ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಸೊಸೆ, ರಾಮ್ಚರಣ್ ತೇಜ ಅವರ ಪತ್ನಿ ಉಪಾಸನಾ ಕಮಿನೇನಿ ಕೋನಿಡೇಲಾ ಅವರೀಗ ಆನ್ಲೈನ್ನಲ್ಲಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಆ ಸಾಹಸಕ್ಕೆ ಸದ್ಯ ಟ್ರೆಂಡಿಂಗ್ನಲ್ಲಿರುವ ಕನ್ನಡತಿ, ಸೌತ್ ಸೆನ್ಸೇಷನಲ್ ರಶ್ಮಿಕಾ ಮಂದಣ್ಣ ಕೈ ಜೋಡಿಸಿದ್ದಾರೆ.
ಆರೋಗ್ಯ, ಲೈಫ್ಸ್ಟೈಲ್, ಮಾನಸಿಕ ಮತ್ತು ದೈಹಿಕ ಆರೋಗ್ಯ, ಪ್ರಸ್ತುತ ಟ್ರೆಂಡಿಂಗ್ ವಿಚಾರಗಳನ್ನು ಯೂಆರ್ಲೈಫ್ ಮೂಲಕ ಉಪಾಸನಾ ಹೇಳಹೊರಟಿದ್ದಾರೆ. URLife ಹೆಸರಿನ ನೂತನ ವೆಬ್ಸೈಟ್ ತೆರೆದಿದ್ದು, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಉಪಾಸನಾ ಉಸ್ತುವಾರಿ ವಹಿಸಿಕೊಂಡರೆ, ಈ ಹಬ್ಬದ ಸಮಯದಲ್ಲಿ ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.
ಈ ವೆಬ್ಸೈಟ್ನಲ್ಲಿ ಏನೆಲ್ಲಾ ಲಭ್ಯ..
ಅಂದಹಾಗೆ, URLife ಎಂಬುದು ಒಂದು ಆರೋಗ್ಯಕರ ವೇದಿಕೆ. ಇಲ್ಲಿ ಆಯ್ದ ಕೆಲ ಕ್ಷೇತ್ರಗಳ ನುರಿತ ಪರಣಿತರು, ವೈದ್ಯರು ಸದ್ಯದ ಲೈಫ್ಸ್ಟೈಲ್, ತಂತ್ರಜ್ಷಾನದ ಬಗ್ಗೆ ಈ ವೇದಿಕೆ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಓದುಗರಿಗೆ ಅತ್ಯುತ್ತಮವಾದ ಡಯಟ್ ಟಿಪ್ಸ್, ನುರಿತವರಿಂದ ಉಪಯುಕ್ತ ಮಾಹಿತಿ, ಉಚಿತ ತರಗತಿಗಳು, ವಿಡಿಯೋ ಮಾಹಿತಿ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಬೆರಳ ತುದಿಯಲ್ಲಿಯೇ URLife ನಲ್ಲಿ ಲಭ್ಯವಾಗಲಿದೆ.
ಈ ವಿಶೇಷಗಳ ಗುಚ್ಛದ URLife ಗೆ ಈ ಸಲದ ಗೆಸ್ಟ್ ಎಡಿಟರ್ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದು, ಅವರನ್ನೇ ಆಯ್ದುಕೊಳ್ಳುವುದಕ್ಕೆ ಒಂದಷ್ಟು ಅಂಶಗಳನ್ನು ಸ್ವತಃ ಉಪಾಸನಾ ಹೇಳಿಕೊಂಡಿದ್ದಾರೆ. ರಶ್ಮಿಕಾ ಸದಾ ನಗುಮೊಗದ ಮತ್ತು ಪಾಸಿಟಿವ್ ವೈಬ್ಅನ್ನು ತನ್ನೊಳಗೆ ಇಟ್ಟುಕೊಂಡಿರುವ ನಟಿ. ಕೋಟ್ಯಂತರ ಯುವ ಪೀಳಿಗೆಯ ನೆಚ್ಚಿನ ನಟಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ನಗುವಿನ ಮೂಲಕವೇ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದಾರೆ. ಅದು URLife ನಲ್ಲಿಯೂ ಮುಂದುವರಿಯಲಿದೆ ಎಂಬುದು ಉಪಾಸನಾ ಮಾತು.
ಸೇವಿಸುವ ಆಹಾರ ಮತ್ತು ವ್ಯಾಯಾಮ, ಯೋಗದ ಬಗ್ಗೆಯೂ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿರುತ್ತಾರೆ. ಇದೀಗ ರಶ್ಮಿಕಾ ಅವರ ಲೈಫ್ಸ್ಟೈಲ್ ಬಗ್ಗೆ URife ಮಾಹಿತಿ ಬಿಚ್ಚಿಡಲಿದೆ. ಅವರ ಆರೋಗ್ಯಕರ ಜೀವನದ ಗುಟ್ಟನ್ನು ಓದುಗರಿಗೆ ಈ ಮೂಲಕ ತಲುಪಿಸಲಿದೆ. ಮಾನಸಿಕ ಆರೋಗ್ಯದ ಬಗ್ಗೆಯೂ ಇಲ್ಲಿ ಮಾಹಿತಿ ಸಿಗಲಿದೆ.
ಭಾರತೀಯ ಕಾರ್ಪೊರೇಟ್ ವಲಯದಲ್ಲಿ URLife 14 ಮಿಲಿಯನ್ ಗೂ ಅಧಿಕ ಓದುಗರನ್ನು ಒಳಗೊಂಡ ಭಾರತದ ಅತಿದೊಡ್ಡ ಆರೋಗ್ಯ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ತಜ್ಞರ ಸಲಹೆ, ಅತ್ಯಾವಶ್ಯಕ ಸಂಪಾದಕೀಯ ವಿಷಯ, ವಿವರವಾದ ಮಾಹಿತಿಯನ್ನು ಒದಗಿಸುತ್ತಿದೆ. ಭಾರತದ ಕಿರಿಯ ಮತ್ತು ಅತ್ಯಂತ ಕ್ರಿಯಾತ್ಮಕ ಯೋಗಕ್ಷೇಮ ಮೇಲ್ವಿಚಾರಕರಾದ ಉಪಾಸನ ಕೊನಿಡೆಲಾ ಅವರ ಮಾರ್ಗದರ್ಶನದಲ್ಲಿ URLife ಅಭಿವೃದ್ಧಿಪಡಿಸಲಾಗಿದೆ.
Published On - 1:09 pm, Tue, 10 November 20