ಬಾಲಿವುಡ್ ಮಂದಿಗೆ ನಟ, ನಿರೂಪಕ ಕಪಿಲ್ ಶರ್ಮಾ (Kapil Sharma) ಜೊತೆ ಒಂದು ಉತ್ತಮವಾದ ನಂಟು ಬೆಳೆದಿದೆ. ಹಲವು ವರ್ಷಗಳಿಂದ ಕಿರುತೆರೆಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಕಪಿಲ್ ಶರ್ಮಾ ಅವರು ದೇಶಾದ್ಯಂತ ಮನೆ ಮಾತಾಗಿದ್ದಾರೆ. ಅವರ ಕಾರ್ಯಕ್ರಮಕ್ಕೆ ಹಿಂದಿ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಬಂದುಹೋಗಿದ್ದಾರೆ. ಯಾವುದೇ ಹೊಸ ಸಿನಿಮಾ ಬಿಡುಗಡೆ ಆಗುತ್ತಿದ್ದರೂ ಕೂಡ ಪ್ರಚಾರಕ್ಕಾಗಿ ‘ದಿ ಕಪಿಲ್ ಶರ್ಮಾ ಶೋ’ಗೆ (The Kapil Sharma Show) ಬರುತ್ತಾರೆ ಚಿತ್ರತಂಡದವರು. ಅಷ್ಟರಮಟ್ಟಿಗೆ ಕಪಿಲ್ ಶರ್ಮಾ ಫೇಮಸ್. ಸಿನಿಮಾ ನಟನಾಗಿಯೂ ಅವರು ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದುಂಟು. ವೈಯಕ್ತಿಕ ಕಾರಣಗಳಿಂದಲೂ ಕಪಿಲ್ ಶರ್ಮಾ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಸಾಮಾನ್ಯವಾಗಿ ಸಿನಿಮಾ ತಂಡಗಳನ್ನು ತಮ್ಮ ಶೋಗೆ ಆಹ್ವಾನಿಸುವ ಅವರು ಈ ಬಾರಿ ಒಂದು ಡಿಫರೆಂಟ್ ಪ್ರಯತ್ನ ಮಾಡಿದ್ದಾರೆ. ಹಿಂದಿ ಚಿತ್ರರಂಗದ ಖ್ಯಾತ ಖಳ ನಟರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗಿದೆ. ಆಶಿಷ್ ವಿದ್ಯಾರ್ಥಿ, ಮುಖೇಶ್ ರಿಷಿ, ಅಭಿಮನ್ಯು ಸಿಂಗ್, ಯಶ್ಪಾಲ್ ಶರ್ಮಾ (Actor Yashpal Sharma) ಅವರನ್ನು ಆಹ್ವಾನಿಸಲಾಗಿದೆ. ಇವರೆಲ್ಲರೂ ಸೇರಿ ಒಂದಷ್ಟು ಮಾತುಗಳನ್ನು ಆಡಿದ್ದಾರೆ. ಅನೇಕ ವಿಚಾರಗಳನ್ನು ಪ್ರೇಕ್ಷಕರ ಎದುರು ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಯಶ್ಪಾಲ್ ಶರ್ಮಾ ಹೇಳಿದ ಒಂದು ಘಟನೆ ಸಖತ್ ಫನ್ನಿ ಆಗಿದೆ.
ಸಿನಿಮಾದಲ್ಲಿ ವಿಲನ್ ಆಗಿದ್ದರೂ ಕೂಡ ನಿಜ ಜೀವನದಲ್ಲಿ ತುಂಬ ಸೌಮ್ಯ ಸ್ವಭಾವ ಹೊಂದಿರುವ ಅನೇಕರು ಇದ್ದಾರೆ. ಆದರೆ ಜನರು ಅವರನ್ನು ನೋಡುವ ರೀತಿ ಬೇರೆ ಆಗಿರುತ್ತದೆ. ಸಾಮಾನ್ಯವಾಗಿ ತೆರೆಮೇಲಿನ ಪಾತ್ರದ ಜೊತೆಗೆ ನಟರನ್ನು ಹೋಲಿಕೆ ಮಾಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಮಾತು ಸಾಬೀತಾಗಿದೆ. ನಟ ಯಶ್ಪಾಲ್ ಯಾಧವ್ ಅವರಿಗೂ ಇದು ಅನುಭವಕ್ಕೆ ಬಂದಿದೆ. ಅದಕ್ಕೆ ಸಂಬಂಧಿಸಿದಂತೆ ಒಂದು ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.
‘ವಿಲನ್ ಆಗಿ ನಟಿಸಿದ್ದಕ್ಕೆ ನಿಮಗೆ ಜೀವನದಲ್ಲಿ ಏನಾದರೂ ನಷ್ಟ ಆಗಿದೆಯೇ’ ಎಂದು ಕಪಿಲ್ ಶರ್ಮಾ ಪ್ರಶ್ನೆ ಕೇಳಿದರು. ‘ಹೌದು, ದೊಡ್ಡ ನಷ್ಟ ಆಗಿದೆ. ಫೋಟೋ ತೆಗೆದುಕೊಳ್ಳುವಾಗ ಹುಡುಗಿಯರು ನನ್ನ ಹತ್ತಿರ ಬರಲ್ಲ. ತುಂಬ ದೂರ ನಿಂತುಕೊಳ್ಳುತ್ತಾರೆ’ ಎಂದು ಯಶ್ಪಾಲ್ ಶರ್ಮಾ ತಮಾಷೆ ಮಾಡಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
ಈ ಪ್ರೋವೋವನ್ನು ಸೋನಿ ಟಿವಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಶನಿವಾರ (ಏ.2) ಮತ್ತು ಭಾನುವಾರ (ಏ.3) ಈ ಎಪಿಸೋಡ್ ಪ್ರಸಾರ ಆಗಲಿದೆ. ನಟ ಆಶಿಷ್ ವಿದ್ಯಾರ್ಥಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ದೇಶದ ಹಲವು ಕಡೆಗಳಲ್ಲಿ ಪ್ರವಾಸ ಮಾಡುವ ಅವರು ವಿವಿಧ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ತಾವು ಆಹಾರ ಸೇವಿಸುವ ಚಿಕ್ಕ-ಚಿಕ್ಕ ಹೋಟೆಲ್ಗಳ ಬಗ್ಗೆಯೂ ಅವರು ಪ್ರಚಾರ ಮಾಡುತ್ತಾರೆ. ಆ ಕುರಿತಾಗಿಯೂ ಕಪಿಲ್ ಶರ್ಮಾ ಕಾಲೆಳೆದಿದ್ದಾರೆ.
ಇಂದು (ಏ.2) ಕಪಿಲ್ ಶರ್ಮಾ ಜನ್ಮದಿನ. ಆ ಪ್ರಯುಕ್ತ ‘ದಿ ಕಪಿಲ್ ಶರ್ಮಾ ಶೋ’ ವೇದಿಕೆಯಲ್ಲಿ ಬಾಲಿವುಡ್ ಖಳನಟರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಆ ಪ್ರೋಮೋ ಕೂಡ ವೈರಲ್ ಆಗಿದೆ.
ಹಲವು ಕಾರಣಗಳಿಂದ ಈ ಶೋ ಫೇಮಸ್ ಆಗಿದೆ. ಕೆಲವೊಮ್ಮೆ ಇದರಿಂದ ವಿವಾದಗಳು ಕೂಡ ಹುಟ್ಟಿಕೊಂಡಿದ್ದುಂಟು. ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡವನ್ನು ಆಹ್ವಾನಿಸಿಲ್ಲ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಈ ಸಿನಿಮಾ ಸೂಪರ್ ಹಿಟ್ ಆದ ಬಳಿಕ, ‘ಯಾವುದೇ ಸಿನಿಮಾದ ಪ್ರಚಾರಕ್ಕೆ ಈ ಶೋ ಅಗತ್ಯವೇನಿಲ್ಲ’ ಎನ್ನುವ ಮಾತು ಕೂಡ ಕೇಳಿಬಂತು.
ಇದನ್ನೂ ಓದಿ:
ಅಕ್ಕಿಗೆ ಕಪಿಲ್ ಶರ್ಮಾ ನಂಬಿಕೆ ದ್ರೋಹ; ‘ದಿ ಕಪಿಲ್ ಶರ್ಮಾ ಶೋ’ ಬೈಕಾಟ್ ಮಾಡಿದ ಅಕ್ಷಯ್ ಕುಮಾರ್