
ಯಶ್ (Yash) ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ಬಲು ಅದ್ಧೂರಿಯಾಗಿ ರಿಲೀಸ್ ಆಗಿದೆ. ಸಿನಿಮಾಕ್ಕಾಗಿ ನಾಲ್ಕು ವರ್ಷಗಳನ್ನು ಯಶ್ ಮೀಸಲಿಟ್ಟಿದ್ದರು. ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ತೆರೆಗೆ ತರಲಾಗಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಹಲವು ವಿಶೇಷತೆಗಳಿವೆ. ಈ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್ನಲ್ಲಿಯೇ ಚಿತ್ರತಂಡ ಈ ವಿಷಯವನ್ನು ಸ್ಪಷ್ಟಪಡಿಸಿತ್ತು. ಸಿನಿಮಾನಲ್ಲಿ ಬರೋಬ್ಬರಿ ಐವರು ನಾಯಕಿಯರಲಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್. ಈ ಐವರು ನಾಯಕಿಯರಲ್ಲಿ ಯಾರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ? ಯಾರ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ?
ಸಿನಿಮಾನಲ್ಲಿ ಇಬ್ಬರಿಗಿಂಲೂ ಹೆಚ್ಚು ನಾಯಕರು ಅಥವಾ ನಾಯಕಿಯರು ಇದ್ದಾಗ ಕೆಲವರಿಗೆ ಹೆಚ್ಚು ಪ್ರಾಧಾನ್ಯತೆ ಕೆಲವರಿಗೆ ಕಡಿಮೆ ಆಗುವುದು ಸಾಮಾನ್ಯ. ಈ ಹಿಂದೆ ಬಂದಿರುವ ಹಲವು ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ಇದು ಆಗಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಹೆಚ್ಚು ಐದು ನಾಯಕಿಯರಿದ್ದಾರೆ, ನಾಯಕ ಒಬ್ಬನೇ. ಐದೂ ನಾಯಕಿಯರು ಪ್ರತಿಭಾನ್ವಿತರೇ. ನಯನತಾರಾ, ಕಿಯಾರಾ, ತಾರಾ, ಹುಮಾ, ರುಕ್ಮಿಣಿ ಎಲ್ಲರೂ ಸ್ಟಾರ್ ನಾಯಕಿಯರೇ. ಈ ಐವರಲ್ಲಿ ಯಾರ ಪಾತ್ರಕ್ಕೆ ನಿರ್ದೇಶಕಿ ಹೆಚ್ಚು ಮಹತ್ವ ನೀಡಿದ್ದಾರೆ.
ಸಿನಿಮಾನಲ್ಲಿ ಐವರು ನಾಯಕಿಯರಿದ್ದರೂ ನಯನತಾರಾ ಪಾತ್ರ, ಯಶ್ಗೆ ಜೋಡಿಯಲ್ಲ ಬದಲಿಗೆ ಯಶ್ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ವಿಷಯ ಖುದ್ದು ಯಶ್ ಸಿನಿಮಾ ರಿಲೀಸ್ಗೆ ಮುಂಚೆಯೇ ಹೇಳಿದ್ದರು. ಸಿನಿಮಾದ ನಿರ್ದೇಶಕಿ ಗೀತೂ ಮೋಹನ್ದಾಸ್, ತಮ್ಮ ನಾಯಕನ ಪಾತ್ರಕ್ಕೆ ಕೊಟ್ಟಷ್ಟೇ ಪ್ರಾಧಾನ್ಯತೆಯನ್ನು ನಾಯಕಿಯರ ಪಾತ್ರಕ್ಕೂ ನೀಡಿದ್ದಾರೆ. ನಾಯಕನ ರೀತಿಯಲ್ಲಿಯೇ ನಾಯಕಿಯರಿಗೂ ಒಳ್ಳೆ ಎಂಟ್ರಿ ಸೀನುಗಳು, ಒಳ್ಳೆಯ ಹಿನ್ನೆಲೆ ಸಂಗೀತ, ಒಳ್ಳೆಯ ಪಂಚಿಂಗ್ ಡೈಲಾಗುಗಳು ಸಹ ಇವೆ.
ಇದನ್ನೂ ಓದಿ:ಯಶ್ ಹುಟ್ಟೂರು ಹಾಸನದಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಅದ್ದೂರಿ ಸ್ವಾಗತ
ನಯನತಾರಾ ಅಂತೂ ಗನ್ ಹಿಡಿದು ಸಖತ್ ಆಕ್ಷನ್ ಮಾಡಿದ್ದಾರೆ. ಕಿಯಾರಾ ಪಾತ್ರ ಆಪ್ತವಾಗಿದೆ. ತಾರಾ ಸುತಾರಿಯಾ, ಹುಮಾ ಖುರೇಷಿ, ರುಕ್ಮಿಣಿ ಪಾತ್ರಗಳಿಗೆ ತಮ್ಮದೇ ಆದ ಛಾಪನ್ನು ಕತೆಯ ಮೇಲೆ ಮೂಡಿಸುತ್ತವೆ. ಅಂದಹಾಗೆ ಈ ಐದು ನಾಯಕಿಯರ ಪಾತ್ರಗಳಲ್ಲಿ ಒಂದು ವಿಲನ್ ಪಾತ್ರವೂ ಇದೆ. ಅದ್ಯಾವುದೆಂದು ಸಿನಿಮಾ ನೋಡಿಯೇ ತಿಳಿಯಬೇಕು. ಇನ್ನು ಕನ್ನಡತಿ ರುಕ್ಮಿಣಿ ತುಸು ತಡವಾಗಿ ಕತೆಗೆ ಎಂಟ್ರಿ ಆದರೂ ಅವರ ಪಾತ್ರಕ್ಕೆ ಕೆಲ ಒಳ್ಳೆಯ ಸಂಭಾಷಣೆಗಳಿವೆ. ಒಟ್ಟಾರೆ ಹೇಳಬೇಕೆಂದರೆ ನಿರ್ದೇಶಕಿ ಗೀತೂ ಮೋಹನ್ದಾಸ್ ಐವರನ್ನು ನಾಯಕಿಯರನ್ನು ಹಾಕಿಕೊಂಡರೂ ಯಾರಿಗೂ ಅನ್ಯಾಯವಾಗದಂತೆ ಪಾತ್ರಗಳಿಗೆ ಬಹುತೇಕ ಸಮಾನ ಪ್ರಾಧಾನ್ಯತೆ ನೀಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಅನ್ನು ಗೀತೂ ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಒಟ್ಟಿಗೆ ಬಂಡವಾಳ ಹೂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:55 pm, Wed, 26 August 26