95ರ ಹರೆಯದಲ್ಲೂ ಸಿನಿಮಾ ತುಡಿತ, ಕೊನೆಯಾಸೆ ಈಡೇರುವ ಮುನ್ನವೇ ಕೊನೆಯುಸಿರೆಳೆದ ಸಿಂಗೀತಂ

ಹಲವು ಭಾಷೆಗಳಲ್ಲಿ ಹಲವಾರು ಅತ್ಯುತ್ತಮ ಸಿನಿಮಾಗಳನ್ನು, ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಹಲವು ಅತ್ಯದ್ಭುತ ಪಾತ್ರಗಳು, ಸನ್ನಿವೇಶಗಳನ್ನು ಸಿನಿಮಾ ಮೂಲಕ ಸೃಷ್ಟಿಸಿರುವ ಸಿಂಗೀತಂ ಅವರು ಕೆಲ ತಿಂಗಳುಗಳ ಹಿಂದಷ್ಟೆ ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಹೆಸರಿನ ಸಂಭಾಷಣೆ ಇಲ್ಲದೆ, ಕೇವಲ ಸಂಗೀತದಿಂದಲೇ ಕಥೆ ಹೇಳುವ ಸಿನಿಮಾ ಮಾಡಿ ಪ್ರಯೋಗ ಮಾಡಿದ್ದರು. ಸಿನಿಮಾ ರಿಲೀಸ್ ಆಗುವಾಗ ತಮಗಿರುವ ಸಿನಿಮಾ ಪ್ರೀತಿಯ ಬಗ್ಗೆ ಸಿಂಗೀತಂ ಹೇಳಿಕೊಂಡಿದ್ದರು.

95ರ ಹರೆಯದಲ್ಲೂ ಸಿನಿಮಾ ತುಡಿತ, ಕೊನೆಯಾಸೆ ಈಡೇರುವ ಮುನ್ನವೇ ಕೊನೆಯುಸಿರೆಳೆದ ಸಿಂಗೀತಂ
Singeetham Srinivas Rao

Updated on: Oct 04, 2026 | 4:52 PM

ಸಿಂಗೀತಂ ಶ್ರೀನಿವಾಸ್, ಭಾರತ ಚಿತ್ರರಂಗ ಕಂಡ ಅದ್ಭುತ ಸಿನಿಮಾ ನಿರ್ದೇಶಕ. ದಶಕಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ವ್ಯಾಖ್ಯಾನ ನೀಡಿದ್ದ ದಿಗ್ಗಜ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್. ಹಲವು ಭಾಷೆಗಳಲ್ಲಿ ಹಲವಾರು ಅತ್ಯುತ್ತಮ ಸಿನಿಮಾಗಳನ್ನು, ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಹಲವು ಅತ್ಯದ್ಭುತ ಪಾತ್ರಗಳು, ಸನ್ನಿವೇಶಗಳನ್ನು ಸಿನಿಮಾ ಮೂಲಕ ಸೃಷ್ಟಿಸಿರುವ ಸಿಂಗೀತಂ ಅವರು ಕೆಲ ತಿಂಗಳುಗಳ ಹಿಂದಷ್ಟೆ ತಮ್ಮ 94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಹೆಸರಿನ ಸಂಭಾಷಣೆ ಇಲ್ಲದೆ, ಕೇವಲ ಸಂಗೀತದಿಂದಲೇ ಕಥೆ ಹೇಳುವ ಸಿನಿಮಾ ಮಾಡಿ ಪ್ರಯೋಗ ಮಾಡಿದ್ದರು. ಸಿನಿಮಾ ರಿಲೀಸ್ ಆಗುವಾಗ ತಮಗಿರುವ ಸಿನಿಮಾ ಪ್ರೀತಿಯ ಬಗ್ಗೆ ಸಿಂಗೀತಂ ಹೇಳಿಕೊಂಡಿದ್ದರು.

ಸಿಂಗೀತಂ ಅವರಿಗೆ ವಯಸ್ಸು ಎಷ್ಟೇ ಆದರೂ ಸಿನಿಮಾ ಮೇಲಿನ ಅವರ ಆಸಕ್ತಿ ಒಂದಿಷ್ಟೂ ಕುಂದಿರಲಿಲ್ಲ. ಹಲವಾರು ಅದ್ಭುತ ಚಿತ್ರಗಳನ್ನು ನೀಡಿದ ಅವರು, ಬದುಕಿನ ಕೊನೆಯ ಹಂತದಲ್ಲೂ ಮತ್ತೊಂದು ಚಿತ್ರ ಮಾಡುವ ಕನಸು ಕಾಣುತ್ತಿದ್ದರು ಎಂಬುದೇ ಸಿನಿಮಾ ಬಗ್ಗೆ ಅವರಿಗಿದ್ದ ಪ್ರೀತಿಗೆ ಸಾಕ್ಷಿ. ನಿರ್ದೇಶನಕ್ಕೆ ದೈಹಿಕ ಶ್ರಮದ ಜೊತೆಗೆ ತಾಳ್ಮೆ ಮತ್ತು ಏಕಾಗ್ರತೆ ಬೇಕು. ಆದರೆ ವಯಸ್ಸು ಸೃಜನಶೀಲತೆಗೆ ಅಡ್ಡಿಯಲ್ಲ ಎಂಬುದನ್ನು ಅವರು ಸಾಬೀತುಪಡಿಸಿದರು. ಸುಮಾರು 95ರ ವಯಸ್ಸಿನಲ್ಲೂ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ‘ಸಿಂಗ್ ಗೀತಂ’ ಅವರ ಸೃಜನಶೀಲ ಶಕ್ತಿಗೆ ಸಾಕ್ಷಿಯಾಗಿ ನಿಂತಿತು. ಅದರ ಜೊತೆಗೆ ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಕತೆಯಲ್ಲೂ ಅವರ ಪಾಲು ಇದೆ.

94ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಸಿನಿಮಾ ಮಾಡಿದರೂ ಸಹ ಅವರು ಸಿನಿಮಾದಿಂದ ಸಂಪೂರ್ಣವಾಗಿ ದೂರ ಸರಿಯಲು ಅವರು ಬಯಸಿರಲಿಲ್ಲ. ಇನ್ನೊಂದು ಚಿತ್ರ ಮಾಡುವ ಯೋಚನೆಯಲ್ಲಿದ್ದರು. ಈ ವಿಷಯವನ್ನು ಖ್ಯಾತ ನಿರ್ದೇಶಕ ನಾಗ್ ಅಶ್ವಿನ್ ಬಹಿರಂಗಪಡಿಸಿದ್ದಾರೆ. ಸಿಂಗೀತಂ ಅವರೊಂದಿಗೆ ನಡೆದ ವಾಟ್ಸಾಪ್ ಸಂಭಾಷಣೆಯನ್ನು ನಾಗ್ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಮುಂದಿನ ಚಿತ್ರದ ಆಲೋಚನೆಯನ್ನು ಸಿಂಗೀತಂ ತಮ್ಮೊಂದಿಗೆ ಹಂಚಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಸಿಂಗೀತಂ ತಮ್ಮ 62ನೇ ಚಿತ್ರಕ್ಕೆ ‘ಎ ಫ್ರೂಟ್ ಚಟ್ಸ್ ದಿ ನೈಫ್’ (A Fruit Cuts the Knife) (ಚಾಕುವನ್ನೇ ಕತ್ತರಿಸುವ ಹಣ್ಣು) ಎಂಬ ಕುತೂಹಲಕರ ಶೀರ್ಷಿಕೆ ಯೋಚಿಸಿದ್ದರು ಎಂದು ನಾಗ್ ಅಶ್ವಿನ್ ಹೇಳಿದ್ದಾರೆ. ಈ ಯೋಜನೆಯ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಂಡ ಅವರು, ಕೊನೆಯ ದಿನಗಳಲ್ಲೂ ಸಿನಿಮಾ ಮಾಡುವ ಉತ್ಸಾಹ ಸಿಂಗೀತಂ ಅವರಲ್ಲಿತ್ತು ಎಂದಿದ್ದಾರೆ.

ಇದನ್ನೂ ಓದಿ:ಸಿಂಗೀತಂ ಶ್ರೀನಿವಾಸ ರಾವ್ ನಿಧನ: ಅಣ್ಣಾವ್ರ ಜತೆ ಐಕಾನಿಕ್ ಸಿನಿಮಾಗಳನ್ನು ಮಾಡಿದ್ದ ನಿರ್ದೇಶಕ

ಎಷ್ಟೋ ಚಿತ್ರಗಳನ್ನು ಮಾಡಿದ ನಂತರವೂ ಹೊಸ ಕಥೆ, ಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರ ಮುಂದೆ ಬರಬೇಕೆಂದು ಕನಸು ಕಾಣುವ ನಿರ್ದೇಶಕರು ವಿರಳ. ಸಿಂಗೀತಂ ಅವರಿಗೆ ಸಿನಿಮಾ ಕೇವಲ ವೃತ್ತಿಯಾಗಿರಲಿಲ್ಲ, ಜೀವನಪೂರ್ತಿ ಜೊತೆಗಿದ್ದ ಒಂದು ಹವ್ಯಾಸ. ಆ ಯೋಜನೆ ಸೆಟ್ಟೇರುವ ಮುನ್ನವೇ ಅವರು ನಿಧನರಾದದ್ದು ಸಿನಿಪ್ರೇಮಿಗಳನ್ನು ದುಃಖದಲ್ಲಿ ಮುಳುಗಿಸಿದೆ. ಅವರ 62ನೇ ಚಿತ್ರ ಕೇವಲ ಆಲೋಚನೆಯಾಗಿಯೇ ಉಳಿಯುತ್ತದೆಯೇ, ಅಥವಾ ಬೇರೊಬ್ಬ ನಿರ್ದೇಶಕ ಆ ಕಥೆಯನ್ನು ಮುಂದೆ ಕೊಂಡೊಯ್ಯುತ್ತಾರೆಯೇ ಎಂಬುದು ಈಗ ಕುತೂಹಲದ ವಿಷಯ. ‘ಎ ಫ್ರೂಟ್ ಚಟ್ಸ್ ದಿ ನೈಫ್’ ಎಂಬ ವಿಭಿನ್ನ ಶೀರ್ಷಿಕೆಯ ಹಿಂದಿನ ಕಥೆ ಏನು, ಯಾವ ಕಲ್ಪನೆಯೊಂದಿಗೆ ಅವರು ಈ ಚಿತ್ರ ಮಾಡಲು ಬಯಸಿದ್ದರು ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಹುಟ್ಟಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sun, 4 October 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us