ಅಪರೂಪದ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ

Puttakkana Makkalu serial: ಉಮಾಶ್ರೀ, ಮಂಜುಭಾಷಿಣಿ, ರಮೇಶ್ ಪಂಡಿತ್ ಇನ್ನೂ ಹಲವು ಹಿರಿಯ ಕಲಾವಿದರು ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಾವಿರ ಕಂತುಗಳನ್ನು ಪೂರೈಸಿದೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕೆಲವು ಅಪರೂಪದ ದಾಖಲೆಗಳನ್ನು ಸಹ ಬರೆದಿದೆ. ಧಾರಾವಾಹಿ ಯಶಸ್ವಿಯಾಗಿ ಸಾಗುತ್ತಿರುವುದಕ್ಕೆ ಧಾರಾವಾಹಿ ತಂಡ ಸಂಭ್ರಮಾಚರಣೆ ಮಾಡಿದೆ.

ಅಪರೂಪದ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ
Puttakkana Makkalu

Updated on: Jun 08, 2025 | 6:45 PM

ನಟಿ ಉಮಾಶ್ರಿ (Umashree) ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಯಶಸ್ವಿಯಾಗಿ 1000 ಕಂತುಗಳನ್ನು ಪೂರೈಸಿದೆ. 2021 ರ ಡಿಸೆಂಬರ್ 13 ರಂದು ಪ್ರಸಾರ ಆರಂಭಿಸಿದ ಈ ಧಾರಾವಾಹಿ ನಾಲ್ಕು ವರ್ಷಗಳ ಸತತ ಪ್ರಸಾರ ಕಂಡಿದೆ. ಈಗಲೂ ಕಾಣುತ್ತಿದೆ. ಧಾರಾವಾಹಿ ಪ್ರಸಾರ ಆರಂಭಿಸಿದ ಆರಂಭದಲ್ಲಿ ಮೊದಲ ವಾರವೇ ದಾಖಲೆಯ ಟಿಆರ್​​ಪಿ ಕಂಡಿತ್ತು ಈ ಧಾರಾವಾಹಿ. ಆರಂಭದ ಎಪಿಸೋಡುಗಳನ್ನು ನೋಡಿ, ಸಣ್ಣ ಪರದೆಯ ಸಿನಿಮಾ ಎಂದು ಮೆಚ್ಚುಗೆಗೆ ಪ್ರಾಪ್ತವಾಗಿತ್ತು. ಹಲವು ದಾಖಲೆಗಳನ್ನು ಈ ಧಾರಾವಾಹಿ ತಮ್ಮ ಮುಡಿಗೇರಿಸಿಕೊಂಡಿದೆ.

ಆರೂರು ಜಗದೀಶ್ ನಿರ್ದೇಶನ ಮಾಡಿರುವ ಈ ಧಾರಾವಾಹಿ ರಾಜ್ಯದ ಮಾತ್ರವಲ್ಲದೆ ಅನಿವಾಸಿ ಕನ್ನಡಿಗರ ಮೆಚ್ಚಿನ ಧಾರಾವಾಹಿ ಆಗಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯ, ಹೊರ ದೇಶಗಳಲ್ಲಿಯೂ ಈ ಧಾರಾವಾಹಿಗೆ ಅಭಿಮಾನಿಗಳಿದ್ದಾರೆ. ನಿರ್ಮಾಪಕಿ ಸ್ಮಿತಾ ಜೆ ಶೆಟ್ಟಿಯವರ, ಜೆ ಎಸ್ ಪ್ರೊಡಕ್ಷನ್ಸ್ ಸಂಸ್ಥೆಯು ‘ಶುಭ ವಿವಾಹ, ಜೋಡಿ ಹಕ್ಕಿ, ಜೊತೆ ಜೊತೆಯಲಿ’ ಯಂತಹ ಯಶಸ್ವಿ ಧಾರಾವಾಹಿಗಳನ್ನು ನೀಡಿದ್ದು, ಈಗ ‘ಪುಟ್ಟಕ್ಕನ ಮಕ್ಕಳು’ ಸಾವಿರ ಕಂತು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಉಮಾಶ್ರೀ, ಮಂಜು ಭಾಷಿಣಿ, ರಮೇಶ್ ಪಂಡಿತ್, ಸಾರಿಕಾ, ಗುರು ಹೆಗ್ಡೆ ಇನ್ನೂ ಕೆಲವು ಹಿರಿಯ ಕಲಾವಿದರ ಜೊತೆಗೆ, ಧನುಷ್, ಅಕ್ಷರ, ವಿದ್ಯಾ, ಶಿಲ್ಪ, ಅನಿರೀಶ್, ಮುಂತಾದ ಉದಯೋನ್ಮುಖ ಕಲಾವಿದರ ತಾರಾಗಣ ಹೊಂದಿರುವ ಪುಟ್ಟಕ್ಕನ ಮಕ್ಕಳು, ರಾಜ್ಯದ ಪ್ರತಿ ಮನೆಯಲ್ಲಿಯೂ ಸ್ಥಾನ ಪಡೆದಿದೆ. ಧಾರಾವಾಹಿಯಲ್ಲಿ ನಟಿಸಿದ ಕಲಾವಿದರಿಗೆ ಹೊಸ ಜೀವನವನ್ನು ನೀಡಿದೆ.

ಬರಹಗಾರರಾದ ಸತ್ಯಕಿಯವರ ಚಿತ್ರಕಥೆ ಮತ್ತು ಸಂಭಾಷಣೆ ಈ ಧಾರಾವಾಹಿಯ ಜೀವಾಳ. ಪ್ರಧಾನ ನಿರ್ದೇಶಕರಾದ ಆರೂರು ಜಗದೀಶ್, ಸಂಚಿಕೆ ನಿರ್ದೇಶಕರಾದ ಮಹೇಶ್ ಸಾರಂಗ್, ಸಹ ನಿರ್ದೇಶಕರಾದ ಮುರಳಿ, ಸಂಕಲನರಾದ ಜಯಚಂದ್ರ, ಹಾಗು ಪ್ರೊಡಕ್ಷನ್ ಮ್ಯಾನೇಜರಿಂದ ಹಿಡಿದು, ಸೆಟ್ ಹುಡುಗರು, ಕ್ಯಾಮೆರಾ ಮತ್ತು ಲೈಟ್ ವಿಭಾಗ, ಮೇಕಪ್, ಊಟೋಪಚಾರ, ಆಫೀಸಿನ ಅಕೌಂಟ್ ಸೆಕ್ಷನ್ ಹೀಗೆ ಎಲ್ಲರ ಶ್ರಮವೂ ಈ ಧಾರಾವಾಹಿಯ ಯಶಸ್ಸಿಗೆ ಕಾರಣವಾಗಿದ್ದಾರೆ.

ಇದನ್ನೂ ಓದಿ:ಹೊಸ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಐಶ್ವರ್ಯಾ; ನೆಗೆಟಿವ್ ಪಾತ್ರ

ಈ ಧಾರಾವಾಹಿ ಕೇವಲ ಮನೊರಂಜನೆಗೆ ಮಾತ್ರವೇ ಸೀಮಿತ ಆಗದೆ. ಸಾಕಷ್ಟು ಸಾಮಾಜಿಕ ವಿಷಯಗಳನ್ನು ಚರ್ಚಿಸುತ್ತಾ ಬಂದಿದೆ. ಕೌಟುಂಬಿಕ ಮೌಲ್ಯಗಳು, ಹೊಂದಾಣಿಕೆ, ತ್ಯಾಗ, ಪ್ರಾಮಾಣಿಕತೆ, ಸಮಸ್ಯೆಗಳನ್ನು ಎದುರಿಸುವ ಛಲ ಇನ್ನಿತರೆ ಜೀವನ ಪಾಠಗಳನ್ನು ಪುಟ್ಟಕ್ಕ ಧಾರಾವಾಹಿಯಲ್ಲಿ ಬೋಧಿಸುತ್ತಾ ಬಂದಿದ್ದಾಳೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸ್ಪೂರ್ತಿಯಿಂದ ಹೋಟೆಲ್ ಆರಂಭಿಸಿದ ಮಹಿಳೆಯರು ರಾಜ್ಯದಲ್ಲಿದ್ದಾರೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ 1000 ಕಂತು ಪೂರೈಸಿದ ಖುಷಿಯಲ್ಲಿ ಧಾರಾವಾಹಿ ತಂಡವು ಸಂಭ್ರಮಾಚರಣೆ ಮಾಡಿದ್ದು, ಉಮಾಶ್ರೀ ಹಾಗೂ ಇತರೆ ಕಲಾವಿದರು, ತಂತ್ರಜ್ಞರಿಗೆ ಅಭಿನಂದನೆ ಸಲ್ಲಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ