
ಈ ವಾರ ಧಾರಾವಾಹಿ (Serial) ಪ್ರಿಯರಿಗೆ ಹಬ್ಬ. ಜೀ ಕನ್ನಡ ಚಾನೆಲ್ನಲ್ಲಿ ಡಬಲ್ ಧಮಾಕಾ. ಒಂದೇ ವಾರದಲ್ಲಿ ಎರಡು ಹೊಸ ಮನೊರಂಜನಾ ಸರಕು ಪ್ರದರ್ಶನಗೊಳ್ಳಲಿವೆ. ಜೂನ್ 14 ರಂದು ಮಹಾನಟಿ ಎರಡನೇ ಸೀಸನ್ ಪ್ರಾರಂಭ ಆಗಲಿದೆ. ಎರಡು ದಿನದ ಬಳಿಕ ಅಂದರೆ ಜೂನ್ 16 ರಿಂದ ಹೊಸ ಧಾರಾವಾಹಿ ‘ಕರ್ಣ’ ಪ್ರಸಾರ ಆರಂಭಿಸಲಿದೆ. ಎರಡೂ ಭಿನ್ನ ಬಗೆಯ ಕಾರ್ಯಕ್ರಮಗಳಾದರೂ ಪ್ರೇಕ್ಷಕರಿಗೆ ಭರಪೂರ ಮನೊರಂಜನೆ ಉಣಬಡಿಸಲಿವೆ.
ಮಹಾನಟಿ ಸೀಸನ್ 1 ಯಶಸ್ವಿ ಆಗಿತ್ತು. ಇದೀಗ ‘ಮಹಾನಟಿ ಸೀಸನ್ 2’ ಬರುತ್ತಿದ್ದು ಇನ್ನಷ್ಟು ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ನೀಡಲಾಗುತ್ತಿದೆ. ಮೊದಲ ಆವೃತ್ತಿಯ ವಿಜೇತೆ ಪ್ರಿಯಾಂಕಾ, ಸ್ಯಾಂಡಲ್ವುಡ್ ನ ನಿರ್ದೇಶಕ ತರುಣ್ ಸುಧೀರ್ ಅವರ ಚಿತ್ರದಲ್ಲಿ ನಾಯಕಿಯಾಗಿ ನಟಿಯಾಗಿ ನಟಿಸುತ್ತಿರುವುದು ಈ ಶೋನ ಯಶಸ್ಸಿಗೆ ಉದಾಹರಣೆ. ಈಗ, ಜೂನ್ 14ರಂದು ರಾತ್ರಿ 7:30ಕ್ಕೆ ಪ್ರಾರಂಭವಾಗಲಿರುವ ಮಹಾನಟಿ ಸೀಸನ್ 2 ನಲ್ಲಿ 18-25 ವಯಸ್ಸಿನ 12 ಪ್ರತಿಭಾವಂತ ಯುವತಿಯರು ಭಾಗವಹಿಸಲಿದ್ದಾರೆ. ಇನ್ನು 18 ವಾರಗಳ ಕಾಲ ಇವರಿಗೆ ರಂಗಭೂಮಿ ಕಲಾವಿದರು, ತಾಂತ್ರಿಕ ತಜ್ಞರಿಂದ ನಟನೆ ಸೇರಿದಂತೆ ಹಲವು ಬೇರೆ ಬೇರೆ ರೀತಿಯ ತರಬೇತಿಗಳು ಸಿಗಲಿವೆ. ನಿಶ್ವಿಕಾ ನಾಯ್ಡು, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಈ ಶೋ ನ ತೀರ್ಪುಗಾರರಾಗಿದ್ದು ಎವರ್ಗ್ರೀನ್ ನಟ ರಮೇಶ್ ಅರವಿಂದ್ ಅವರು ಮಾಸ್ಟರ್ ಮೈಂಡ್ ಆಗಿ ಇವರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕನ್ನಡದ ಅಚ್ಚುಮೆಚ್ಚಿನ ನಿರೂಪಕಿ ಈ ಶೋನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಇನ್ನು ‘ಕರ್ಣ’ ಹೆಸರಿನ ಹೊಸ ಧಾರಾವಾಹಿ ಜೂನ್ 16 ರಿಂದ ಜೀ ಕನ್ನಡದಲ್ಲಿ ಪ್ರದರ್ಶನಗೊಳ್ಳಲಿದೆ. ಶ್ರೀಮಂತ ಕುಟುಂಬದ ರಾಮಕೃಷ್ಣ ವಸಿಷ್ಠ ರಕ್ಷಿಸಿ ತಂದ ಮಗು ‘ಕರ್ಣ’ನ ಕತೆ ಇದು. ತಾತನಿಗೆ ಕೊಟ್ಟ ಮಾತಿನಂತೆ ದೊಡ್ಡವನಾದ ಮೇಲೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕಿರಣ್ ರಾಜ್ ಕರ್ಣನಾಗಿ ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ವೀಕ್ಷಕರ ಮುಂದೆ ಬಂದಿದ್ದಾರೆ. ಪ್ರೋಮೊ ಹಾಗೂ ವಿಶೇಷ ಗೀತೆಯಲ್ಲಿ ಭವ್ಯ ಗೌಡ ಹಾಗು ಕಿರಣ್ ರಾಜ್ ಅವರ ಜೋಡಿ ಪ್ರೇಕ್ಷಕರ ಮನ ಗೆದ್ದಿದೆ. ಜೊತೆಗೆ ನಮ್ರತಾ ಗೌಡ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಚಂದನವನದ ಹಿರಿಯ ಕಲಾವಿದರಾದ ನಾಗಭರಣ, ಅಶೋಕ್ ಮತ್ತು ಮಹಾಲಕ್ಷ್ಮಿ ವಸಿಷ್ಠ ಈ ಧಾರಾವಾಹಿಯಲ್ಲಿ ವಿಭಿನ್ನ ಪಾತ್ರದ ಮೂಲಕ ವೀಕ್ಷಕರಿಗೆ ಮತ್ತಷ್ಟು ಮನರಂಜನೆಯನ್ನು ನೀಡಲಿದ್ದಾರೆ. ಮಹಾನಟಿ ಸೀಸನ್ 2 ಇದೇ ಜೂನ್ 14 ರಿಂದ ಮತ್ತು ಕರ್ಣ ಜೂನ್ 16 ರಿಂದ ರಾತ್ರಿ 8 ಗಂಟೆಗೆ ಜೀ ಕನ್ನಡದಲ್ಲಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ