
ಕನ್ನಡ ರಂಗಭೂಮಿ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದ ಹಿರಿಯ ನಟಿ ಸುಂದರಶ್ರೀ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ 65 ವರ್ಷದ ನಟಿಗೆ ಈಗ ವೈದ್ಯಕೀಯ ವೆಚ್ಚ ಭರಿಸಲು ಹಣಕಾಸಿನ ಅಗತ್ಯವಿದ್ದು, ಧನಸಹಾಯ ನೀಡುವಂತೆ ಮನವಿ ಮಾಡಿದ್ದಾರೆ.
ಆಸ್ಪತ್ರೆಯ ಹಾಸಿಗೆಯಿಂದಲೇ ವಿಡಿಯೋ ಸಂದೇಶ ರವಾನಿಸಿರುವ ಅವರು, ‘ಕಳೆದ ಮೂರು ತಿಂಗಳಿಂದ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ಪ್ರಸ್ತುತ ನನಗೆ ಹಣದ ಅಭಾವ ಎದುರಾಗಿದೆ. ಕಲಾಭಿಮಾನಿಗಳು ಹಾಗೂ ಸೃಜನಶೀಲ ಬಂಧುಗಳು ದಯವಿಟ್ಟು ನೆರವಿನ ಹಸ್ತ ಚಾಚಬೇಕು’ ಎಂದು ವಿನಂತಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಚಿತ್ರರಂಗ ಮತ್ತು ಕಿರುತೆರೆಯ ಹಲವು ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಹಾಯಕ್ಕೆ ಕೋರಿದ್ದಾರೆ.
ಗುಬ್ಬಿ ವೀರಣ್ಣ ಅವರ ಮೊಮ್ಮಗಳಾದ ಹಿರಿಯ ನಟಿ ಸುಂದರಶ್ರೀ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಅವರು ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.#Sundarashree #GubbiVeeranna #KannadaCinema #SeniorActress #KarnatakaNews #DigitalSanchari pic.twitter.com/Pk20WTBqRl
— Digital Sanchari (@DigitalSan41) September 29, 2026
ಸುಂದರಶ್ರೀ ಅವರು ರಂಗಭೂಮಿಯ ದಂತಕಥೆ, ಪದ್ಮಶ್ರೀ ಡಾ. ಗುಬ್ಬಿ ವೀರಣ್ಣನವರ ಮೊಮ್ಮಗಳು. ದೆಹಲಿಯ ಪ್ರತಿಷ್ಠಿತ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ ಸಂಸ್ಥೆಯಲ್ಲಿ ಅಭಿನಯ ತರಬೇತಿ ಪಡೆದಿದ್ದ ಸುಂದರಶ್ರೀ, ಗುಬ್ಬಿ ವೀರಣ್ಣನವರ ಮೊಮ್ಮಗಳು ಎನ್ನುವ ಚೌಕಟ್ಟಿನಿಂದ ಆಚೆಗೆ ಬಂದು ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡವರು. ಇವರಿಗೆ ಒಬ್ಬ ಪುತ್ರಿ, ಮೊಮ್ಮಗ ಹಾಗೂ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:59 am, Wed, 30 September 26