ಪಾತ್ರವರ್ಗ
ಪ್ರಭಾಸ್ ಅವರು ‘ಕಲ್ಕಿ 2898 ಎಡಿ’ ಚಿತ್ರದ ಶೂಟಿಂಗ್ನಲ್ಲೂ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟಿಂಗ್ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ. ಭರ್ಜರಿ ಸೆಟ್ ಹಾಕಿ ಚಿತ್ರೀಕರಿಸಲಾಗುತ್ತಿದೆ. ನಾಗ್ ಅಶ್ವಿನ್ ಅವರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ