ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?
ಶಾರುಖ್​ ಖಾನ್​, ಕಪಿಲ್​ ಶರ್ಮಾ

Kapil Sharma I'm Not Done Yet: ‘ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ’ ಎಂದು ಶಾರುಖ್​ ಕೇಳಿದ್ದರು. ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

TV9kannada Web Team

| Edited By: Madan Kumar

Jan 29, 2022 | 9:20 AM

ನಟ-ನಿರೂಪಕ ಕಪಿಲ್​ ಶರ್ಮಾ (Kapil Sharma) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಕಾರ್ಯಕ್ರಮಗಳು ಭಾರಿ ಜನಪ್ರಿಯತೆ ಗಳಿಸಿವೆ. ಕಪಿಲ್​ ಶರ್ಮಾ ಅವರ ಹಾಸ್ಯಭರಿತ ಮಾತುಗಳನ್ನು ಕೇಳಲು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ನೆಟ್​ಫ್ಲಿಕ್ಸ್​ನಲ್ಲಿ (Netflix) ಅವರ ಹೊಸ ಶೋ ಆರಂಭ ಆಗಿದೆ. ‘ಕಪಿಲ್​ ಶರ್ಮಾ: ಐ ಆ್ಯಮ್​ ನಾಟ್​ ಡನ್​ ಯೆಟ್​’ ಎಂಬುದು ಈ ಕಾರ್ಯಕ್ರಮದ ಶೀರ್ಷಿಕೆ. ಇದರಲ್ಲಿ ಕಪಿಲ್​ ಶರ್ಮಾ ಅವರು ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಬದುಕಿನ ಅನೇಕ ಫನ್ನಿ ಘಟನೆಗಳನ್ನು ಅವರು ನೆನಪು ಮಾಡಿಕೊಂಡಿದ್ದಾರೆ. ಒಮ್ಮೆ ಅವರು ಹೊತ್ತಲ್ಲದ ಹೊತ್ತಿನಲ್ಲಿ ಶಾರುಖ್​ ಖಾನ್ (Shah Rukh Khan)​ ಮನೆಗೆ ಹೋಗಿ ಬಾಗಿಲು ಬಡಿದಿದ್ದರು! ‘ಮನ್ನತ್​’ ನಿವಾಸದಲ್ಲಿ ನಡೆದ ಆ ವಿಲಕ್ಷಣ ಘಟನೆಯ ವಿವರ ಕೇಳಿ ಫ್ಯಾನ್ಸ್​ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ಪ್ರಸಂಗವನ್ನು ಅಷ್ಟೇ ಮಜವಾಗಿ ಕಪಿಲ್​ ಶರ್ಮಾ ಅವರು ವಿವರಿಸಿದ್ದಾರೆ. ಅವರು ಶಾರುಖ್​ ಖಾನ್​ ಮನೆಯ ಬಾಗಿಲು ಬಡಿದಾಗ ಮಧ್ಯರಾತ್ರಿ 3 ಗಂಟೆ ಆಗಿತ್ತು! ಆಗ ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು.

ಕಿರುತೆರೆಯ ಕಾರ್ಯಕ್ರಮದಿಂದಾಗಿ ಕಪಿಲ್​ ಶರ್ಮಾಗೆ ಭಾರಿ ಜನಪ್ರಿಯತೆ ಸಿಕ್ಕಿತ್ತು. ಅದರಿಂದಾಗಿ ಅವರಿಗೆ ಕೆಲವು ಕೆಟ್ಟ ಐಡಿಯಾಗಳು ಬರಲು ಆರಂಭಿಸಿದ್ದವು. ಅದರ ಪರಿಣಾಮವಾಗಿಯೇ ಅವರು ಮಧ್ಯರಾತ್ರಿ ಶಾರುಖ್​ ಮನೆಗೆ ನುಗ್ಗಿದ್ದರು. ‘ಅಂದು ನನ್ನ ಕಸಿನ್​ ಬಂದಿದ್ದಳು. ಶಾರುಖ್​ ನಿವಾಸವನ್ನು ನೋಡಬೇಕು ಅಂತ ಆಕೆ ಆಸೆ ವ್ಯಕ್ತಪಡಿಸಿದಳು. ಆಗ ನಾನು ಕುಡಿದಿದ್ದೆ. ಆದರೂ ಆಕೆಯ ಆಸೆ ಪೂರೈಸಲು ಒಪ್ಪಿಕೊಂಡೆ. ಮಧ್ಯರಾತ್ರಿ ಶಾರುಖ್​ ಮನೆ ಬಳಿ ಹೋದೆವು. ಗೇಟ್​ ಓಪನ್​ ಆಗಿತ್ತು. ನಾನು ನನ್ನ ಹೆಸರು ಮತ್ತು ಜನಪ್ರಿಯತೆಯನ್ನು ದುರುಪಯೋಗ ಪಡಿಸಿಕೊಳ್ಳಲು ನಿರ್ಧರಿಸಿದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕಾರನ್ನು ಗೇಟ್​ ಬಳಿ ತೆಗೆದುಕೊಂಡು ಹೋಗುವಂತೆ ನನ್ನ ಡ್ರೈವರ್​ಗೆ ತಿಳಿಸಿದೆ. ಸೆಕ್ಯೂರಿಟಿ ಸಿಬ್ಬಂದಿ ನನ್ನ ಮುಖ ನೋಡಿ ಒಳಗೆ ಬಿಟ್ಟರು. ನಮ್ಮನ್ನು ಶಾರುಖ್​ ಕರೆದಿರಬಹುದು ಎಂದು ಅವರು ಅಂದುಕೊಂಡರು. ಗೇಟ್​ ಒಳಗೆ ಹೋದ ಬಳಿಕ ನಾನು ಮಾಡಿದ್ದು ಸರಿ ಅಲ್ಲ ಎನಿಸಿತು. ಇನ್ನೇನು ಅಲ್ಲಿಂದ ಹೊರಡಬೇಕು ಎಂಬಷ್ಟರಲ್ಲಿ ಶಾರುಖ್​ ಅವರು ಮ್ಯಾನೇಜರ್​ ಬಂದು ನಮ್ಮನ್ನು ಒಳಗೆ ಕರೆದರು’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ನಾನು ಸರಿಯಾಗಿ ಬಟ್ಟೆ ಹಾಕಿರಲಿಲ್ಲ. ನಿಕ್ಕರ್​ ಧರಿಸಿದ್ದೆ. ಮದ್ಯಪಾನ ಮಾಡಿ, ಪಾನ್​ ಜಗಿಯುತ್ತಿದ್ದೆ. ಬಾಗಿಲು ತೆರೆದಾಗ ಗೌರಿ ಖಾನ್​ ಮತ್ತು ಅವರ ಸ್ನೇಹಿತೆಯರು ಕಾಣಿಸಿದರು. ಶಾರುಖ್​ ಖಾನ್​ ನನ್ನನ್ನು ಕರೆದಿರಬಹುದು ಅಂತ ಅವರು ಅಂದುಕೊಂಡು ಒಳಗೆ ಕರೆದುಕೊಂಡು ಹೋದರು. ಅಲ್ಲಿ ಪಾರ್ಟಿ ನಡೆಯುತ್ತಿತ್ತು. ಶಾರುಖ್​ ಖಾನ್​ ಡ್ಯಾನ್ಸ್​ ಮಾಡುತ್ತಿದ್ದರು. ಅಲ್ಲಿ ನಾನು ತಬ್ಬಿಬ್ಬಾದೆ’ ಎಂದು ಕಪಿಲ್​ ಶರ್ಮಾ ಹೇಳಿದ್ದಾರೆ.

‘ಕ್ಷಮಿಸಿ ಶಾರುಖ್​ ಅವರೇ. ಇವಳು ನನ್ನ ಕಸಿನ್​. ನಿಮ್ಮ ಮನೆ ನೋಡಬೇಕು ಅಂತ ಕೇಳಿಕೊಂಡಳು. ಗೇಟ್​ ಓಪನ್​ ಆಗಿತ್ತು. ಅದಕ್ಕೆ ಬಂದುಬಿಟ್ಟೆ ಅಂತ ಶಾರುಖ್​ ಎದುರು ಒಪ್ಪಿಕೊಂಡೆ. ನನ್ನ ಬೆಡ್​ ರೂಮ್​ ಬಾಗಿಲು ಕೂಡ ಓಪನ್​ ಇದೆ ಎನಿಸುತ್ತೆ. ಹಾಗಂತ ಒಳಗೆ ಬಂದು ಬಿಡುತ್ತೀರಾ ಅಂತ ಶಾರುಖ್​ ಕೇಳಿದರು’ ಎಂದು ಆ ಘಟನೆಯನ್ನು ನೆನಪಿಸಿಕೊಂಡು ಕಪಿಲ್​ ಶರ್ಮಾ ನಕ್ಕು ನಗಿಸಿದ್ದಾರೆ.

ಕಪಿಲ್​ ಶರ್ಮಾ ಈ ರೀತಿ ಮಾಡಿದ್ದಕ್ಕೆ ಶಾರುಖ್​ ಬೇಸರ ಮಾಡಿಕೊಂಡಿರಲಿಲ್ಲ. ಕಪಿಲ್​ ಜೊತೆ ಅವರು ಗಂಟೆಗಟ್ಟಲೆ ಕುಣಿದು, ಪಾರ್ಟಿ ಮಾಡಿದರು. ‘ಅಂದು ಆ ಪಾರ್ಟಿಯಿಂದ ಹೊರಟ ಕೊನೆಯ ವ್ಯಕ್ತಿ ನಾನೇ. ನನ್ನನ್ನು ಕಳಿಸಿಕೊಡಲು ಅವರು ಮೆಟ್ಟಿಲುಗಳವರೆಗೆ ಬಂದಿದ್ದರು’ ಎಂದು ಆ ದಿನವನ್ನು ಕಪಿಲ್​ ಶರ್ಮಾ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

ವಿದೇಶದಲ್ಲಿ ಶಾರುಖ್​ ಫ್ಯಾನ್​ ಅಂತ ಹೇಳಿಕೊಂಡ್ರೆ ಸಿಗುತ್ತೆ ವಿಶೇಷ ಗೌರವ; ಸಾಕ್ಷಿ ಸಮೇತ ವಿವರಿಸಿದ ಪ್ರೊಫೆಸರ್​

Follow us on

Related Stories

Most Read Stories

Click on your DTH Provider to Add TV9 Kannada