
ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಹಲವಾರು ತಪ್ಪುಗಳು ನಡೆದಿದ್ದವು. ಟಾಸ್ಕ್ ನಡೆಯಲಿಲ್ಲ, ಕ್ಯಾಪ್ಟನ್ಸಿ ಓಟವೇ ನಡೆಯಲಿಲ್ಲ. ಸಾಕಷ್ಟು ಜಗಳುಗಳು ನಡೆದಿವೆ. ಕೆಲವರು ಕೀಳು ಭಾಷೆ ಬಳಸಿದ್ದಾರೆ. ಇದೆಲ್ಲದರ ನ್ಯಾಯ ಪಂಚಾಯಿತಿಯನ್ನು ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಮಾಡುತ್ತಿದ್ದು, ಸಹಜವಾಗಿಯೇ ಕೆಲ ಸ್ಪರ್ಧಿಗಳ ಮೇಲೆ ತುಸು ಗರಂ ಆಗಿದ್ದಾರೆ. ಅದರಲ್ಲೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ಗಾನವಿ ಅಂತೂ ಬಾಯಿಗೆ ಬಿಡುವಿಲ್ಲದೆ ಮಾತನಾಡಿದ್ದು, ತಾಳ್ಮೆಯೇ ಇಲ್ಲದ ರೀತಿ ವರ್ತಿಸಿದ್ದು, ಸುದೀಪ್ ಅವರಿಗೆ ತೀವ್ರ ಬೇಸರ ತರಿಸಿದ್ದು, ಅವರನ್ನು ಪ್ರಮುಖವಾಗಿ ಇರಿಸಿಕೊಂಡು ಇಡೀ ಮನೆಯವರನ್ನೇ ಮನೆ ಬಿಟ್ಟು ಹೋಗಿ ಎಂದರು.
ಸುದೀಪ್ ಅವರು ನಾಮಿನೇಷನ್ ಪ್ರಕ್ರಿಯೆ ಕುರಿತು ಮಾತನಾಡುತ್ತಿದ್ದರು. ಆ ವೇಳೆ ಗಾನವಿ ಅವರನ್ನುದ್ದೇಶಿಸಿ, ‘ತಾಂಡವ್ ಇನ್ನೂ ಮಾತನಾಡಲು ಶುರು ಸಹ ಮಾಡಿರುವುದಿಲ್ಲ ಆಗಲೇ ನೀವು ಅವರಿಗೆ ಪ್ರತ್ಯುತ್ತರ ಕೊಡಲು ರೆಡಿ ಆಗಿಬಿಟ್ಟಿರುತ್ತೀರ. ನಿಮಗೆ ತಾಳ್ಮೆ ಇಲ್ಲ ಎಂದಾದರೆ ದಯವಿಟ್ಟು ಹೊರಗೆ ಹೋಗಿಬಿಡಿ. ನೀವ್ಯಾರೂ ಇಲ್ಲದೇ ಇದ್ದರೂ ಪರವಾಗಿಲ್ಲ, ಪ್ರತಿ ವಾರವೂ ನಾನು ಈ ವೇದಿಕೆಗೆ ಬರುತ್ತೀನಿ, ಹಾಡು ಹಾಡಿಯೋ, ಡ್ಯಾನ್ಸ್ ಮಾಡಿಯೋ ಜನರನ್ನು ರಂಜಿಸುತ್ತೇನೆ. ಶೋ ಕಂಪ್ಲೀಟ್ ಮಾಡುತ್ತೀನಿ’ ಎಂದರು ಸುದೀಪ್.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಆಸಿಯಾ, ಯಶಸ್ ‘ಮಿಡ್ ನೈಟ್ ಆಪರೇಷನ್’
ಸುದೀಪ್ ಅವರು ಮನೆಯ ಎಲ್ಲ ಸದಸ್ಯರಿಗೂ ಹೇಳಿದರಾದರೂ ಅವರ ಮಾತಿನ ಗುರಿ ಇದ್ದಿದ್ದು ಗಾನವಿ ಹಾಗೂ ಇನ್ನೂ ಕೆಲವು ವಿತಂಡ ವಾದಿಗಳಿಗೆ ಮಾತ್ರವೇ ಆಗಿತ್ತು. ಸುದೀಪ್ ಅವರು ಸ್ಪರ್ಧಿಗಳನ್ನೆಲ್ಲ ಮನೆಗೆ ಹೋಗಿ ಎಂದು ಹೇಳುವ ಕೆಲ ಸಮಯದ ಮುಂಚೆಯೂ ಸಹ ಖುದ್ದು ಅವರೇ ಬೇಸರದಿಂದ ವೇದಿಕೆಯಿಂದ ಹೊರಗೆ ನಡೆದಿದ್ದರು. ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕಟಕಟೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದರು. ಗಾನವಿ ಕಟಕಟೆಗೆ ಬಂದಾಗ ಸುದೀಪ್ ಅವರಿಗೂ ಸಹ ಮಾತನಾಡಲು ಅವಕಾಶ ಕೊಡದೆ ಕಾವ್ಯಾ ಜೊತೆ ಅಲ್ಲೇ ಜಗಳಕ್ಕೆ ನಿಂತರು. ಇದರಿಂದ ಬೇಸರಗೊಂಡ ಸುದೀಪ್, ‘ನೀವು ಮಾತನಾಡಿಕೊಳ್ಳಿ ನಾನು ಹೊರಗೆ ಹೋಗುತ್ತೇನೆ’ ಎಂದು ಹೇಳಿದ್ದೆ ವೇದಿಕೆಯಿಂದ ನಡೆದು ಬಿಟ್ಟರು. ಬಳಿಕ ಸುದೀಪ್ ಮರಳಿ ಬಂದಾಗ ಎಲ್ಲರೂ ಸುದೀಪ್ ಅವರ ಬಳಿ ಕ್ಷಮೆ ಕೇಳಿದರು.
ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಗಾನವಿ, ಮಂಜ, ಲಿಖಿತ್ ಅವರುಗಳಿಗೆ ವಿಶೇಷವಾಗಿ ಕ್ಲಾಸ್ ತೆಗೆದುಕೊಂಡರು. ಅವರ ಜೊತೆಗೆ ಇನ್ನೂ ಕೆಲವು ಸ್ಪರ್ಧಿಗಳಿಗೆ ಎಚ್ಚರಿಕೆಯನ್ನೂ ಸಹ ನೀಡಿದರು. ಗಾನವಿ ಅವರಂತೂ ನಾಮಿನೇಷನ್ ದಿನ ತೋರಿದ ತಮ್ಮ ವಿತಂಡ ವಾದದ ವರ್ತನೆಯನ್ನು ಸುದೀಪ್ ಎದುರು ಸಹ ತೋರಿದರು. ಸುದೀಪ್ ಅವರಿಂದ ಟೀಕೆಗೆ ಗುರಿ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ