ತಮಿಳುನಾಡಿನ ರಾಜಕೀಯ (Politics) ಹಾಗೂ ಸಿನಿಮಾರಂಗಕ್ಕೆ (Movie) ಬಹು ಆಪ್ತ ನಂಟಿದೆ. ಅವಿಭಜಿತ ಆಂಧ್ರ ಪ್ರದೇಶದಲ್ಲಿಯೂ ಸಹ ಸಿನಿಮಾ ಹಾಗೂ ರಾಜಕೀಯ ದಶಕಗಳಿಂದಲೂ ಜೊತೆ-ಜೊತೆಯಾಗಿವೆಯಾದರೂ ಸಹ, ತಮಿಳುನಾಡಿನ ಸಿನಿಮಾ-ರಾಜಕೀಯ ನಂಟಿಗೂ ಆಂಧ್ರದ ಸಿನಿಮಾ-ರಾಜಕೀಯ ನಂಟಿಗೂ ವ್ಯತ್ಯಾಸವಿದೆ. ಅವಿಭಜಿತ ಆಂಧ್ರಪ್ರದೇಶದಲ್ಲಿ ತಮ್ಮ ಜನಪ್ರಿಯತೆಯನ್ನು ಮುಖ್ಯ ಧಾತುವಾಗಿಸಿಕೊಂಡು ಎನ್ಟಿಆರ್ ರಾಜಕೀಯ ಪ್ರವೇಶ ಮಾಡಿದರು. ಅವರಿಗೆ ಸ್ಪೂರ್ತಿ ನೀಡಿದ್ದು ನೆರೆಯ ತಮಿಳುನಾಡಿನ ರಾಜಕೀಯವೇ. ಆದರೆ ತಮಿಳುನಾಡಿನಲ್ಲಿ ಸಿನಿಮಾ ಮಂದಿ ರಾಜಕೀಯಕ್ಕೆ ಬರಲು ದ್ರಾವಿಡ ಚಳುವಳಿ ಮೂಲ ಕಾರಣವಾಯ್ತು.
ದ್ರಾವಿಡ ಚಳುವಳಿಯ ಮೂಲಪುರುಷ ಎನಿಸಿಕೊಳ್ಳುವ ಪೆರಿಯಾರ್ ಅವರ ಜೊತೆಯಲ್ಲಿಯೇ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಅಣ್ಣಾದೊರೈ (ಡಿಎಂಕೆ ಸಂಸ್ಥಾಪಕ, ತಮಿಳುನಾಡಿನ ಮೊದಲ ಸಿಎಂ) ಹಾಗೂ ಕರುಣಾನಿಧಿ ತಮಿಳುನಾಡು ಚಿತ್ರರಂಗ ಉದಯಿಸುವ ಸಮಯದಲ್ಲಿ ಚಿತ್ರಕತೆಗಾರರಾಗಿ, ನಟರಾಗಿ ಕೆಲಸ ಮಾಡಿದ್ದರು. ದ್ರಾವಿಡ ಚಳುವಳಿಯ ಅಗತ್ಯತೆ, ಪ್ರಸ್ತುತತೆಯನ್ನು ಸಿನಿಮಾಗಳ ಮೂಲಕ ತಮಿಳು ಪ್ರೇಕ್ಷಕರಿಗೆ ತಲುಪಿಸುವ ಕಾರ್ಯ ಮಾಡಿದರು. ಸ್ವತಃ ನಟರೂ ಆಗಿದ್ದ ಅಣ್ಣಾದೊರೈ ಸಿನಿಮಾಗಳನ್ನು ಚಳುವಳಿಗೆ, ರಾಜಕೀಯಕ್ಕೆ ಶಕ್ತವಾಗಿ ಬಳಸಿಕೊಂಡರು. ಅಣ್ಣಾದೊರೈ ಹಾದಿಯಲ್ಲಿಯೇ ದ್ರಾವಿಡ ಚಳುವಳಿಯ ಬಗ್ಗೆ ಆಸಕ್ತಿಹೊಂದಿದ್ದ, ಸಿನಿಮಾಗಳ ಮೂಲಕ ದ್ರಾವಿಡ ಚಳುವಳಿಯ ಪ್ರಚಾರದಲ್ಲಿ ತೊಡಗಿದ್ದವರು ಕರುಣಾನಿಧಿ, ಶಿವಾಜಿ ಗಣೇಶನ್ ಸಹ ಇದ್ದರು.
ಮದ್ರಾಸ್ ರಾಜ್ಯದ ಕೊನೆಯ ಹಾಗೂ ತಮಿಳುನಾಡು ರಾಜ್ಯದ ಮೊಟ್ಟಮೊದಲ ಸಿಎಂ ಅಣ್ಣಾದೊರೈ. ಪೆರಿಯಾರ್ ಅವರೊಟ್ಟಿಗೆ ದ್ರಾವಿಡ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಅಣ್ಣಾದೊರೈ, ತಮಿಳುನಾಡಿನ ಪ್ರಬಲ ರಾಜಕೀಯ ಪಕ್ಷ ಡಿಎಂಕೆಯ ಸ್ಥಾಪಕ ಸಹ. ಸಿನಿಮಾವನ್ನು ಚಳುವಳಿ ಹಾಗೂ ರಾಜಕೀಯಕ್ಕೆ ಶಕ್ತವಾಗಿ ಬಳಸಿಕೊಂಡ ಅಣ್ಣಾದೊರೈ. ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ ಹಾಗೂ ಚಿತ್ರಕತೆಗಳನ್ನು ಸಹ ಬರೆದಿದ್ದಾರೆ.
ದ್ರಾವಿಡ ಚಳುವಳಿಯ ಮುಂಚೂಣಿಯಲ್ಲಿದ್ದವರಲ್ಲಿ ಒಬ್ಬರಾದ ಎಂ ಕರುಣಾನಿಧಿ ಅವರು ಸಿನಿಮಾಗಳಲ್ಲಿ ನಟಿಸದಿದ್ದರು. ಹಲವಾರು ಸಿನಿಮಾಗಳಿಗೆ ಚಿತ್ರಕತೆ, ಗೀತೆಗಳು, ಕತೆಗಳನ್ನು ರಚಿಸಿದ್ದಾರೆ. ದ್ರಾವಿಡ ಚಳುವಳಿಯನ್ನು ತಮಿಳು ಜನರ ಮನಸ್ಸಿಗೆ ತಾಗಿಸಿದ ಸಿನಿಮಾ ‘ಪರಾಶಕ್ತಿ’ಯ ಚಿತ್ರಕತೆಯನ್ನು ಬರೆದಿದ್ದು ಎಂ ಕರುಣಾನಿಧಿ. ‘ಪರಾಶಕ್ತಿ’ ಸಿನಿಮಾ ತಮಿಳುನಾಡಿನಾದ್ಯಂತ ಹೊಸ ಅಲೆಯನ್ನೇ ಎಬ್ಬಿಸಿತ್ತು. ಕರುಣಾನಿಧಿ ಡಿಎಂಕೆ ಪಕ್ಷದ ಸ್ಥಾಪಕರಲ್ಲಿ ಒಬ್ಬರು. ತಮಿಳುನಾಡಿನ ಸಿಎಂ ಆಗಿಯೂ ಕರುಣಾನಿಧಿ ಸೇವೆ ಸಲ್ಲಿಸಿದರು.
ತಮಿಳಿನ ಜನಪ್ರಿಯ ನಾಯಕ ನಟರಲ್ಲಿ ಒಬ್ಬರಾಗಿರುವ ಶಿವಾಜಿ ಗಣೇಶನ್ ‘ಪರಾಶಕ್ತಿ’ಸಿನಿಮಾದಲ್ಲಿಯೂ ನಟಿಸಿದ್ದರು. ದ್ರಾವಿಡ ಚಳುವಳಿ ಮೂಲಕವೇ ಅವರು ನಟನೆಗೆ ಬಂದಿದ್ದರು. ಡಿಎಂಕೆ ಸ್ಥಾಪನೆಯಾದ ಬಳಿಕ ಆ ಪಕ್ಷ ಸೇರಿದ ಶಿವಾಜಿ, ತಿರುಪತಿ ದೇವಾಲಯಕ್ಕೆ ಭೇಟಿ ಕೊಟ್ಟ ಕಾರಣ ಟೀಕೆ ಎದುರಿಸಿ ಪಕ್ಷ ತೊರೆದು ತಮಿಳ್ ನ್ಯಾಷನಲ್ ಪಾರ್ಟಿ ಸೇರಿದರು. ಬಳಿಕ ಅದು ಕಾಂಗ್ರೆಸ್ ಜೊತೆ ವಿಲೀನವಾಯ್ತು. ಕಾಂಗ್ರೆಸ್ನ ತಮಿಳುನಾಡು ನಾಯಕ ಕಾಮರಾಜ್ ಅವರ ಆಪ್ತರಾಗಿದ್ದ ಶಿವಾಜಿ ಗಣೇಶನ್ ಅನೇಕ ಪ್ರಮುಖ ಹುದ್ದೆಗಳನ್ನು ಅನುಭವಿಸಿದರು.
ತಮಿಳುನಾಡಿನ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಅತ್ಯಂತ ಜನಪ್ರಿಯ ವ್ಯಕ್ತಿ ಎಂಜಿ ರಾಮಚಂದ್ರ. 1953ರ ವರೆಗೆ ಕಾಂಗ್ರೆಸ್ನಲ್ಲಿದ್ದ ಎಂಜಿಆರ್, ಅಣ್ಣಾದೊರೈ ಅವರಿಂದ ಪ್ರೇರಿತರಾಗಿ ಡಿಎಂಕೆ ಬಂದರು. ಆದರೆ ಅಣ್ಣಾದೊರೈ ನಿಧನದ ಬಳಿಕ ಕರುಣಾನಿಧಿ ಡಿಎಂಕೆಯ ನೇತೃತ್ವ ವಹಿಸಿಕೊಂಡರು, ಸಿಎಂ ಸಹ ಆದರು. ಅಲ್ಲಿಂದ ಇಬ್ಬರ ನಡುವೆ ಅಸಮಾಧಾನ ಪ್ರಾರಂಭವಾಯ್ತು. ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ಎಂಜಿಆರ್ ಅವರನ್ನು ಉಚ್ಛಾಟನೆ ಮಾಡಲಾಯ್ತು. ಬಳಿಕ ಎಂಜಿಆರ್ ತಮ್ಮ ಆಪ್ತನೇ ಪ್ರಾರಂಭಿಸಿದ ಅನ್ನಾ ದ್ರಾವಿಡ ಮುನ್ನೇಟ್ರ ಕಳಗಂ (ಎಡಿಎಂಕೆ) ಸೇರಿ ಅದರ ನಾಯಕತ್ವ ವಹಿಸಿಕೊಂಡರು. ಬಳಿಕ ಅದಕ್ಕೆ ಎಐಎಡಿಎಂಕೆ ಎಂದು ಹೆಸರು ಬದಲಾಯಿಸಿದರು. ಎರಡು ಬಾರಿ ಸಿಎಂ ಸಹ ಆದರು. ಮರಣಾನಂತರ ಅವರಿಗೆ ಭಾರತ ರತ್ನ ಪ್ರಶಸ್ತಿ ಸಹ ನೀಡಲಾಯ್ತು.
ಕನ್ನಡತಿ ನಟಿ ಜಯಲಲಿತಾ ತಮಿಳು ರಾಜಕೀಯದಲ್ಲಿ ಅತಿ ದೊಡ್ಡ ಹೆಸರು. ಮಾತ್ರವಲ್ಲ ರಾಜಕೀಯದಲ್ಲಿ ಅವರು ಮಾಡಿದ ಹೋರಾಟ, ತೋರಿದ ಕೆಚ್ಚು ಪೀಳಿಗೆಗಳಿಗೆ ಮಾದರಿ. ಸಿನಿಮಾ ನಟಿಯಾಗಿದ್ದ ಜಯಲಲಿತಾ ಎಂಜಿಆರ್ ನಾಯಕತ್ವದ ಎಐಎಡಿಎಂಕೆ ಪಕ್ಷ ಸೇರಿದರು. ಎಂಜಿಆರ್ ನಿಧನದ ಬಳಿಕ ಹಲವು ಸಮಸ್ಯೆಗಳನ್ನು ಎದುರಿಸಿದರೂ ಸಹ ತಮ್ಮ ಗಟ್ಟಿ ನಾಯಕತ್ವದಿಂದ ಮತ್ತೆ ಪಕ್ಷದ ಸದಸ್ಯರನ್ನು ಒಟ್ಟುಗೂಡಿಸಿ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಬರೋಬ್ಬರಿ ಆರು ಬಾರಿ ಜಯಲಲಿತಾ ತಮಿಳುನಾಡಿನ ಸಿಎಂ ಆಗಿದ್ದರು.
ಎಂಆರ್ ರಾಧಾ ತಮಿಳಿನ ಜನಪ್ರಿಯ ನಟ. ನಾಟಕಗಳ ಮೂಲಕ ದೊಡ್ಡ ಹೆಸರು ಮಾಡಿದ್ದ ಎಂಆರ್ ರಾಧಾ ತಮಿಳುಚಿತ್ರರಂಗದ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯ ವಿಲನ್ ಆಗಿದ್ದರು. ಎಂಆರ್ ರಾಧಾ ಪೆರಿಯಾರ್ ವಿಚಾರಧಾರೆಗಳ ಹಿಂಬಾಲಕರಾಗಿದ್ದರು. ಡಿಎಂಕೆಯಲ್ಲಿಯೂ ಗುರುತಿಸಿಕೊಂಡು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದರು. ಬಳಿಕ ಎಂಜಿಆರ್ ಅವರಿಗೆ ಗುಂಡು ಹಾರಿಸಿ ಕೊಲ್ಲಲು ಯತ್ನಿಸಿ ಜೈಲು ಪಾಲಾದರು.
ನಟ ವಿಜಯ್ಕಾಂತ್ 2005ರಲ್ಲಿ ಪಕ್ಷ ಸ್ಥಾಪನೆ ಮಾಡಿದರು. 2011ರಲಿ ವಿಪಕ್ಷ ನಾಯಕನಾಗಿಯೂ ಕೆಲಸ ಮಾಡಿದರು. ಆದರೆ ಮುಂಬರುವ ವರ್ಷಗಳಲ್ಲಿ ಅವರ ಪಕ್ಷ ತನ್ನ ವರ್ಚಸ್ಸು ಉಳಿಸಿಕೊಳ್ಳುವಲ್ಲಿ ವಿಫಲವಾಯ್ತು. ಇದಕ್ಕೆ ಜಯಲಲಿತಾ ಅವರೊಂದಿಗೆ ಭಿನ್ನಾಭಿಪ್ರಾಯವೂ ಸಹ ಕಾರಣವಾಯ್ತು. 2023ರ ಡಿಸೆಂಬರ್ 28ರಂದು ನಿಧನ ಹೊಂದಿದರು.
ನಟ ಕಮಲ್ ಹಾಸನ್ ನಟರಾಗಿ ಬಹುದೊಡ್ಡ ಹೆಸರು ಮಾಡಿರುವವರು. ಈಗಲೂ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. 2018ರಲ್ಲಿ ಕಮಲ್ ಹಾಸನ್ ‘ಮಕ್ಕಳ್ ನಿಧಿ ಮಯಂ’ ಪಕ್ಷ ಸ್ಥಾಪನೆ ಮಾಡಿದರು. 2019ರ ಲೋಕಸಭಾ ಚುನಾವಣೆ ಎದುರಿಸಿದರು. ಆದರೆ ಗೆಲ್ಲಲಿಲ್ಲ. ಪಕ್ಷದ ಸಂಘಟನೆಯನ್ನು ಕಮಲ್ ಮುಂದುವರೆಸಿದ್ದಾರೆ.
ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ನಟಿ ಖುಷ್ಬು ಕಳೆದ 14 ವರ್ಷಗಳಿಂದಲೂ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಖುಷ್ಬು 2010ರಲ್ಲಿ ಡಿಎಂಕೆ ಪಕ್ಷ ಸೇರ್ಪಡೆಗೊಂಡರು. ನಾಲ್ಕು ವರ್ಷಗಳಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. 2020ರಲ್ಲಿ ಖುಷ್ಬು ಬಿಜೆಪಿ ಸೇರ್ಪಡೆಗೊಂಡರು. 2021ರ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯಿಂದ ಸ್ಪರ್ಧಿಸಿ ಸೋತರು. ಪ್ರಸ್ತುತ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ತಮಿಳಿನ ಪ್ರಸ್ತುತ ಸ್ಟಾರ್ ನಟ ದಳಪತಿ ವಿಜಯ್ ಇಂದಷ್ಟೆ (ಫೆಬ್ರವರಿ 2) ತಮ್ಮದೇ ಆದ ರಾಜಕೀಯ ಪಕ್ಷದ ಘೋಷಣೆ ಮಾಡಿದ್ದಾರೆ. ವಿಜಯ್ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ವಿಜಯ್ ಸ್ಪರ್ಧೆ ಮಾಡಲಿದ್ದಾರೆ.
ಎಂಕೆ ಸ್ಟಾಲಿನ್ ಪುತ್ರ ಉದಯ್ನಿಧಿ ಸ್ಟಾಲಿನ್. ಹಿರಿಯ ನಟರಾದ ಕೆಆರ್ ರಾಮಸ್ವಾಮಿ, ಎಂಆರ್ ಕೃಷ್ಣನ್, ನಟ ವಿಶಾಲ್ ಸಹ ಒಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಅವರ ನಾಮಿನೇಷನ್ ರದ್ದಾಯಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Fri, 2 February 24