ಸೆಲೆಬ್ರಿಟಿಗಳಿಗೆ ವಿವಿಧ ರೀತಿಯ ಭದ್ರತೆ; ಇದರ ವೆಚ್ಚವನ್ನು ಭರಿಸೋರು ಯಾರು?

| Updated By: ರಾಜೇಶ್ ದುಗ್ಗುಮನೆ

Updated on: Jun 14, 2024 | 10:15 AM

ಅಮಿತಾಭ್ ಬಚ್ಚನ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಭದ್ರತೆ ನೀಡಲಾಗಿದೆ. ಈ ಭದ್ರತೆಯಲ್ಲಿ 1 ಅಥವಾ 2 ಕಮಾಂಡೋಗಳು ಮತ್ತು 5ರಿಂದ 6 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ವಿಐಪಿ ವ್ಯಕ್ತಿಯೊಂದಿಗೆ ಪ್ರಯಾಣಿಸಲು ಅವರಿಗೆ ಸರ್ಕಾರದಿಂದ ಒಂದು ಅಥವಾ ಎರಡು ವಾಹನಗಳನ್ನು ನೀಡಲಾಗುತ್ತದೆ.

ಸೆಲೆಬ್ರಿಟಿಗಳಿಗೆ ವಿವಿಧ ರೀತಿಯ ಭದ್ರತೆ; ಇದರ ವೆಚ್ಚವನ್ನು ಭರಿಸೋರು ಯಾರು?
ಸೆಲೆಬ್ರಿಟಿಗಳಿಗೆ ವಿವಿಧ ರೀತಿಯ ಭದ್ರತೆ; ಇದರ ವೆಚ್ಚವನ್ನು ಭರಿಸೋರು ಯಾರು?
Follow us on

ಶಾರುಖ್ ಖಾನ್ (Shah Rukh Khan) , ಸಲ್ಮಾನ್ ಖಾನ್ ಅಥವಾ ಅಕ್ಷಯ್ ಕುಮಾರ್ ಸಾರ್ವಜನಿಕ ಸ್ಥಳಗಳಿಗೆ ಹೋಗುವುದನ್ನು ಬಹುತೇಕ ನಿಲ್ಲಿಸಿದ್ದಾರೆ. ಆದಾಗ್ಯೂ ಅಪರೂಪಕ್ಕೊಮ್ಮೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನರು ಮುತ್ತಿಕೊಳ್ಳುತ್ತಾರೆ. ಆದರೆ, ಇದಕ್ಕೆ ಭದ್ರತಾ ಸಿಬ್ಬಂದಿಗಳು ಅವಕಾಶ ಕೊಡುವುದಿಲ್ಲ. ಬಾಲಿವುಡ್ ಸ್ಟಾರ್‌ಗೆ ಇಷ್ಟು ದೊಡ್ಡ ಸಂಖ್ಯೆಯ ಪೊಲೀಸ್ ಭದ್ರತೆಯನ್ನು ಏಕೆ ನೀಡಲಾಗುತ್ತದೆ? ಅದರ ವೆಚ್ಛವನ್ನು ಯಾರು ಭರಿಸುತ್ತಾರೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

‘ಹಮಾರೆ ಬಾರಾ’ ಚಿತ್ರದ ಕಾರಣಕ್ಕಾಗಿ ಅನ್ನು ಕಪೂರ್ ಅವರು ಸುದ್ದಿಯಲ್ಲಿದ್ದಾರೆ. ಅವರಿಗೆ ಮಹಾರಾಷ್ಟ್ರ ಪೊಲೀಸರು ಭದ್ರತೆಯನ್ನು ನೀಡಿದ್ದರು. ಈ ಚಿತ್ರದ ಟೀಸರ್ ಬಿಡುಗಡೆಯಾದ ನಂತರದಿಂದಲೂ ಅನ್ನು ಕಪೂರ್​ಗೆ ಜೀವ ಬೆದರಿಕೆ ಇದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಈ ತಂಡದಲ್ಲಿ ಹಲವು ಮಹಿಳಾ ಕಲಾವಿದರೂ ಸೇರಿದ್ದರು. ಈ ದೂರಿನ ನಂತರ, ಅನ್ನು ಕಪೂರ್ ಅವರಿಗೆ ಪೊಲೀಸರು ಎಕ್ಸ್ ಭದ್ರತೆಯನ್ನು ನೀಡಿದ್ದಾರೆ.

ಎಕ್ಸ್-ಸೆಕ್ಯುರಿಟಿಯಲ್ಲಿ, ಸೆಲೆಬ್ರಿಟಿಯನ್ನು ಸೀಮಿತ ಅವಧಿಗೆ ಅಥವಾ ಮುಂದಿನ ಸೂಚನೆ ಬರುವವರೆಗೆ ರಕ್ಷಿಸಲು ಇಬ್ಬರು ಸಶಸ್ತ್ರ ಪೊಲೀಸ್ ಅಧಿಕಾರಿಗಳನ್ನು ನೀಡಲಾಗುತ್ತದೆ. ಇಲ್ಲಿ ಯಾವುದೇ ಕಮಾಂಡೋ ಇರುವುದಿಲ್ಲ. ಈ ಭದ್ರತಾ ಅಧಿಕಾರಿಗಳು ಸಾಮಾನ್ಯವಾಗಿ ನಟರು ಓಡಾಡುವ ವಾಹನದಲ್ಲೇ ಪ್ರಯಾಣಿಸುತ್ತಾರೆ. ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್ ಅವರಿಗೆ ಸರ್ಕಾರ ಎಕ್ಸ್ ಭದ್ರತೆಯನ್ನು ನೀಡಿದೆ. ಅಮಿತಾಭ್ ಬಚ್ಚನ್‌ಗೆ ಮಹಾರಾಷ್ಟ್ರ ಸರ್ಕಾರ ಇದೇ ಭದ್ರತೆಯನ್ನೂ ನೀಡಿತ್ತು. ಆದರೆ ಕಳೆದ ವರ್ಷ ಅವರಿಗೆ ಬಂದ ಬೆದರಿಕೆಯ ನಂತರ, ಈ ಭದ್ರತೆಯನ್ನು ಮೇಲ್ದರ್ಜೆಗೇರಿಸಲಾಗಿದೆ.

ವೈ ಭದ್ರತೆ

ಅಮಿತಾಭ್ ಬಚ್ಚನ್ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಗೆ ವೈ ಭದ್ರತೆ ನೀಡಲಾಗಿದೆ. ಈ ಭದ್ರತೆಯಲ್ಲಿ 1 ಅಥವಾ 2 ಕಮಾಂಡೋಗಳು ಮತ್ತು 5ರಿಂದ 6 ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ವಿಐಪಿ ವ್ಯಕ್ತಿಯೊಂದಿಗೆ ಪ್ರಯಾಣಿಸಲು ಅವರಿಗೆ ಸರ್ಕಾರದಿಂದ ಒಂದು ಅಥವಾ ಎರಡು ವಾಹನಗಳನ್ನು ನೀಡಲಾಗುತ್ತದೆ. ಈ ಭದ್ರತೆಗೆ ಪ್ರತಿ ತಿಂಗಳು ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚಾಗುತ್ತದೆ. ಈ ಭದ್ರತೆಯನ್ನು ರಾಜ್ಯ ಸರ್ಕಾರ ನೀಡುತ್ತದೆ. ಆದರೆ ಕೆಲವು ವರದಿಗಳ ಪ್ರಕಾರ, ಈ ಸೇವೆಗಾಗಿ ಅನೇಕ ಸೆಲೆಬ್ರಿಟಿಗಳು ಸ್ವತಃ ಸರ್ಕಾರಕ್ಕೆ ಹಣವನ್ನು ಪಾವತಿಸುತ್ತಾರೆ.

ಬೆದರಿಕೆಯ ಸಂದರ್ಭದಲ್ಲಿ ಭದ್ರತೆಯನ್ನು ನೀಡಲಾಗುತ್ತದೆ

‘ಪದ್ಮಾವತ್’ ಚಿತ್ರದ ರಿಲೀಸ್ ಸಂದರ್ಭದಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಕರ್ಣಿ ಸೇನೆ ಬೆದರಿಕೆ ಹಾಕಿದಾಗಲೂ, ಫಿಲ್ಮ್‌ಸಿಟಿಯಲ್ಲಿ ನಿರ್ಮಿಸಲಾಗಿದ್ದ ಅವರ ಸಂಪೂರ್ಣ ಸೆಟ್‌ಗೆ ಮುಂಬೈನ ಗೋರೆಗಾಂವ್ ಪೊಲೀಸರು ಭದ್ರತೆ ನೀಡಿದ್ದರು. ಅಂತಹ ನಟರು ಮುಂಬೈನ ಹೊರಗೆ ಪ್ರಯಾಣಿಸುವಾಗ, ಅವರು ಪ್ರಯಾಣಿಸುವ ಸ್ಥಳದ ಪೊಲೀಸರಿಗೆ ಅವರ ಪ್ರಯಾಣದ ಯೋಜನೆಗಳ ಬಗ್ಗೆ ತಿಳಿಸಲಾಗುತ್ತದೆ. ಈ ನಟರಿಗೆ ಸ್ಥಳೀಯ ಪೊಲೀಸರು ಭದ್ರತೆಯನ್ನು ಒದಗಿಸುತ್ತಾರೆ.

Y+ ಭದ್ರತೆ

ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಕಂಗನಾ ರನೌತ್ ಅವರಿಗೆ Y+ ಭದ್ರತೆ ನೀಡಲಾಗಿದೆ. ಕಂಗನಾಗೆ ಕೇಂದ್ರ ಸರ್ಕಾರ ಈ ಭದ್ರತೆ ನೀಡಿದ್ದು, ಖಾನ್​ಗಳಿಗೆ ಮಹಾರಾಷ್ಟ್ರ ಸರ್ಕಾರ ಭದ್ರತೆ ನೀಡಿದೆ. ವಾಸ್ತವವಾಗಿ ಸುಮಾರು 11 ಜನರು Y+ ಭದ್ರತೆಯಲ್ಲಿ ಇರುತ್ತಾರೆ. 11 ಜನರ ಈ ತಂಡದಲ್ಲಿ 2 ರಿಂದ 4 ಕಮಾಂಡೋಗಳು ಮತ್ತು 7 ರಿಂದ 9 ಪೊಲೀಸ್ ಅಧಿಕಾರಿಗಳು ಇದ್ದಾರೆ. ಇವುಗಳ ಜೊತೆಗೆ ಬುಲೆಟ್ ಪ್ರೂಫ್ ಕಾರು ಮತ್ತು ಪ್ರಯಾಣಕ್ಕಾಗಿ ಒಂದು ಅಥವಾ ಎರಡು ಪೊಲೀಸ್ ವ್ಯಾನ್‌ಗಳನ್ನು ಸಹ ನೀಡಲಾಗುತ್ತದೆ.

ಈ ಭದ್ರತೆಗೆ ಪ್ರತಿ ತಿಂಗಳು 15 ರಿಂದ 16 ಲಕ್ಷ ರೂ. ಖರ್ಚಾಗುತ್ತದೆ. Y+ ಸೆಕ್ಯುರಿಟಿಯಲ್ಲಿ ಸೆಲೆಬ್ರಿಟಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಈ ತಂಡವು ಮತ್ತೆ ಮತ್ತೆ ಬದಲಾಗದಂತೆ ವಿಶೇಷ ಕಾಳಜಿ ವಹಿಸಲಾಗಿದೆ. ಸೆಲೆಬ್ರಿಟಿಗಳ ಮೇಲೆ ದಾಳಿ ಅಥವಾ ದಾಳಿಯ ಯತ್ನ ನಡೆಯದಂತೆ ನೋಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕೊಲೆ ಕೇಸ್​​ನಲ್ಲಿ ನಟ ದರ್ಶನ್​ ಅರೆಸ್ಟ್; ಬೆಂಗಳೂರಿನ ಮನೆ ಬಳಿ ಪೊಲೀಸ್ ಭದ್ರತೆ

ವೈ+ ಸೆಕ್ಯುರಿಟಿಯಲ್ಲಿ ಸೆಲೆಬ್ರಿಟಿಗಳಿಗೆ ಮಾತ್ರವಲ್ಲ ಸೆಲೆಬ್ರಿಟಿಗಳ ಕುಟುಂಬದ ಸದಸ್ಯರಿಗೂ ಪೊಲೀಸ್ ಅಧಿಕಾರಿಯ ಭದ್ರತೆ ನೀಡಲಾಗುತ್ತದೆ. ಉದಾಹರಣೆಗೆ, ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಎಲ್ಲಾದರು ಭೇಟಿ ನೀಡಲಿದ್ದರೆ ಆಗ ಪೊಲೀಸ್ ಅಧಿಕಾರಿಗಳು ಅವರೊಂದಿಗೆ ಹಾಜರಿರುತ್ತಾರೆ. ಸಲ್ಮಾನ್ ಖಾನ್ ಅವರ ಸೋದರ ಮಾವ ಆಯುಷ್ ಶರ್ಮಾ ಯಾವುದೇ ಚಿತ್ರದ ಪ್ರಚಾರಕ್ಕೆ ಹೋದರೆ, ಅವರಿಗೆ ಆ ಪ್ರದೇಶದ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯ ಭದ್ರತೆಯನ್ನು ನೀಡುತ್ತಾರೆ.

ಖಾಸಗಿ ಭದ್ರತೆ

ಸಲ್ಮಾನ್ ಖಾನ್‌, ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಈ ಎಲ್ಲಾ ದೊಡ್ಡ ಸೆಲೆಬ್ರಿಟಿಗಳಿಗೆ ಸರ್ಕಾರದಿಂದ ಭದ್ರತೆ ನೀಡಲಾಗುತ್ತಿದೆ. ಆದರೆ ನಟರು ತಮ್ಮ ಮತ್ತು ಕುಟುಂಬದ ಸುರಕ್ಷತೆಗಾಗಿ ಖಾಸಗಿ ಭದ್ರತೆಗೆ ವ್ಯವಸ್ಥೆ ಮಾಡುತ್ತಾರೆ. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಭದ್ರತಾ ಜವಾಬ್ದಾರಿಯನ್ನು ಶೇರಾ ನಿಭಾಯಿಸುತ್ತಾರೆ. ಅಮಿತಾಭ್ ಬಚ್ಚನ್, ಆಲಿಯಾ ಭಟ್, ರಣಬೀರ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರಂತಹ ಅನೇಕ ನಟರು ಸಹ ದುಬಾರಿ ಖಾಸಗಿ ಭದ್ರತೆಯನ್ನು ನೇಮಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.