
ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ತಾರಕಕ್ಕೇರಿದೆ. ಈ ವಾರದ ಟಾಸ್ಕ್ ವೇಳೆ ಪ್ರಶಾಂತ್ ಮತ್ತು ಗಾನವಿ ನಡುವೆ ದೊಡ್ಡ ಮಟ್ಟದ ಕಿರಿಕ್ ನಡೆದಿದೆ. ಆಟದ ಭರದಲ್ಲಿ ಗಾನವಿ ಅವರ ಕತ್ತಿನ ಮೇಲೆ ಪ್ರಶಾಂತ್ ಕಾಲಿಟ್ಟಿದ್ದು, ಮನೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಈ ಘಟನೆಯ ಬೆನ್ನಲ್ಲೇ ಮನೆಯಲ್ಲಿ ನಿಜಕ್ಕೂ ತಪ್ಪು ಯಾರದ್ದು ಎಂಬ ಚರ್ಚೆ ಶುರುವಾಗಿದೆ.
ಬಿಗ್ ಬಾಸ್ ನೀಡಿದ್ದ ಟಾಸ್ಕ್ ಪ್ರಕಾರ, ಎದುರಾಳಿ ತಂಡದ ನಾಯಕರ ಫೋಟೋಗೆ ಬಣ್ಣ ಬಳಿಯಬೇಕಿತ್ತು. ಯಾವ ತಂಡದ ನಾಯಕರ ಫೋಟೋಗೆ ಹೆಚ್ಚು ಬಣ್ಣ ಬಳಿಯಲಾಗುತ್ತದೆಯೋ ಆ ತಂಡ ಸೋತಂತೆ ಎಂದು ನಿಯಮವಿತ್ತು. ಈ ಆಟದಲ್ಲಿ ಗಾನವಿ ಅವರು ಪ್ರಶಾಂತ್ ಅವರ ವಿರುದ್ಧದ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದರು. ಟಾಸ್ಕ್ ಶುರುವಾಗುತ್ತಿದ್ದಂತೆಯೇ ಎರಡೂ ತಂಡಗಳ ಸದಸ್ಯರು ಫೋಟೋ ರಕ್ಷಿಸಿಕೊಳ್ಳಲು ಮತ್ತು ಎದುರಾಳಿ ಫೋಟೋಗೆ ಬಣ್ಣ ಬಳಿಯಲು ಮುಗಿಬಿದ್ದರು.
ಯಶಸ್ ಅವರ ಫೋಟೋಗೆ ಬಣ್ಣ ಬಳಿಯಲು ಗಾನವಿ ಪ್ರಯತ್ನಿಸುತ್ತಿದ್ದಾಗ ತಾಂಡವ್ ಅದನ್ನು ತಡೆಯಲು ಮುಂದಾದರು. ಇದೇ ವೇಳೆ ಗಾನವಿ ತಂಡದ ಧನುಷ್ ಅವರು ಕೂಡ ಯಶಸ್ ಫೋಟೋಗೆ ಬಣ್ಣ ಬಳಿಯಲು ಬಂದರು. ಈ ವೇಳೆ ಧನುಷ್ ಅವರನ್ನು ತಡೆಯಲು ಪ್ರಶಾಂತ್ ವೇಗವಾಗಿ ಓಡಿಬಂದರು. ಈ ನೂಕುನುಗ್ಗಲಿನ ನಡುವೆ ಆಯತಪ್ಪಿದ ಪ್ರಶಾಂತ್, ಗೊತ್ತಿಲ್ಲದೆ ಕೆಳಗೆ ಬಿದ್ದಿದ್ದ ಗಾನವಿ ಅವರ ಕತ್ತಿನ ಮೇಲೆ ಮಂಡಿ ಊರಿದ್ದಾರೆ.
ಪ್ರಶಾಂತ್ ಅವರ ಮಂಡಿ ಕತ್ತಿನ ಮೇಲೆ ಬೀಳುತ್ತಿದ್ದಂತೆಯೇ ಗಾನವಿ ತೀವ್ರ ನೋವಿನಲ್ಲಿ ಒದ್ದಾಡಿದ್ದಾರೆ. ಈ ಘಟನೆಯಿಂದ ತೀವ್ರ ಬೇಸರಗೊಂಡ ಗಾನವಿ, ಇಂತಹ ಅಪಾಯಕಾರಿ ರೀತಿಯಲ್ಲಿ ಆಟವಾಡಲು ನಾನು ಬಿಗ್ ಬಾಸ್ ಮನೆಗೆ ಬಂದಿಲ್ಲ ಎಂದು ಕಣ್ಣೀರು ಹಾಕುತ್ತಾ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಬದಲಾಗಿ ಆಟದ ಭರದಲ್ಲಿ ಗೊತ್ತಿಲ್ಲದೆ ಸಂಭವಿಸಿದ ಅವಘಡ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಾನವಿಗೆ ಮೆಮೋರಿ ಲಾಸ್? ಟಾಸ್ಕ್ ಬಳಿಕ ಏನೂ ನೆನಪಿಲ್ಲ
ಬಿಗ್ ಬಾಸ್ ಮನೆಯಲ್ಲಿ ದೈಹಿಕ ಬಲ ಪ್ರದರ್ಶಿಸುವ ಟಾಸ್ಕ್‌ಗಳನ್ನು ನೀಡಿದಾಗ ಇಂತಹ ಅವಘಡಗಳು ಸಂಭವಿಸುವುದು ಹೊಸದೇನಲ್ಲ. ಗೆಲ್ಲಲೇಬೇಕು ಎಂಬ ಛಲದಲ್ಲಿ ಸ್ಪರ್ಧಿಗಳು ಮೈಮರೆತು ಆಡುವಾಗ ಸಣ್ಣಪುಟ್ಟ ಏಟುಗಳಾಗುವುದು ಸಾಮಾನ್ಯ. ಆದರೆ, ಆಟದ ಭರದಲ್ಲಿ ಸಹ ಸ್ಪರ್ಧಿಗಳ ಸುರಕ್ಷತೆಯನ್ನು ಮರೆಯಬಾರದು ಎಂಬುದು ವೀಕ್ಷಕರ ಅಭಿಪ್ರಾಯ. ಈ ಘಟನೆಗೆ ವಾರಾಂತ್ಯದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:31 am, Thu, 12 November 26