
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯು ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಕಾರಣ ಸಿನಿಮಾ ಬಿಡುಗಡೆ ಕೋರ್ಟ್ ಮೆಟ್ಟಿಲೇರಿದೆ. ಇದರಿಂದಾಗಿ ಅನಿವಾರ್ಯವಾಗಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ. ‘ಜನ ನಾಯನಗನ್’ ಸಿನಿಮಾಕ್ಕೆ ಕಾತರದಿಂದ ಕಾಯುತ್ತಿದ್ದ ವಿಜಯ್ ಅಭಿಮಾನಿಗಳಿಗೆ ಇದರಿಂದ ತೀವ್ರ ಬೇಸರ ಸಹ ಆಗಿದೆ. ಆದರೆ ‘ಜನ ನಾಯಗನ್’ ಬಿಡುಗಡೆ ಆಗದಿದ್ದರೆ ಏನಂತೆ ಈ ಸಂಕ್ರಾಂತಿ ಅಥವಾ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬಕ್ಕೆ ಚಿತ್ರಮಂದಿರಕ್ಕೆ ವಿಜಯ್ ಬರುತ್ತಿದ್ದಾರೆ.
ವಿಜಯ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಥೇರಿ’ ಮರು ಬಿಡುಗಡೆ ಆಗುತ್ತಿದೆ. 2016 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಅಟ್ಲಿ ನಿರ್ದೇಶನದ ಈ ಸಿನಿಮಾನಲ್ಲಿ ವಿಜಯ್ ಮೂರು ಭಿನ್ನ ಶೇಡ್ನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾಕ್ಕೆ ಸಮಂತಾ ಮತ್ತು ಆಮಿ ಜಾಕ್ಸನ್ ನಾಯಕಿಯಾಗಿದ್ದರು. ಆಕ್ಷನ್, ಸಸ್ಪೆನ್ಸ್, ಕಾಮಿಡಿ ಮತ್ತು ರೊಮ್ಯಾನ್ಸ್ ತುಂಬಿದ್ದ ಈ ಸಿನಿಮಾ ಆಗ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾ ಮತ್ತೆ ಬಿಡುಗಡೆ ಆಗುತ್ತಿದೆ.
ಈ ಸಿನಿಮಾವನ್ನು ಜನವರಿ 15ಕ್ಕೆ ಮರು ಬಿಡುಗಡೆ ಮಾಡಲಾಗುತ್ತಿದೆ. ಜನವರಿ 09 ರಂದು ಬಿಡುಗಡೆ ಆಗಬೇಕಿದ್ದ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ಮುಂದೂಡಲ್ಪಟ್ಟ ಕಾರಣದಿಂದಾಗಿ ಇದೀಗ ವಿಜಯ್ ನಟನೆಯ ‘ಥೇರಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಪ್ರತಿ ಪೊಂಗಲ್ ಹಬ್ಬಕ್ಕೂ ವಿಜಯ್ ಅವರ ಸಿನಿಮಾ ಪಕ್ಕಾ ಇರುತ್ತಿತ್ತು. ಆದರೆ ಈ ವರ್ಷ ಅನಿವಾರ್ಯ ಕಾರಣಗಳಿಂದಾಗಿ ಅವರ ಸಿನಿಮಾ ಬಿಡುಗಡೆಗೆ ತಯಾರಿದ್ದರೂ ಬಿಡುಗಡೆ ಆಗುತ್ತಿಲ್ಲ. ಪೊಂಗಲ್ಗೆ ವಿಜಯ್ ಸಿನಿಮಾ ಇಲ್ಲ ಎಂಬ ಕೊರತೆ ನೀಗಿಸಲೆಂದು ಇದೀಗ ‘ಥೇರಿ’ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.
ಇದನ್ನೂ ಓದಿ:‘ಜನ ನಾಯಗನ್’ ಸ್ಪರ್ಧೆ ತಪ್ಪಿಸಿಕೊಂಡ ‘ಪರಾಶಕ್ತಿ’ಗೆ ಆರಂಭಿಕ ಗೆಲುವು
‘ಜನ ನಾಯಗನ್’ ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಜನವರಿ 09 ರಂದು ಸಿನಿಮಾ ತೆರೆಗೆ ಬರುವುದು ಖಾತ್ರಿ ಆಗಿತ್ತು. ಆದರೆ ಸೆನ್ಸಾರ್ ಮಂಡಳಿ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿದೆ.ಕೆ ವಿಎನ್ ಪ್ರೊಡಕ್ಷನ್ಸ್ನ ಮಾಲೀಕರಾದ ವೆಂಕಟ್ ನಾರಾಯಣ್ ವಿಡಿಯೋನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ ‘ಜನ ನಾಯಗನ್’ ಸಿನಿಮಾವನ್ನು 18 ಡಿಸೆಂಬರ್ 2025 ರಂದು ಸಿಬಿಎಫ್ಸಿಗೆ ಸಲ್ಲಿಕೆ ಮಾಡಲಾಗಿತ್ತು. 22ರ ಡಿಸೆಂಬರ್ ತಿಂಗಳಲ್ಲಿ ಸಿಬಿಎಫ್ಸಿಯು ಇಮೇಲ್ ಮಾಡಿ, ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದು, ಸಿನಿಮಾಕ್ಕೆ ಕೆಲವು ಕಟ್ಗಳನ್ನು ಸಹ ಸೂಚಿಸಿತ್ತು. ಅದರಂತೆ ಚಿತ್ರತಂಡವು ಸೆನ್ಸಾರ್ ಮಂಡಳಿ ಸೂಚಿಸಿದ ಬದಲಾವಣೆಗಳನ್ನು ಮಾಡಿ ಡಿಸೆಂಬರ್ 22ಕ್ಕೆ ಮತ್ತೆ ಸಿನಿಮಾವನ್ನು ಸಿಬಿಎಫ್ಸಿಗೆ ಸಲ್ಲಿಕೆ ಮಾಡಿತ್ತು. ಇಷ್ಟೆಲ್ಲ ಮಾಡಿದರೂ ಸಹ ಕೇವಲ ಒಂದು ಅಜ್ಞಾತ ದೂರಿನಿಂದಾಗಿ ಸಿನಿಮಾವನ್ನು ರಿವ್ಯೂ ಕಮಿಟಿಗೆ ಕಳಿಸಲಾಗಿತ್ತು. ಇದೇ ಕಾರಣಕ್ಕೆ ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲೇರಿದರು. ಅಲ್ಲಿ ಯು/ಎ ಪ್ರಮಾಣ ಪತ್ರ ನೀಡುವಂತೆ ಆದೇಶಿಸಲಾಗಿತ್ತು, ಆದರೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಅದೇ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಮುಂದಿನ ವಿಚಾರಣೆ ಜನವರಿ 27ಕ್ಕೆ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ