ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ ‘ಸಿಗ್ಮಾ’ ಸಿನಿಮಾ ರಿಲೀಸ್ ಮುಂದೂಡಿಕೆ
ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡಿರುವ ಸಿನಿಮಾ ಎಂಬ ಕಾರಣಕ್ಕೆ ‘ಸಿಗ್ಮಾ’ ಮೇಲೆ ಜನರಿಗೆ ನಿರೀಕ್ಷೆ ಮೂಡಿದೆ. ಸಂದೀಪ್ ಕಿಶನ್ ನಟಿಸಿರುವ ಈ ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಗಿದೆ. ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್’ ಈ ಬಗ್ಗೆ ಮಾಹಿತಿ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ (Thalapathy Vijay) ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮಾ’ (Sigma) ಬಿಡುಗಡೆ ದಿನಾಂಕ ಮತ್ತೆ ಮುಂದೂಡಲ್ಪಟ್ಟಿದೆ. ಮೊದಲು ಜುಲೈ 31ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ವಿಳಂಬವಾಗಿತ್ತು. ಇದೀಗ ಚಿತ್ರತಂಡ ಹೊಸ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ. ಜೇಸನ್ ಸಂಜಯ್ (Jason Sanjay) ಯಾವ ರೀತಿ ನಿರ್ದೇಶನ ಮಾಡಿದ್ದಾರೆ ಎಂಬುದನ್ನು ನೋಡಲು ಪ್ರೇಕ್ಷಕರು ಇನ್ನೂ ಕೆಲವು ದಿನಗಳು ಕಾಯಬೇಕಾಗಿದೆ.
ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಲೈಕಾ ಪ್ರೊಡಕ್ಷನ್ಸ್’ ಗುರುವಾರ (ಆಗಸ್ಟ್ 20) ಹೊಸ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಸಿಗ್ಮಾ’ ಚಿತ್ರವು ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಶುಭ ಸಂದರ್ಭದಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ತಿಳಿಸಿದೆ. ಜೇಸನ್ ಸಂಜಯ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ‘ಅಕ್ಟೋಬರ್ 2ರಂದು ರೋಚಕ ಕಳ್ಳತನದ ಕಥೆ ಚಿತ್ರಮಂದಿರಗಳಲ್ಲಿ ಧಮಾಕಾ ಸೃಷ್ಟಿಸಲಿದೆ’ ಎಂದು ಬರೆದುಕೊಂಡಿದ್ದಾರೆ.
ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಥ್ರಿಲ್ಲರ್ ಕಥಾಹಂದರ ಇರಲಿದೆ. ಈ ವರ್ಷದ ಆರಂಭದಲ್ಲಿ ‘ಸಿಗ್ಮಾ ಸ್ಟೈಲ್’ ಎಂಬ ಮೊದಲ ಹಾಡನ್ನು ನಟ ದುಲ್ಕರ್ ಸಲ್ಮಾನ್ ಬಿಡುಗಡೆ ಮಾಡಿ ಜೇಸನ್ ಸಂಜಯ್ ಮತ್ತು ಇಡೀ ತಂಡಕ್ಕೆ ಶುಭ ಹಾರೈಸಿದ್ದರು. ಎಸ್. ತಮನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಜೇಸನ್ ಸಂಜಯ್ ಅವರು ತಂದೆ ದಳಪತಿ ವಿಜಯ್ ಅವರಂತೆ ನಟನೆಯತ್ತ ಗಮನ ಹರಿಸದೇ, ಅಮೆರಿಕದಲ್ಲಿ ಸಿನಿಮಾ ನಿರ್ಮಾಣ ಮತ್ತು ಚಿತ್ರಕಥೆ ಬರಹದ ತರಬೇತಿ ಪಡೆದುಕೊಂಡಿದ್ದಾರೆ. ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವುದು ಪ್ರೇಕ್ಷಕರಲ್ಲಿ ಮತ್ತು ವಿಜಯ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ತಂದೆ ವಿಜಯ್ ಬೆಂಬಲ ನೆನೆದು ಭಾವುಕರಾದ ಮಗ ಜೇಸನ್
ದಳಪತಿ ವಿಜಯ್ ಮತ್ತು ಸಂಗೀತಾ ಸ್ವರ್ಣಲಿಂಗಂ ಅವರ ಪುತ್ರನೇ ಜೇಸನ್ ಸಂಜಯ್. ಇತ್ತೀಚಿನ ವರ್ಷಗಳಲ್ಲಿ ಸಂಜಯ್ ಅವರು ವಿಜಯ್ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವಿಜಯ್ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಲೂ ಆ ಕಾರ್ಯಕ್ರಮಕ್ಕೆ ಜೇಸನ್ ಸಂಜಯ್ ಅವರು ಆಗಮಿಸಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




