ತಮಿಳು ನಟ ಕಾರ್ತಿಕ್ ಸಬೇಶ್ ನಿಧನ: ಸಂಗೀತ ನಿರ್ದೇಶಕ ದೇವಾ ಅಗಲಿಕೆಯ ಬೆನ್ನಲ್ಲೇ ಮತ್ತೊಂದು ಆಘಾತ

ಅಂತಿಮ ದರ್ಶನಕ್ಕಾಗಿ ಕಾರ್ತಿಕ್ ಸಬೇಶ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದೆ. ಮಂಗಳವಾರ (ಅಕ್ಟೋಬರ್ 20) ಸಂಜೆ 4.30ರ ಸುಮಾರಿಗೆ ಚೆನ್ನೈನ ವಲಸರವಕ್ಕಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಪತ್ನಿ ರಮ್ಯಾ ಕಾರ್ತಿಕ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಕಾರ್ತಿಕ್ ಸಬೇಶ್ ಅಗಲಿದ್ದಾರೆ.

ತಮಿಳು ನಟ ಕಾರ್ತಿಕ್ ಸಬೇಶ್ ನಿಧನ: ಸಂಗೀತ ನಿರ್ದೇಶಕ ದೇವಾ ಅಗಲಿಕೆಯ ಬೆನ್ನಲ್ಲೇ ಮತ್ತೊಂದು ಆಘಾತ
Karthik Sabesh
Image Credit source: alchetron

Updated on: Oct 20, 2026 | 3:29 PM

ತಮಿಳು ಚಿತ್ರರಂಗದಲ್ಲಿ ಮತ್ತೊಂದು ನೋವಿನ ಸುದ್ದಿ ಕೇಳಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನರಾದ ಬೆನ್ನಲ್ಲೇ, ಅವರ ಸೋದರಳಿಯ ಹಾಗೂ ಯುವ ನಟ ಕಾರ್ತಿಕ್ ಸಬೇಶ್ ಅವರು ಸೋಮವಾರ (ಅಕ್ಟೋಬರ್ 19) ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ತಿಕ್ ಸಬೇಶ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ 11.15ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

ಕಾರ್ತಿಕ್ ಸಬೇಶ್ ಅವರ ಅಕಾಲಿಕ ಮರಣವು ತಮಿಳು ಚಿತ್ರರಂಗದ ಗಣ್ಯರನ್ನು ಮತ್ತು ಕುಟುಂಬವರ್ಗದವರನ್ನು ತೀವ್ರ ಆಘಾತಕ್ಕೀಡುಮಾಡಿದೆ. ಕಾರ್ತಿಕ್ ಸಕೇಶ್ ಅವರು ಖ್ಯಾತ ಸಂಗೀತ ನಿರ್ದೇಶಕ ಸಬೇಶ್ ಅವರ ಪುತ್ರ. ಅವರು ಇತ್ತೀಚೆಷ್ಟೇ ನಿಧನರಾದ ಹಿರಿಯ ಸಂಗೀತ ಮಾಂತ್ರಿಕ ದೇವಾ ಅವರ ಸೋದರಳಿಯ. ಕೇವಲ ಮೂರೇ ಮೂರು ದಿನಗಳ ಅಂತರದಲ್ಲಿ ಕುಟುಂಬದ ಇಬ್ಬರು ಸದಸ್ಯರು ಸಾವನ್ನಪ್ಪಿರುವುದು ಅಪಾರ ನೋವನ್ನುಂಟುಮಾಡಿದೆ.

ದೇವಾ ಅವರು ಕಳೆದ ಶನಿವಾರ (ಅಕ್ಟೋಬರ್ 17) ಹೃದಯಾಘಾತದಿಂದ ನಿಧನರಾಗಿದ್ದರು. ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ 400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ದೇವಾ, ‘ಅಣ್ಣಾಮಲೈ’, ‘ಅರುಣಾಚಲಂ’ ಮತ್ತು ‘ಬಾಷಾ’ ಮುಂತಾದ ಬ್ಲಾಕ್‌ಬಸ್ಟರ್ ಚಿತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಅಲ್ಲದೆ, ತಮಿಳು ಚಿತ್ರರಂಗದಲ್ಲಿ ‘ಗಾನಾ’ ಶೈಲಿಯ ಸಂಗೀತವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಅಗಲಿಕೆಯ ದುಃಖ ಮರೆಯುವ ಮುನ್ನವೇ ಅವರ ಸೋದರಳಿಯ ಕಾರ್ತಿಕ್ ಕೂಡ ಇಹಲೋಕ ತ್ಯಜಿಸಿರುವುದು ಚಿತ್ರರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಕಾರ್ತಿಕ್ ಸಬೇಶ್ ಅವರು ತಮಿಳಿನಲ್ಲಿ ‘ದಮ್’, ‘ವಲ್ಲವನ್’, ‘ಪಟ್ಟತ್ತು ಯಾನೈ’, ‘ಕುಲಿರ್ 100 ಡಿಗ್ರಿ’ ಮುಂತಾದ ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದರು. ಕಾರ್ತಿಕ್ ಅಗಲಿಕೆಗೆ ತಮಿಳು ಚಿತ್ರರಂಗದ ನಟರು, ನಿರ್ದೇಶಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ‘ಅಮೃತವರ್ಷಿಣಿ’, ‘ಕೋಟಿಗೊಬ್ಬ’ ಮ್ಯೂಸಿಕ್ ಡೈರೆಕ್ಟರ್ ದೇವಾ ನಿಧನ

ಕಾರ್ತಿಕ್ ಸಬೇಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಮಂಗಳವಾರ ಸಂಜೆ ಚೆನ್ನೈನ ವಲಸರವಕ್ಕಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಕಾರ್ತಿಕ್ ಸಬೇಶ್ ಅವರು ಪತ್ನಿ ರಮ್ಯಾ ಕಾರ್ತಿಕ್ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us