
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ದಸರಾ’ (Dasara Movie) ಕೂಡ ಇದೆ. ಟಾಲಿವುಡ್ ನಟ ನಾನಿ ಅವರು ಈ ಸಿನಿಮಾದಲ್ಲಿ ಭಿನ್ನ ಗೆಟಪ್ ತಾಳಿದ್ದಾರೆ. ಹಲವು ಕಾರಣಗಳಿಂದ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ಮಾರ್ಚ್ 30ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ನಾನಿ (Nani) ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ಅಭಿನಯಿಸಿದ್ದಾರೆ. ‘ದಸರಾ’ ಸಿನಿಮಾ ಹೇಗಿರಲಿದೆ ಎಂಬುದರ ಝಲಕ್ ತೋರಿಸಲು ಟೀಸರ್ ರಿಲೀಸ್ ಮಾಡಲಾಗಿದೆ. ತುಂಬ ರಗಡ್ ಆಗಿ ಮೂಡಿಬಂದಿರುವ ಈ ಟೀಸರ್ ಕಂಡು ಎಸ್ಎಸ್ ರಾಜಮೌಳಿ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಾನಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಸದ್ಯ ‘ದಸರಾ’ ಟೀಸರ್ (Dasara Movie Teaser) ವೈರಲ್ ಆಗಿದ್ದು, ಸಿನಿಪ್ರಿಯರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಾನಿ ಅವರು ಈಗಾಗಲೇ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಅವರನ್ನು ‘ನ್ಯಾಚುರಲ್ ಸ್ಟಾರ್’ ಎಂದು ಕರೆಯುತ್ತಾರೆ. ‘ದಸರಾ’ ಸಿನಿಮಾ ನಾನಿ ಪಾಲಿಗೆ ತುಂಬ ಸ್ಪೆಷಲ್ ಆಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈಗ ಟೀಸರ್ ರಿಲೀಸ್ ಮಾಡಲಾಗಿದೆ.
ಇದನ್ನೂ ಓದಿ: RGV Twitter: ‘ರಾಜಮೌಳಿ ಹತ್ಯೆಗೆ ಸಂಚು ನಡೆದಿದೆ, ತಂಡ ಸಿದ್ಧವಾಗಿದೆ’; ರಾಮ್ ಗೋಪಾಲ್ ವರ್ಮಾ ಹೇಳಿಕೆ
ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ‘ದಸರಾ’ ಟೀಸರ್ ಅನಾವರಣ ಮಾಡಿದ್ದಾರೆ. ಅದೇ ರೀತಿ, ಹಿಂದಿಯಲ್ಲಿ ಶಾಹಿದ್ ಕಪೂರ್, ತಮಿಳಿನಲ್ಲಿ ಧನುಷ್, ಮಲಯಾಳಂನಲ್ಲಿ ದುಲ್ಕರ್ ಸಲ್ಮಾನ್ ಹಾಗೂ ತೆಲುಗಿನಲ್ಲಿ ಎಸ್ಎಸ್ ರಾಜಮೌಳಿ ಅವರು ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ‘ದಸರಾ ಟೀಸರ್ನಲ್ಲಿನ ದೃಶ್ಯಗಳು ಇಷ್ಟವಾಯ್ತು. ಪಾತ್ರಕ್ಕಾಗಿ ನಾನಿ ಅವರಲ್ಲಿನ ಬದಲಾವಣೆ ತುಂಬ ಇಂಪ್ರೆಸ್ ಮಾಡುವಂತಿದೆ. ಹೊಸ ನಿರ್ದೇಶಕರೊಬ್ಬರು ಈ ರೀತಿ ಪರಿಣಾಮಕಾರಿಯಾದ ಕೆಲಸ ಮಾಡಿದ್ದನ್ನು ನೋಡಲು ಖುಷಿ ಆಗುತ್ತದೆ. ನಿರ್ದೇಶಕ ಶ್ರೀಕಾಂತ್ ಒಡೆಲಾ ಹಾಗೂ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.
ದೀಕ್ಷಿತ್ ಶೆಟ್ಟಿ, ಸಮುದ್ರಕಣಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್’ ಬ್ಯಾನರ್ ಮೂಲಕ ಸುಧಾಕರ್ ಚೆರುಕುರಿ ಅವರು ‘ದಸರಾ’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಟೀಸರ್ನಲ್ಲಿ ಅದ್ದೂರಿ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆಯುತ್ತಿವೆ. ನಾನಿ ಅಭಿಮಾನಿಗಳಿಗೆ ಈ ಟೀಸರ್ ಸಾಕಷ್ಟು ಇಷ್ಟ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇದು ಮಿಲಿಯನ್ಗಟ್ಟಲೆ ವೀಕ್ಷಣೆ ಕಂಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.