ಸಿನಿಮಾ ಕ್ಷೇತ್ರದಲ್ಲಿ ಕಣಗಾಲರ ಪಾತ್ರ ಅಪಾರ. ಇಂದು (ಡಿ.10) ಪುಟ್ಟಣ್ಣ ಕಣಗಾಲರು ಹುಟ್ಟಿದ ದಿನ. ನಿರ್ದೇಶನದಲ್ಲಿ, ಕಥೆಯ ಆಯ್ಕೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಕೀರ್ತಿ ಪುಣ್ಣನವರದ್ದು. ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್. ಕನ್ನಡದಲ್ಲಿ ಅಮೋಘವಾದ ಸಿನಿಮಾಗಳನ್ನು ನೀಡಿ ಕನ್ನಡ ಸಿನಿಮಾಗಳನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಮಹಾನ್ ವ್ಯಕ್ತಿ.
ಸಿನಿಮಾ ಒಂದು ಸೃಜನಶೀಲ ಕಲೆ. ನಟನೆ, ಸಂಗೀತ, ನೃತ್ಯ, ಕಲೆ, ಕಥೆ ಜೊತೆಗೆ ತಂತ್ರಜ್ಞಾನ ಹೀಗೆ ಹಲವಾರು ಕಲೆಗಳ ಒಕ್ಕೂಟ ಚಲನಚಿತ್ರ. ನೋಡುಗರ ಮನ ಮುಟ್ಟುವಂತೆ ದಾಟಿಸುವ ಕಲೆಯೂ ಹೌದು. ಈ ನಿಟ್ಟಿನಲ್ಲಿ ಕಣಗಾಲರ ಚಿತ್ರಗಳು ಜನಪ್ರಿಯವಾಗಿವೆ.
ಒಬ್ಬ ನಿರ್ದೇಶಕ ತನ್ನ ಚಿತ್ರಗಳ ಸಾಮಾನ್ಯ ನಿರೂಪಣೆಯನ್ನು ದೃಶ್ಯದ ಮೂಲಕ ನೋಡುಗರಿಗೆ ಸಲ್ಲುವಂತೆ ಮಾಡುತ್ತಾನೆ. ಪುಟ್ಟಣ್ಣನವರ ನಿರ್ದೇಶನದ ಪ್ರಮುಖ ಚಿತ್ರ ಬೆಳ್ಳಿಮೋಡ. ಪ್ರಸಿದ್ಧ ಲೇಖಕಿ ತ್ರಿವೇಣಿಯವರ ಕಥೆಯನ್ನಾಧರಿಸಿ ಅವರು ಈ ಚಿತ್ರ ನಿರ್ಮಿಸಿದರು. ಸಮಾಜದಲ್ಲಿ ಓರ್ವ ಮಹಿಳೆಯ ಸ್ಥಾನಮಾನ ಮತ್ತು ಸಮಾಜದಲ್ಲಿ ಮಹಿಳೆಯನ್ನು ಕಾಣುವ ರೀತಿಯ ಕುರಿತು ಬೆಳ್ಳಿಮೋಡ ತಿಳಿಸಿಕೊಡುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಯ ಕುರಿತು ದೃಶ್ಯದ ಮೂಲಕ ಜನರಿಗೇ ತಿಳಿಸುವ ಪ್ರಯತ್ನವನ್ನು ಕಣಗಾಲರು ಮಾಡಿದರು.
ಹೆಣ್ಣಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು, ಹೆಣ್ಣುನ್ನು ಒಂದು ಸಮಾಜ ನೋಡುವ ರೀತಿ ಮತ್ತು ಮಾನಸಿಕ ದೌರ್ಬಲ್ಯ ಹೊಂದಿದ್ದ ಮಹಿಳೆಯನ್ನು ಸಮಾಜ ನೋಡುವ ದೃಷ್ಟಿಕೋನದ ಕುರಿತು ಶರಪಂಜರ ಚಿತ್ರದಲ್ಲಿ ತೋರಿಸಿಕೊಟ್ಟರು.
ಸಿನಿಮಾ ನೋಡುಗನ ಮನಸ್ಥಿತಿಗೆ ಹೊಂದುವಂತೆ ಹಾಗೂ ಆತನು ಪ್ರತಿನಿತ್ಯ ನೋಡುವ ಘಟನೆಗಳನ್ನು ಚಿತ್ರದ ಮೂಲಕ ತೋರಿಸಿಕೊಡುವ ಪ್ರಯತ್ನವನ್ನು ಕಣಗಾಲರು ಮಾಡಿದ್ದಾರೆ. ಸಮಾಜದ ಕೆಲವು ಮೂಢನಂಬಿಕೆಗಳಿಂದಾಗುವ ಅನಾಹುತಗಳನ್ನು ಜನರ ಮುಂದೆ ಪ್ರತಿಬಿಂಬಿಸುವ ಪ್ರಯತ್ನ ಮಾಡಿದವರು ಕಣಗಾಲರು. ಹಾಗಾಗಿ ಕಣಗಾಲರ ಚಿತ್ರ ಅಷ್ಟು ಪ್ರಾಮುಖ್ಯತೆಯನ್ನು ಪಡೆಯಲು ಸಾಧ್ಯವಾಯಿತು
ಪುಟ್ಟಣ್ಣ ಮಾಡಿದ ‘ಕಥಾ ಸಂಗಮ’ದಂತಹ ಪ್ರಯತ್ನಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಕಥೆಗಳು ಇಲ್ಲ ಅಂತ ಅಲ್ಲ. ಕಥೆಯನ್ನು ಹುಡುಕುವುದರಲ್ಲಿ ಈಗಿನ ನಿರ್ದೇಶಕರು ಸಮಯ ತೆಗುದುಕೊಳ್ಳುತ್ತಿದ್ದಾರೆ. ಕಾದಂಬರಿಯಿಂದ ಕಥೆಗಳ್ನಾಧರಿಸಿ ಸಿನಿಮಾ ಚಿತ್ರಿಸಿ ಕಣಗಾಲರು ಗೆದ್ದರು. ಮಹಿಳೆಯನ್ನು ರಂಗಭೂಮಿಯಿಂದ ಸಿನಿಮಾ ರಂಗಕ್ಕೆ ಪರಿಚಯಿಸಿ ಪ್ರಾಧಾನ್ಯತೆ ನೀಡಿದ ಮಹಾನ್ ಸಾಧಕರು ಎನಿಸಿಕೊಂಡರು.
ಕಣಗಾಲರ ಹೆಚ್ಚಿನ ಚಿತ್ರಗಳು ಇತಿಹಾಸವನ್ನಾಧರಿಸಿವೆ. ಸಿನಿಮಾಗಳಲ್ಲಿ ಕಥೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಲು ಅವರು ಯತ್ನಿಸಿದರು.
ಸಿನಿಮಾ ರಂಗಕ್ಕೆ ಹೊಸ ಕಲಾವಿದರ ಪರಿಚಯಕ್ಕೆ ಮುನ್ನುಡಿ ಹಾಕಿದರು. ನಿರ್ದೇಶಕ ಮನಸ್ಸು ಮಾಡಿದರೆ, ಪಾತ್ರಗಳಿಂದ ಯಾವ ತರಹದ ನಟನೆಯನ್ನು ಬೇಕಾದರೂ ಹೊರತೆಗೆಯಬಹುದು. ನಟನೆಯಲ್ಲಿ ಆಸಕ್ತಿ ಮತ್ತು ಗೌರವವಿದ್ದರೆ, ನಟರಲ್ಲಿ ಅಭಿನಯವನ್ನು ಹೊರೆತೆಗೆಯುವ ಕೆಲಸವನ್ನು ಕಣಗಾಲರು ಮಾಡುತ್ತಿದ್ದರು. ಪ್ರಸ್ತುತ ದಿನದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳು ದೊರೆಯುತ್ತಿವೆ ಎಂದಾದರೆ ಅದಕ್ಕೆ ಪ್ರಮುಖ ಕಾರಣ ಕಣಗಾಲರು.
ಕನ್ನಡ ಸಾಹಿತ್ಯವನ್ನು ಸಿನಿಮಾಗಳಲ್ಲಿ ಪುಟ್ಟಣ್ಣ ಸಕ್ರಿಯರಾಗಿ ಬಳಸಿಕೊಂಡರು. ಮಾತೃಭಾಷೆಗೆ ಹೆಚ್ಚಿನ ಮಹತ್ವವನ್ನಿತ್ತರು. ಕನ್ನಡ ಸಾಹಿತ್ಯ ಯಾವ ವಿಶ್ವ ಸಾಹಿತ್ಯಕ್ಕೂ ಕಡಿಮೆ ಇಲ್ಲ ಎಂದು ಜಗತ್ತಿಗೆ ಸಿನಿಮಾ ಮೂಲಕ ಸಾರಿದರು.
ಕಣಗಾಲರ ಚಿತ್ರಗಳಲ್ಲಿ ಬೆಳ್ಳಿಮೋಡ ಮತ್ತು ಮಸಣದ ಹೂವು ಅಭೂತಪೂರ್ವ. ಆ ಸಿನಿಮಾಗಳಲ್ಲಿ ಬಳಸಿದ ಸಂಭಾಷಣೆ ನನಗೆ ಇಷ್ಟ. ರಂಗನಾಯಕಿಯಲ್ಲಿ ಅವರು ಬಳಸಿಕೊಂಡ ಜೀವನ ಚರಿತ್ರೆ ಆಧಾರಿತ ಪಾತ್ರಗಳು, ಕಲಾವಿದನ ಸಂಪೂರ್ಣ ಜೀವನವನ್ನು ಕಟ್ಟಿಕೊಡುವ ಪಾತ್ರಗಳು ಪ್ರಸ್ತುತ ಸಿನಿಮಾಗಳಲ್ಲಿ ಬೇಕು. ಈ ನಿಟ್ಟಿನಲ್ಲಿ ಕಣಗಾಲರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳಲೇಬೇಕು. ಚಿತ್ರರಂಗದಲ್ಲಿ ನಾವು ಕೆಲಸ ಮಾಡುತ್ತಿರುವುದರಿಂದ ಕಣಗಾಲರಿಗೆ ಚಿರರುಣಿ ಎಂದು ಸಹ ನಿರ್ದೇಶಕ ಮತ್ತು ಸಂಭಾಷಣಾಕಾರ ಪ್ರವೀಣ್ ಜಿ. ‘ಟಿವಿ 9’ ಜೊತೆ ಅಭಿಪ್ರಾಯ ಹಂಚಿಕೊಂಡರು.
ಮಲಯಾಳಂ, ತೆಲಗು, ಹಿಂದಿ ಹೀಗೆ ಅನೇಕ ಭಾಷೆಯ ಸಿನಿಮಾಗಳನ್ನು ಪುಟ್ಟಣ್ಣ ಕಣಗಾಲರು ಚಿತ್ರಿಸಿದ್ದಾರೆ. ಪುಟ್ಟಣ್ಣ ಕಣಗಾಲರಂತಹ ನಿರ್ದೇಶಕರು ನಮ್ಮ ಚಲನಚಿತ್ರ ರಂಗಕ್ಕೆ ಅವಶ್ಯಕ. ಅದ್ಭುತ ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗವನ್ನು ಬೆಳೆಸುವಲ್ಲಿ ಇವರ ಕೊಡುಗೆ ಅಪಾರ. ಇಂದು (ಡಿ.1) ಕಣಗಾಲರು ಹುಟ್ಟಿದ ದಿನ. ಅವರು ನಮ್ಮೊಡನೆ ಸದಾಕಾಲ ಜೀವಿಸುತ್ತಿರುತ್ತಾರೆ ಎಂದು ಸಿನಿಮಾ ಪತ್ರಕರ್ತ ಶಶಿಧರ್ ಚಿತ್ರದುರ್ಗ ಅಭಿಪ್ರಾಯಪಟ್ಟರು.
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಪುಟ್ಟಣ್ಣ ಕಣಗಾಲರ ನೆನಪಿನಲ್ಲಿ ಹುಟ್ಟಿದ ದಿನದಂದು ಶುಭಾಶಯ ಕೋರಿದ್ದಾರೆ.
Happy birthday to The Legend of Indian Cinema #PuttannaKanagal pic.twitter.com/eawy5Uz8pD
— Santhosh Ananddram (@SanthoshAnand15) December 1, 2020