
ಜೀ ಸಂಸ್ಥೆ (ZEEL) ಭಾರತದ ಬಲು ಜನಪ್ರಿಯ ಮತ್ತು ಬಹು ದೊಡ್ಡ ಎಂಟರ್‌ಟೈನ್‌ಮೆಂಟ್ ಸಂಸ್ಥೆ. ಹಲವಾರು ಭಾಷೆಗಳಲ್ಲಿ ಜನಪ್ರಿಯ ಟಿವಿ ಚಾನೆಲ್ಗಳು, ಸಿನಿಮಾ ನಿರ್ಮಾಣ ಸಂಸ್ಥೆ, ಒಟಿಟಿ, ಮಾಧ್ಯಮ ಸಂಸ್ಥೆ, ಮ್ಯೂಸಿಕ್ ಸಂಸ್ಥೆ ಇನ್ನೂ ಹಲವನ್ನು ಜೀ ಹೊಂದಿದೆ. ಆದರೆ ಇದೀಗ ಜೀ ಎಂಟರ್‌ಟೈನ್‌ಮೆಂಟ್ ಮೇಲೆ ಸೆಬಿಯು ಭಾರಿ ದೊಡ್ಡ ದಂಡವನ್ನು ಹಾಕಿರವುದು ಮಾತ್ರವಲ್ಲದೆ ಜೀ ಸಂಸ್ಥೆಗೆ ನಿಷೇಧವನ್ನು ಸಹ ಹೇರಿದೆ.
ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI), ಭದ್ರತಾ ಕಾನೂನುಗಳ ಉಲ್ಲಂಘನೆ ಮತ್ತು ಅಧಿಕೃತ ಅನುಮತಿಯಿಲ್ಲದೆ ಕಂಪನಿಯ ಆಸ್ತಿಯನ್ನು ಅಡಮಾನವಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 1.48 ಕೋಟಿ ರೂಪಾಯಿಗಳ (14.8 ಮಿಲಿಯನ್ ರೂಪಾಯಿ) ಭಾರಿ ದಂಡವನ್ನು ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಗೆ ವಿಧಿಸಿದೆ. ಅಲ್ಲದೆ ಕಂಪೆನಿ ಮತ್ತು ಅದರ ಕೆಲವು ಪ್ರಮುಖರ ಮೇಲೆ ನಿಷೇಧವನ್ನು ಹೇರಿದೆ.
ಹೈದರಾಬಾದ್‌ನಲ್ಲಿರುವ ಝೀ ಎಂಟರ್‌ಟೈನ್‌ಮೆಂಟ್ ಕಂಪನಿಗೆ ಸೇರಿದ ಭೂಮಿಯನ್ನು, ಎಸೆಲ್ ಗ್ರೂಪ್‌ನ (Essel Group) ಇತರೆ ಕಂಪನಿಗಳು ಪಡೆದಿದ್ದ ಸುಮಾರು 726 ಕೋಟಿ ರೂ.ಗಳ ಸಾಲಕ್ಕೆ ಯಾವುದೇ ಅಧಿಕೃತ ಅನುಮೋದನೆ ಪಡೆಯದೆ ಹೆಚ್ಚುವರಿ ಭದ್ರತೆಯಾಗಿ (ಕೊಲ್ಯಾಟರಲ್) ಅಡಮಾನವಿಡಲಾಗಿತ್ತು. ಈ ಸಂಬಂಧ ನಡೆಸಿದ ಸುದೀರ್ಘ ತನಿಖೆಯ ಬಳಿಕ ಸೆಬಿ ಶುಕ್ರವಾರ ರಾತ್ರಿ ಸುಮಾರು 150 ಪುಟಗಳ ಅಂತಿಮ ಆದೇಶವನ್ನು ಹೊರಡಿಸಿದೆ. ಆದೇಶದಂತೆ ‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ (ZEEL) ದಂಡದ ಜೊತೆಗೆ ನಿರ್ದಿಷ್ಟ ಅವಧಿಯ ವರೆಗೆ ನಿಷೇಧವನ್ನು ಸಹ ಹೇರಲಾಗಿದೆ.
ಇದನ್ನೂ ಓದಿ:ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ
ಜೀ ಎಂಟರ್‌ಟೈನ್‌ಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (MD & CEO) ಪುನೀತ್ ಗೋಯೆಂಕಾ ಮತ್ತು ಸಂಸ್ಥೆಯ ಸ್ಥಾಪಕ ಹಾಗೂ ಅಧ್ಯಕ್ಷ ಎಮೆರಿಟಸ್ ಸುಭಾಷ್ ಚಂದ್ರ ಅವರಿಗೆ ಸೆಬಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸದಂತೆ ಒಂದು ವರ್ಷದ ಕಾಲಾವಧಿಗೆ ನಿರ್ಬಂಧ ವಿಧಿಸಿದೆ. ಕಂಪನಿಗೂ ಕೂಡ ಎರಡು ತಿಂಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ನಿಷೇಧ ಹೇರಲಾಗಿದೆ.
ಕಂಪನಿಯ ಆಸ್ತಿಗಳನ್ನು ಹೂಡಿಕೆದಾರರ ಹಿತಾಸಕ್ತಿಗೆ ವಿರುದ್ಧವಾಗಿ, ಸರಿಯಾದ ಷೇರುದಾರರ ಅಥವಾ ಆಡಿಟ್ ಸಮಿತಿಯ ಅನುಮೋದನೆ ಪಡೆಯದೆ ಪ್ರಮೋಟರ್‌ಗಳ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗಿದೆ ಎಂದು ಸೆಬಿ ಮಾಡಿರುವ ತನಿಖೆಯಿಂದ ತಿಳಿದುಬಂದಿದೆ. ನಿಯಮಗಳನ್ನು ಗಾಳಿಗೆ ತೂರಿ ಎಸೆಲ್ ಗ್ರೂಪ್‌ನ ಘಟಕಗಳಿಗೆ ನೆರವಾಗಲು ಕಂಪನಿಯ ಆಸ್ತಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸೆಬಿ ತನ್ನ ಆದೇಶದಲ್ಲಿ ಕಟುವಾಗಿ ಟೀಕಿಸಿದೆ.
ಜೀ ಎಂಟರ್‌ಟೈನ್‌ಮೆಂಟ್ (ZEEL)ಗೆ 30 ಲಕ್ಷ ರೂಪಾಯಿ ದಂಡ ಮತ್ತು 2 ತಿಂಗಳು ಷೇರು ಮಾರುಕಟ್ಟೆ ನಿಷೇಧ. ಸಂಸ್ಥೆಯ ಸಂಸ್ಥಾಪಕ ಮತ್ತು ಚೇರ್ಮನ್ ಸುಭಾಷ್ ಚಂದ್ರ ಅವರಿಗೆ 60 ಲಕ್ಷ ರೂ. ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಯಿಂದ ನಿಷೇಧ. ಸಂಸ್ಥೆಯ ವ್ಯವಸ್ಥಾಪಕ ಮತ್ತು ಸಿಇಓ ಪುನೀತ್ ಗೋಯೆಂಕಾ ಅವರಿಗೆ 58 ಲಕ್ಷ ರೂಪಾಯಿ ದಂಡ ಮತ್ತು 1 ವರ್ಷ ಷೇರು ಮಾರುಕಟ್ಟೆಗೆ ನಿಷೇಧವನ್ನು ಸೆಬಿ ಹೇರಿದೆ.
‘ಜೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್’ ಷೇರು ದರ ಈಗ 114.8 ರೂಪಾಯಿಗಳಿದೆ. ಸೋಮವಾರ ಮಾರುಕಟ್ಟೆ ತೆರೆದ ಬಳಿಕ ಷೇರು ದರ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಜೀ ಮೀಡಿಯಾ ಕಾರ್ಪೊರೇಷನ್ ಲಿಮಿಟೆಡ್ನ ಷೇರು ದರ 7.54 ರೂಪಾಯಿಗಳಿದೆ. ಕಳೆದ ಕೆಲವು ವರ್ಷಗಳಿಂದಲೂ ಈ ಷೇರು ಕಳಪೆ ಪ್ರದರ್ಶನವನ್ನೇ ತೋರುತ್ತಾ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:25 pm, Sun, 2 August 26