‘ವಸುದೈವ ಕುಟುಂಬಕಂ ರಿಮೇಕ್ ಅಲ್ಲ, ಸ್ವಮೇಕ್’; ನಿರ್ದೇಶಕ ನಂದ ಕಿಶೋರ್ ಸ್ಪಷ್ಟನೆ
ಧ್ರುವ ಸರ್ಜಾ ನಟನೆಯ 'ವಸುದೈವ ಕುಟುಂಬಕಂ' ಸಿನಿಮಾ ರಿಮೇಕ್ ಎಂಬ ವದಂತಿಗೆ ನಿರ್ದೇಶಕ ನಂದ ಕಿಶೋರ್ ತೆರೆ ಎಳೆದಿದ್ದಾರೆ. ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ, ಧ್ರುವ ಅವರಿಗಾಗಿಯೇ ಬರೆದ ಸ್ವತಃ ಕಥೆ ಹಾಗೂ ಅಚ್ಚ ಕನ್ನಡ ಚಿತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು
- 'ವಸುದೈವ ಕುಟುಂಬಕಂ' ಸ್ವತಂತ್ರ ಕಥೆ ಎಂದ ನಂದ ಕಿಶೋರ್
- ಧ್ರುವ ಸರ್ಜಾಗಾಗಿಯೇ ಸಿದ್ಧವಾದ ಕಥೆ
- ಫ್ಯಾಮಿಲಿ ಎಮೋಷನ್ ಪಕ್ಕಾ ಎಂದ ನಿರ್ದೇಶಕ
ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ವಸುದೈವ ಕುಟುಂಬಕಂ’ ಚಿತ್ರದ ಮೊದಲ ಗ್ಲಿಂಪ್ಸ್ ಅವರ ಬರ್ತ್ಡೇ ಪ್ರಯುಕ್ತ ಅಕ್ಟೋಬರ್ 6ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೆ, ಈ ಗ್ಲಿಂಪ್ಸ್ ನೋಡಿದ ಹಲವರು ಇದು ತೆಲುಗಿನ ‘ಶ್ರೀಮಂತುಡು’ ಚಿತ್ರದ ರಿಮೇಕ್ ಇರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುಮಾಡಿದ್ದರು. ಇದೀಗ ಈ ಎಲ್ಲಾ ವದಂತಿಗಳಿಗೆ ನಿರ್ದೇಶಕ ನಂದ ಕಿಶೋರ್ ತೆರೆ ಎಳೆದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಂದ ಕಿಶೋರ್, ‘ರನ್ನ, ಮುಕುಂದ ಮುರಾರಿ, ಅಧ್ಯಕ್ಷ ಚಿತ್ರಗಳನ್ನು ಮಾಡಿದ ಮೇಲೆ ನಂದ ಕಿಶೋರ್ ಎಲ್ಲೋ ಹೊರಟುಹೋದರು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರು. ಈಗ ನಾನು ಮರಳಿದ್ದೇನೆ. ವಸುದೈವ ಕುಟುಂಬಕಂ ಪಕ್ಕಾ ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ’ ಎಂದಿದ್ದಾರೆ ಅವರು.
ಈ ಚಿತ್ರದ ಗ್ಲಿಂಪ್ಸ್ ನೋಡಿದವರಿಗೆ ತೆಲುಗಿನ ‘ಶ್ರೀಮಂತುಡು’ ಚಿತ್ರ ನೆನಪಾಗಿತ್ತು. ಇದೇ ವಿಷಯ ಇಟ್ಟುಕೊಂಡು ಟ್ರೋಲ್ ಮಾಡಲಾಯಿತು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ವಸುದೈವ ಕುಟುಂಬಕಂ ಯಾವುದೇ ಸಿನಿಮಾದ ರಿಮೇಕ್ ಅಲ್ಲ, ಇದು ಸಂಪೂರ್ಣವಾಗಿ ಸ್ವತಃ ಬರೆದಿರುವ ಸ್ಟ್ರೇಟ್ ಹಾಗೂ ಕೌಟುಂಬಿಕ ಕಥೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಧ್ರುವ ಸರ್ಜಾ ಜನ್ಮದಿನಕ್ಕೆ ‘ಕೆಮಿಸ್ಟ್ರಿ’ ಸಿನಿಮಾ ಅನೌನ್ಸ್; ಸ್ಯಾಂಡಲ್‌ವುಡ್‌ಗೆ ನಭಾ ನಟೇಶ್ ಕಂಬ್ಯಾಕ್
ಮುಂದುವರಿದು ಮಾತನಾಡಿದ ಅವರು, ‘ಇದು ಔಟ್ ಅಂಡ್ ಔಟ್ ಎಂಟರ್‌ಟೈನ್‌ಮೆಂಟ್ ಮತ್ತು ಫ್ಯಾಮಿಲಿ ಎಮೋಷನ್ಸ್ ಇರುವ ಸಿನಿಮಾ. ಧ್ರುವ ಸರ್ಜಾ ಅವರಿಗಾಗಿಯೇ ಈ ಕಥೆಯನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಚಿತ್ರದಲ್ಲಿ ಅದ್ಭುತ ತಾರಾಗಣ ಹಾಗೂ ಹರಿ ಸರ್ ಅವರಂತಹ ಅತ್ಯುತ್ತಮ ತಂತ್ರಜ್ಞರಿದ್ದಾರೆ. ಇದು ಯಾವುದೇ ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಬದಲಿಗೆ ಅಚ್ಚ ಕನ್ನಡ ಪ್ರಕ್ಷಕರಿಗಾಗಿ ಮಾಡಿರುವ ಅಪ್ಪಟ ಕನ್ನಡ ಚಿತ್ರ’ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




