ಗುಟ್ಕಾ ಜಾಹೀರಾತು ವಿವಾದ: ನೋಟಿಸ್‌ಗೆ ಉತ್ತರಿಸಿದ ಶಾರುಖ್, ಅಜಯ್, ಟೈಗರ್ ಶ್ರಾಫ್

ವಿಮಲ್ ಗುಟ್ಕಾ (ಏಲಕ್ಕಿ) ಜಾಹೀರಾತಿಗೆ ಸಂಬಂಧಿಸಿದಂತೆ ನೋಟಿಸ್ ಪಡೆದಿರುವ ಮೂವರು ನಟರೂ ತಮ್ಮ ಪ್ರತಿಕ್ರಿಯೆಯನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮೂವರಲ್ಲಿ ಇಬ್ಬರು ನಟರು ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ವಿಚಾರಣೆಗಾಗಿ ಮನವಿ ಮಾಡಿದ್ದರು. ಅದರಂತೆ ಅವರ ವಿಚಾರಣೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ಹಂತದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಫ್‌ಡಿಎ ಸ್ಪಷ್ಟಪಡಿಸಿದೆ.

ಗುಟ್ಕಾ ಜಾಹೀರಾತು ವಿವಾದ: ನೋಟಿಸ್‌ಗೆ ಉತ್ತರಿಸಿದ ಶಾರುಖ್, ಅಜಯ್, ಟೈಗರ್ ಶ್ರಾಫ್
Vimal Ad

Updated on: Oct 01, 2026 | 5:06 PM

ಮುಖ್ಯಾಂಶಗಳು

  • ಶಾರುಖ್ ಖಾನ್, ಅಜಯ್, ಟೈಗರ್​​ಗೆ ನೊಟೀಸ್ ನೀಡಲಾಗಿತ್ತು
  • ವಿಮಲ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ನೊಟೀಸ್ ಜಾರಿ ಆಗಿತ್ತು
  • ನೊಟೀಸಿಗೆ ನಟರು ಪ್ರತಿಕ್ರಿಯೆ ನೀಡಿದ್ದರು.

ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವ್‌ಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧಿ ಆಡಳಿತ (FDA) ನೀಡಿದ್ದ ನೋಟಿಸ್‌ಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ನಿಷೇಧಿತ ಪಾನ್ ಮಸಾಲಾ ಉತ್ಪನ್ನಕ್ಕೆ ಪರೋಕ್ಷವಾಗಿ ಜಾಹೀರಾತು ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಈ ಮೂವರು ನಟರಿಗೆ ಎಫ್‌ಡಿಎ ನೋಟಿಸ್ ಜಾರಿ ಮಾಡಿತ್ತು. ಇದೀಗ ನೊಟೀಸಿಗೆ ಸ್ಟಾರ್ ನಟರು ಉತ್ತರ ನೀಡಿದ್ದಾರೆ.

ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಂ ಮುಂಡೆ ನೀಡಿರುವ ಮಾಹಿತಿಯ ಪ್ರಕಾರ, ವಿಮಲ್ ಗುಟ್ಕಾ (ಏಲಕ್ಕಿ) ಜಾಹೀರಾತಿಗೆ ಸಂಬಂಧಿಸಿದಂತೆ ನೋಟಿಸ್ ಪಡೆದಿರುವ ಮೂವರು ನಟರೂ ತಮ್ಮ ಪ್ರತಿಕ್ರಿಯೆಯನ್ನು ಅಧಿಕೃತವಾಗಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಮೂವರಲ್ಲಿ ಇಬ್ಬರು ನಟರು ಪ್ರಕರಣಕ್ಕೆ ಸಂಬಂಧಿಸಿದಂತೆ ವೈಯಕ್ತಿಕ ವಿಚಾರಣೆಗಾಗಿ ಮನವಿ ಮಾಡಿದ್ದರು. ಅದರಂತೆ ಅವರ ವಿಚಾರಣೆಯು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ಹಂತದ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಫ್‌ಡಿಎ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರದಲ್ಲಿ ನಿಷೇಧಿಸಲ್ಪಟ್ಟಿರುವ ವಿಮಲ್ ಪಾನ್ ಮಸಾಲಾ ಬ್ರಾಂಡ್ ಅನ್ನು ಉತ್ತೇಜಿಸುವ ಉದ್ದೇಶದಿಂದ ‘ವಿಮಲ್ ಏಲಕ್ಕಿ’ ಹೆಸರಿನಲ್ಲಿ ಈ ನಟರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಎಫ್‌ಡಿಎ ಆಕ್ಷೇಪ ವ್ಯಕ್ತಪಡಿಸಿತ್ತು. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಸೆಕ್ಷನ್ 24 ಮತ್ತು ಸೆಕ್ಷನ್ 53 ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದ್ದು, ತಪ್ಪು ದಾರಿಳೆಯುವ ಜಾಹೀರಾತುಗಳ ಪ್ರಚಾರದಲ್ಲಿ ಭಾಗಿಯಾಗುವವರಿಗೆ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾದ ನಿಯಮಗಳಿವೆ. ಸೆಲೆಬ್ರಿಟಿಗಳು ಇಂತಹ ಉತ್ಪನ್ನಗಳ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಎಫ್‌ಡಿಎ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:ಬಾಲಿವುಡ್‌ನದ್ದು ಕುರಿ ಹಿಂಡಿನ ಬುದ್ಧಿ ಎಂದ ಕರೀನಾ; ನಟಿಯ ಓಪನ್ ಮಾತು

ಅಜಯ್ ದೇವಗನ್, ಶಾರುಖ್ ಖಾನ್, ಟೈಗರ್ ಶ್ರಾಫ್ ಮಾತ್ರವೇ ಅಲ್ಲದೆ ಹಲವು ಬಾಲಿವುಡ್ ನಟ-ನಟಿಯರು ಗುಟ್ಕಾ ತಯಾರಿಸುವ ಕಂಪೆನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವಾಗಿ ಅಜಯ್, ಶಾರುಖ್ ಮತ್ತು ಟೈಗರ್ ಅವರ ಜಾಹೀರಾತು ಹಲವು ಬಾರಿ ಪ್ರದರ್ಶನಗೊಂಡು ವೈರಲ್ ಆಗಿದ್ದವು. ಈ ಹಿಂದೆಯೂ ಸಹ ಈ ಬಗ್ಗೆ ನಟರುಗಳು ಟೀಕೆಗೆ ಗುರಿಯಾಗಿದ್ದರು. ಅಕ್ಷಯ್ ಕುಮಾರ್ ಸಹ ಒಮ್ಮೆ ಇದೇ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಟೀಕೆ ಎದುರಾದ ಬಳಿಕ ಅವರು ಸಂಸ್ಥೆಯೊಂದಿಗೆ ಒಪ್ಪಂದ ಮುರಿದುಕೊಂಡಿದ್ದು ಮಾತ್ರವೇ ಅಲ್ಲದೆ ಪಡೆದಿದ್ದ ಸಂಭಾವನೆಯನ್ನು ದಾನ ಸಹ ಮಾಡಿದ್ದರು.

ಎಪ್​​ಡಿಎಗೆ ಆಯುಕ್ತರಾಗಿ ತುಕಾರಾಂ ಮುಂಡೆ ನೇಮಕವಾದ ಬಳಿಕ ಮಹರಾಷ್ಟ್ರದಾದ್ಯಂತ ಆಹಾರ ಸುರಕ್ಷತೆ ಬಗ್ಗೆ ‘ಚಳವಳಿ’ಯನ್ನೇ ಅವರು ಆರಂಭಿಸಿದ್ದು ಹಲವಾರು ಹೋಟೆಲ್​​ಗಳ ಮೇಲೆ ರೇಡ್ ಮಾಡಿದ್ದಾರೆ. ಅಪಾಯಕಾರಿ ಆಹಾರ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ನಟ-ನಟಿಯರಿಗೆ ನೊಟೀಸ್ ನೀಡಿದ್ದಾರೆ. ಹೈಕೋರ್ಟ್​​ ಹೋಟೆಲ್​​ ಮೇಲೂ ಸಹ ದಾಳಿ ನಡೆಸಿ ಕೋರ್ಟಿಗೆ ನೊಟೀಸ್ ನೀಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us