ಕಿಚ್ಚ ಸುದೀಪ್ (Kichcha Sudeep) ಅತ್ಯುತ್ತಮ ನಟರಾಗಿರುವ ಜೊತೆಗೆ ಒಳ್ಳೆಯ ಕ್ರಿಕೆಟ್ ಆಟಗಾರರು ಹಾಗೂ ಕ್ರಿಕೆಟ್ ಪ್ರೇಮಿಯೂ ಹೌದು. ಬಾಲ್ಯದಲ್ಲಿ ಕ್ರಿಕೆಟಿಗರಾಗಬೇಕೆಂಬ ಕನಸು ಕಂಡಿದ್ದ ಕಿಚ್ಚು ಸುದೀಪ್ ಆಗಿದ್ದು ನಟ. ಹಾಗಿದ್ದರೂ ಸಹ ಕ್ರಿಕೆಟ್ನಿಂದ ದೂರಾಗಿಲ್ಲ. ಸಿಸಿಎಲ್ ಸೇರಿದಂತೆ ಇನ್ನಿತರೆ ಟೂರ್ನಿಗಳ ಮೂಲಕ ತಮ್ಮ ಕ್ರಿಕೆಟ್ ಪ್ರೀತಿ ಮೆರೆಯುತ್ತಲೇ ಬಂದಿದ್ದಾರೆ. ನಟನಾಗಿ ಹಲವು ಚಿತ್ರರಂಗಗಳಲ್ಲಿ ಗೆಳೆಯರನ್ನು ಆಪ್ತರನ್ನು ಹೊಂದಿರುವ ಸುದೀಪ್ಗೆ ಕ್ರಿಕೆಟ್ ರಂಗದಲ್ಲಿಯೂ ಹಲವು ಆಪ್ತರಿದ್ದಾರೆ. ಅವರಲ್ಲಿ ಕ್ರಿಕೆಟ್ ದಿಗ್ಗಜ, ಭಾರತ ರತ್ನ ಸಚಿನ್ ತೆಂಡೂಲ್ಕರ್ ಸಹ ಒಬ್ಬರು. ಇದೀಗ ಹಠಾತ್ತನೆ ಕಿಚ್ಚು ಸುದೀಪ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ಸ್ವೀಟ್ ಶಾಕ್ ಒಂದನ್ನು ನೀಡಿದ್ದಾರೆ.
ಆಗಿದ್ದಿಷ್ಟು, ಸುದೀಪ್, ತಮ್ಮ ಬಿಡುವಿನ ಸಮಯದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರುತ್ತಾರೆ. ‘ಆಸ್ಕ್ ಕಿಚ್ಚ’ ಹ್ಯಾಷ್ಟ್ಯಾಗ್ ಮೂಲಕ ಅಭಿಮಾನಿಗಳು ತಮಗೆ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಿರುತ್ತಾರೆ. ಇಂದು ಅಂಥಹುದೇ ಒಂದು ಸಂವಾದದಲ್ಲಿ ಅಭಿಮಾನಿಯೊಬ್ಬರು, ಸುದೀಪ್ ಹಾಗೂ ಸಚಿನ್ ಅವರು ಒಟ್ಟಿಗಿರುವ ಹಳೆಯ ಚಿತ್ರವನ್ನು ಶೇರ್ ಮಾಡಿ, ‘ನೀವು ಸಚಿನ್ ಅವರನ್ನು ಭೇಟಿಯಾದಾಗ ನಿಮ್ಮ ಒಳಗಿನ ಭಾವನೆ ಹೇಗಿತ್ತು’ ಎಂದು ಪ್ರಶ್ನೆ ಕೇಳಿದ್ದರು.
ಅದಕ್ಕೆ ಉತ್ತರಿಸಿದ್ದ ಸುದೀಪ್, ‘ಈ ಚಿತ್ರ ಅತ್ಯದ್ಭುತ. ಇದೊಂದು ಬಹಳ ಮಧುರವಾದ ನೆನಪು’ ಎಂದಿದ್ದರು. ಕೂಡಲೇ ಸುದೀಪ್ರ ಟ್ವೀಟ್ಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, ‘ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷದ ವಿಷಯ. ಅಂದು ನಮ್ಮ ಚಿತ್ರವನ್ನು ಬಹಳ ಚೆನ್ನಾಗಿ ಯಾರೋ ತೆಗೆದಿದ್ದಾರೆ. ನಿಮಗೆ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ಸಂತೋಷವನ್ನು ದೇವರು ಕರುಣಿಸಲೆಂದು ಸದಾ ಬಯಸುತ್ತೇನೆ’ ಎಂದಿದ್ದಾರೆ. ಟ್ವೀಟ್ ಅನ್ನು ಹಿಂದಿಯಲ್ಲಿ ಮಾಡಿರುವ ಸಚಿನ್, ಟ್ವೀಟ್ನಲ್ಲಿ ‘ಕಿಚ್ಚ’ ಎಂಬ ಪದವನ್ನು ಪನ್ ರೀತಿಯಲ್ಲಿ ಬಳಸಿರುವುದು ವಿಶೇಷ.
ಇದನ್ನೂ ಓದಿ:‘ಆಗಲೇ 28 ವರ್ಷಗಳು ಕಳೆದಿವೆ’; ಸಿನಿ ಜರ್ನಿ ನೆನೆದು ಭಾವುಕರಾದ ಕಿಚ್ಚ ಸುದೀಪ್
ಸಚಿನ್ರ ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸದಿದ್ದ ಸುದೀಪ್, ‘ವಾವ್, ನಾನಿದನ್ನು ನಿರೀಕ್ಷಿಸಿಯೇ ಇರಲಿಲ್ಲ. ಮತ್ತೊಂದು ಅದ್ಭುತವಾದ ನೆನಪನ್ನು ನೀಡಿದ್ದಕ್ಕೆ ನಿಮಗೆ ಧನ್ಯವಾದ. ರಾಶಿ ಪ್ರೀತಿ ಹಾಗೂ ಶುಭ ಹಾರೈಕೆಗಳು ನಿಮಗೆ’ ಎಂದು ಸಚಿನ್ಗೆ ಧನ್ಯವಾದ ಹೇಳಿದ್ದಾರೆ ಸುದೀಪ್.
ಸುದೀಪ್ ಅವರು ಭಾರತದ ಹಲವು ಕ್ರಿಕೆಟಿಗರೊಟ್ಟಿಗೆ ಆಪ್ತ ಬಂಧ ಹೊಂದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇನ್ನೂ ಹಲವರೊಟ್ಟಿಗೆ ಸುದೀಪ್ಗೆ ಗೆಳೆತನವಿದೆ. ಪಾಂಡ್ಯಾ ಸಹೋದರರು, ಯಜುವೇಂದ್ರ ಚಾಹಲ್ ಇನ್ನೂ ಹಲವು ಕ್ರಿಕೆಟಿಗರು ಸುದೀಪ್ ಮನೆಗೆ ಭೇಟಿ ನೀಡಿ ಪಾರ್ಟಿ ಮಾಡಿದ್ದಾರೆ. ಹಲವು ವಿದೇಶಿ ಕ್ರಿಕೇಟಿಗರು ಸಹ ಸುದೀಪ್ರೊಟ್ಟಿಗೆ ಗೆಳೆತನ ಹೊಂದಿದ್ದಾರೆ. ಕೆಲವು ಕ್ರಿಕೆಟಿಗರು ತಮ್ಮ ಬ್ಯಾಟ್ಗಳನ್ನು ಸುದೀಪ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:12 pm, Fri, 2 February 24