
ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಹಾಗೂ ನಟ ಝೈದ್ ಖಾನ್ ವಿರುದ್ಧ ನಟ ಧನ್ವೀರ್ ಗೌಡ ಅವಾಚ್ಯ ಪದಗಳಿಂದ ನಿಂದಿಸಿರುವ ಆರೋಪ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಒಂದರಲ್ಲಿ ನಟ ಝೈದ್ ಖಾನ್‌ಗೆ ಧನ್ವೀರ್ ಅವರು ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದಾರೆನ್ನಲಾಗಿದ್ದು, ಈ ಸಂಬಂಧ ಜಮೀರ್ ಅಹ್ಮದ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹ್ಮದ್ ಅವರ ಅಭಿಮಾನಿಗಳು ಹಾಗೂ ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಟ ಧನ್ವೀರ್ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸಬೇಕೆಂದು ಒತ್ತಾಯಿಸಲಾಗಿದೆ. ಧನ್ವೀರ್ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ದೂರುಗಳು ದಾಖಲಾಗಿವೆ.
ದೂರು ನೀಡುವ ಮುನ್ನ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಆಗಮಿಸಿದ ಜಮೀರ್ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ನಟ ಧನ್ವೀರ್ ಅವರಿಗೆ ಚಪ್ಪಲಿ ಹಾರ ಹಾಕಿ, ಮುಖಕ್ಕೆ ಮಸಿ ಬಳಿದಿರುವ ಫೋಟೋಗಳನ್ನು ಹಿಡಿದು ದಿಕ್ಕಾರದ ಘೋಷಣೆಗಳನ್ನು ಕೂಗಿದರು. ನಟನ ನಡೆಗೆ ಖಂಡನೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕಾನೂನು ಕ್ರಮಕ್ಕೆ ಪಟ್ಟು ಹಿಡಿದರು.
‘ದರ್ಶನ್ ಕುಟುಂಬದ ಜೊತೆ ನಟ ಝೈದ್ ಖಾನ್ ಉತ್ತಮ ಬಾಂಧವ್ಯ ಹೊಂದಿರುವುದು ನಟ ಧನ್ವೀರ್ ಅವರಿಗೆ ಇಷ್ಟವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ದರ್ಶನ್ ಕುಟುಂಬದ ಜೊತೆ ಯಾರೇ ಹತ್ತಿರವಾದರೂ ಅದನ್ನು ಧನ್ವೀರ್ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ಅವರು ಝೈದ್ ಖಾನ್ ಹಾಗೂ ಜಮೀರ್ ಅಹ್ಮದ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಮಾತನಾಡಿದ್ದಾರೆ’ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ: ಹಣದ ವಿಚಾರಕ್ಕೆ ಕಿರಿಕ್: ಧನ್ವೀರ್ ಮಾತನಾಡಿದ ಇನ್ನೊಂದು ಆಡಿಯೋ ವೈರಲ್
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಮೀರ್ ಅಭಿಮಾನಿ ವಿನಾಯಕ್, ‘ಈಗಾಗಲೇ ಹಲವು ಠಾಣೆಗಳಲ್ಲಿ ದೂರು ನೀಡಲಾಗಿದ್ದು ಎನ್‌ಸಿಆರ್ ಆಗಿದೆ. ತಕ್ಷಣವೇ ಪೊಲೀಸರು ಎಫ್‌ಐಆರ್ ದಾಖಲಿಸಿ ಧನ್ವೀರ್ ಅವರನ್ನು ಬಂಧಿಸಬೇಕು. ಇನ್ನು ಎರಡು ದಿನಗಳಲ್ಲಿ ನಟ ಧನ್ವೀರ್ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು’ ಎಂದು ಎಚ್ಚರಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.