ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Yash) ಅವರು ಫ್ಯಾಮಿಲಿಗೆ ಹೆಚ್ಚು ಸಮಯ ನೀಡುತ್ತಾರೆ. ಆ ಕಾರಣಕ್ಕಾಗಿ ಅವರನ್ನು ಅಭಿಮಾನಿಗಳು ಸಖತ್ ಇಷ್ಟಪಡುತ್ತಾರೆ. ‘ಕೆಜಿಎಫ್: ಚಾಪ್ಟರ್ 2’ ಯಶಸ್ಸಿನ ನಂತರ ‘ರಾಕಿಂಗ್ ಸ್ಟಾರ್’ ನಟಿಸಲಿರುವ ಹೊಸ ಸಿನಿಮಾ ಯಾವುದು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಈ ಗ್ಯಾಪ್ನಲ್ಲಿ ಯಶ್ ಅವರು ತಮ್ಮ ಮಕ್ಕಳ ಜೊತೆ ಸಮಯ ಕಳೆಯುತ್ತಿದ್ದಾರೆ. ಪುತ್ರ ಯಥರ್ವ್ (Yatharv Yash) ಜೊತೆ ಯಶ್ ನಡೆಸಿದ ಒಂದು ಮುದ್ದಾದ ಮಾತುಕತೆಯ ವಿಡಿಯೋ ಈಗ ವೈರಲ್ ಆಗಿದೆ. ತಮ್ಮಿಬ್ಬರಲ್ಲಿ ಯಾರ ತೋಳು ಗಟ್ಟಿಯಾಗಿದೆ ಎಂಬ ಕುರಿತು ಯಶ್ ಮತ್ತು ಯಥರ್ವ್ ಚರ್ಚೆ ಮಾಡಿದ್ದಾರೆ. ‘ಅಪ್ಪನಿಗಿಂತ ನಾನೇ ಗಟ್ಟಿ’ ಎಂದು ಯಥರ್ವ್ ಬೀಗಿದ್ದಾನೆ. ಈ ಮುದ್ದಾದ ವಿಡಿಯೋವನ್ನು ಸ್ವತಃ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಯಶ್ ಅವರ ತೋಳನ್ನು ಮುಟ್ಟುವ ಯಥರ್ವ್ ‘ತುಂಬ ಸಾಫ್ಟ್ ಆಗಿದೆ’ ಎನ್ನುತ್ತಾನೆ. ತನ್ನ ತೋಳು ತೋರಿಸಿ ‘ತುಂಬ ಗಟ್ಟಿಯಾಗಿದೆ’ ಎನ್ನುತ್ತಾನೆ. ಮಗನ ಈ ಮಾತು ಕೇಳಿ ಯಶ್ಗೆ ಅಚ್ಚರಿ. ‘ಸೂಪರ್ ಮಗನೆ, ನೀನೇ ಎಲ್ಲರಿಗಿಂತ ಸ್ಟ್ರಾಂಗ್’ ಎಂದು ಅವರು ಪುತ್ರನ ಬೆನ್ನು ತಟ್ಟುತ್ತಾರೆ. ಅಪ್ಪ-ಮಗನ ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಜನರು ಇದನ್ನು ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: Yash: ‘ಹೋಗಲೇ, ಇವನೊಬ್ಬ ಬಾಕಿ ಇದ್ದ’: ಬ್ಯಾಡ್ ಬಾಯ್ ಎಂದು ಆರೋಪಿಸಿದ ಮಗನಿಗೆ ಯಶ್ ಪ್ರೀತಿಯ ಆವಾಜ್
ಸೋಶಿಯಲ್ ಮೀಡಿಯಾದಲ್ಲಿ ಯಶ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ತಮ್ಮ ಫ್ಯಾಮಿಲಿಯ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಕುಟುಂಬದ ಸದಸ್ಯರ ಜೊತೆ ಸಂಕ್ರಾಂತಿ ಆಚರಿಸಿದ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದರು. ಮಗ ಯಥರ್ವ್ ಹಾಗೂ ಮಗಳು ಆಯ್ರಾ ಮಾಡುವ ತುಂಟಾಟದ ವಿಡಿಯೋಗಳನ್ನು ಅವರು ಅಭಿಮಾನಿಗಳ ಮುಂದಿಡುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಯಶ್ ಅವರನ್ನು 1.3 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.
ಯಶ್ ಅವರು ನಟಿಸಲಿರುವ ಮುಂದಿನ ಸಿನಿಮಾ ಯಾವುದು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ಯಶ್ ಮೇಲೆ ಅಭಿಮಾನಿಗಳು ಇಟ್ಟಿರುವ ನಿರೀಕ್ಷೆ ತುಂಬ ದೊಡ್ಡದಾಗಿದೆ. ಅದಕ್ಕೆ ತಕ್ಕಂತೆಯೇ ಯಶ್ ಅವರು ಮುಂದಿನ ಹೆಜ್ಜೆ ಇಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಇನ್ನೂ ಸ್ವಲ್ಪ ಸಮಯ ಬೇಕು ಎಂದು ಅವರು ಇತ್ತೀಚೆಗೆ ತಿಳಿಸಿದ್ದರು. ಆದಷ್ಟು ಬೇಗ ಹೊಸ ಸಿನಿಮಾ ಅನೌನ್ಸ್ ಆಗಲಿ ಎಂಬುದು ಅಭಿಮಾನಿಗಳ ಬಯಕೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.