8 ಕೋಟಿ ರೂಪಾಯಿ ಸಂಭಾವನೆ ವದಂತಿಗೆ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ

ಒಂದು ಸಿನಿಮಾಗೆ 8 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವದಂತಿಗಳಿಗೆ ನಟಿ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಕೇವಲ ಕೆಲವೇ ಸಿನಿಮಾಗಳಲ್ಲಿ ನಟಿಸಿರುವಾಗ ಅಷ್ಟು ದೊಡ್ಡ ಮೊತ್ತ ಕೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಸೂಕ್ತ ಆಫರ್‌ಗಳು ಸಿಗದ ಕಾರಣ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ.

8 ಕೋಟಿ ರೂಪಾಯಿ ಸಂಭಾವನೆ ವದಂತಿಗೆ ‘ಕೆಜಿಎಫ್’ ನಟಿ ಶ್ರೀನಿಧಿ ಶೆಟ್ಟಿ ಸ್ಪಷ್ಟನೆ
ಶ್ರೀನಿಧಿ ಶೆಟ್ಟಿ
Edited By:

Updated on: Oct 27, 2026 | 8:01 AM

‘ಕೆಜಿಎಫ್’ ಸಿನಿಮಾ ಮೂಲಕ ದೇಶವ್ಯಾಪಿ ಹೆಸರು ಮಾಡಿರುವ ನಟಿ ಶ್ರೀನಿಧಿ ಶೆಟ್ಟಿ ತಮ್ಮ ಸಂಭಾವನೆ ಕುರಿತಾದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಒಂದು ಸಿನಿಮಾಗೆ ಅವರು 7 ರಿಂದ 8 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂಬ ವರದಿಗಳನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಎಂಟು ವರ್ಷಗಳಲ್ಲಿ ತಾವು ಕೇವಲ ಆರೇ ಸಿನಿಮಾಗಳಲ್ಲಿ ನಟಿಸಲು ಸಿನಿಮಾಗಳ ಆಫರ್ ಕೊರತೆಯೇ ಕಾರಣ ಎಂದು ಅವರು ಸತ್ಯ ಬಿಚ್ಚಿಟ್ಟಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಆದರ್ಶ ಕುಟುಂಬಮ್ ಹೌಸ್ ನಂ. 47’ (AK47) ಸಿನಿಮಾದ ಪ್ರಚಾರದ ವೇಳೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಟ ವೆಂಕಟೇಶ್ ಜೊತೆ ಶ್ರೀನಿಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿನಿಮಾ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ಬ್ಲಾಸ್ಟ್’ ಚಿತ್ರಕ್ಕೆ ಹೋಲಿಕೆ ಮಾಡುವುದನ್ನು ಅವರು ನಿರಾಕರಿಸಿದ್ದಾರೆ. ಎರಡೂ ಸಿನಿಮಾಗಳ ಕಥಾಹಂದರ ಬೇರೆ ಬೇರೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಿನಿಮಾದ ಮೂಲಕ ಶ್ರೀನಿಧಿ ಶೆಟ್ಟಿ ಮೊದಲ ಬಾರಿಗೆ ಕಾಮಿಡಿ ಶೈಲಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕ್ರೈಮ್ ಮತ್ತು ಡಾರ್ಕ್ ಕಾಮಿಡಿ ಮಿಶ್ರಿತ ಪಾತ್ರ ಇದಾಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂದಿದ್ದಾರೆ. ಇಷ್ಟೇ ಅಲ್ಲದೆ ತಮ್ಮ ವೃತ್ತಿಜೀವನದ ಆರಂಭದಲ್ಲೇ ತಾಯಿಯ ಪಾತ್ರದಲ್ಲಿ ಅಭಿನಯಿಸಲು ತಾವು ಯಾವುದೇ ಹಿಂಜರಿಕೆ ತೋರಿಸಿಲ್ಲ ಎಂದು ಅವರು ಹೇಳಿದ್ದಾರೆ. ತ್ರಿವಿಕ್ರಮ್ ಮತ್ತು ವೆಂಕಟೇಶ್ ಅವರಂತಹ ದಿಗ್ಗಜರ ಜೊತೆ ಕೆಲಸ ಮಾಡುವುದು ಹೆಮ್ಮೆಯ ವಿಷಯ ಎಂದಿದ್ದಾರೆ.

ತಮ್ಮ ಸಂಭಾವನೆ ವದಂತಿಯ ಬಗ್ಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ, ನಾನು ನಟಿಸಿರುವುದು ಕೇವಲ ಕೆಲವೇ ಸಿನಿಮಾಗಳಲ್ಲಿ. ಹೀಗಿರುವಾಗ ನಾನು 8 ಕೋಟಿ ರೂಪಾಯಿ ಸಂಭಾವನೆ ಕೇಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಹಣ ಮಾಡುವುದೇ ನನ್ನ ಮುಖ್ಯ ಉದ್ದೇಶವಾಗಿದ್ದರೆ ಈಷ್ಟರಲ್ಲಿ 30-40 ಸಿನಿಮಾಗಳಲ್ಲಿ ನಟಿಸಬಹುದಿತ್ತು. ಆದರೆ ನಾನು ಹಣಕ್ಕಿಂತ ಒಳ್ಳೆಯ ಕಥೆ ಮತ್ತು ಗುಣಮಟ್ಟದ ಪಾತ್ರಗಳಿಗೆ ಆದ್ಯತೆ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘ಕೆಜಿಎಫ್ ನೋಡಿ ನಾನು ಯಶ್ ಅಭಿಮಾನಿಯಾದೆ’; ರಣಬೀರ್ ಕಪೂರ್

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟಿಯರು ಸಕ್ರಿಯವಾಗಿದ್ದರೂ ಶ್ರೀನಿಧಿ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಆಫರ್‌ಗಳು ಬರುತ್ತಿಲ್ಲವಂತೆ. ನಾನು ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಆದರೆ ನನಗೆ ಸೂಕ್ತವಾದ ಆಫರ್‌ಗಳು ಬರುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಥೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುವ ಅಭ್ಯಾಸ ತಮ್ಮದು ಎಂದು ಅವರು ಕೊನೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us