
ದಳಪತಿ ವಿಜಯ್ (Thalapathy Vijay) ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡದೆ ಸಿನಿಮಾ ಬಿಡುಗಡೆ ಆಗುವುದನ್ನೇ ತಡೆದಿದೆ. ಸಿನಿಮಾ ಬಿಡುಗಡೆ ಮಾಡಲು ಸಿನಿಮಾದ ನಿರ್ಮಾಪಕರು ಮಾಡಿರುವ ಪ್ರಯತ್ನಗಳು ಫಲ ನೀಡಿಲ್ಲ. ವಿಜಯ್ ಅವರ ರಾಜಕೀಯ ಎದುರಾಳಿಗಳು ಕುತಂತ್ರದಿಂದ ರಾಜಕೀಯ ಪ್ರಭಾವ ಬಳಸಿ ಸಿನಿಮಾ ಬಿಡುಗಡೆಯನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ಇದೀಗ ಹಠಾತ್ತನೆ ‘ಜನ ನಾಯಗನ್’ ಸಿನಿಮಾ ಪೂರ್ತಿಯಾಗಿ ಎಚ್ಡಿ ಫಾರ್ಮ್ಯಾಟ್ನಲ್ಲಿ ಲೀಕ್ ಆಗಿದೆ. ಇದು ಚಿತ್ರತಂಡಕ್ಕೆ ಆಘಾತ ತಂದಿದೆ. ತಮಿಳು ಮಾತ್ರವೇ ಅಲ್ಲದೆ ಹಲವು ರಾಜ್ಯಗಳ ಸಿನಿಮಾ ಪ್ರಮುಖರು ಇದನ್ನು ಖಂಡಿಸಿದ್ದಾರೆ. ಈ ಸಿನಿಮಾ ಲೀಕ್ಗೆ ಇಬ್ಬರು ರಾಜಕೀಯ ಪ್ರಮುಖರು ಕಾರಣವೆಂದು ವಿಜಯ್ ಅಭಿಮಾನಿಗಳು ಮತ್ತು ವಿಜಯ್ ಅವರ ಟಿವಿಕೆ ರಾಜಕೀಯ ಪಕ್ಷದ ಮುಖಂಡರು ಆರೋಪಿಸುತ್ತಿದ್ದಾರೆ.
‘ಜನ ನಾಯಗನ್’ ಸಿನಿಮಾದ ಬಿಡುಗಡೆ ತಡೆ ಮತ್ತು ಈಗ ಸಿನಿಮಾದ ಲೀಕ್ ಹಿಂದೆ ಇಬ್ಬರು ರಾಜಕೀಯ ಪ್ರಮುಖರಿದ್ದಾರೆ ಎಂದು ಟಿವಿಕೆ ಹಾಗೂ ವಿಜಯ್ ಅಭಿಮಾನಿಗಳು ಆರೋಪಿಸಿದ್ದಾರೆ. ಸಂಸದೀಯ ವ್ಯವಹಾರಗಳ ಸಚಿವ, ತಮಿಳುನಾಡು ಬಿಜೆಪಿ ಮುಖಂಡ ಎಲ್ ಮುರುಗನ್ ಮತ್ತು ತಮಿಳುನಾಡಿನ ಆಡಳಿತರೂಢ ಪಕ್ಷವಾದ ಡಿಎಂಕೆಯ ಯುವ ಮುಖಂಡ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಅವರುಗಳೇ ‘ಜನ ನಾಯಗನ್’ ಸಿನಿಮಾ ಲೀಕ್ನ ಹಿಂದಿದ್ದಾರೆ ಎಂಬ ಆರೋಪ ವಿಜಯ್ ಅಭಿಮಾನಿಗಳಿಂದ ಕೇಳಿ ಬಂದಿದೆ.
‘ಮೊದಲಿಗೆ ‘ಜನ ನಾಯಗನ್’ ಸಿನಿಮಾ ಜನರಿಗೆ ತಲುಪದಂತೆ ತಡೆಯಲಾಯ್ತು. ಈಗ ವಿಜಯ್ ಅವರ ಸಿನಿಮಾ ಆರ್ಥಿಕವಾಗಿ ನಷ್ಟ ಹೊಂದುವಂತೆ ಮಾಡಲಾಗಿದೆ. ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ಉದಯನಿಧಿ ಸ್ಟಾಲಿನ್ ಅವರು ಒಟ್ಟಾಗಿ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ‘ಜನ ನಾಯಗನ್’ ಲೀಕ್ ಹಿಂದೆ ಇವರೇ ಇದ್ದಾರೆ ಎಂದು ಟಿವಿಕೆಯ ಆದವ್ ಅರ್ಜುನ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಅಭಿಮಾನಿಗಳು ಸಹ ಇದೇ ಆರೋಪಗಳನ್ನು ಮಾಡುತ್ತಿದ್ದಾರೆ.
ಇದನ್ನೂ ಓದಿ:‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್
ಆರೋಪಗಳ ಬಗ್ಗೆ ಮಾತನಾಡಿರುವ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ, ‘ಜನ ನಾಯಗನ್’ ಸಿನಿಮಾ ಲೀಕ್ ಆಗಿರುವುದು ಅನ್ಯಾಯ, ಕಾನೂನಿಗೆ ಬಾಹಿರ ಆದರೆ ಆ ಕೃತ್ಯವನ್ನು ಸಚಿವ ಎಲ್ ಮುರುಗನ್ ಅವರಿಗೆ ಲಿಂಕ್ ಮಾಡಲು ಯತ್ನಿಸುತ್ತಿರುವುದು ರಾಜಕೀಯ ದುರುದ್ದೇಶ’ ಎಂದಿದ್ದಾರೆ. ‘ಇದರಲ್ಲಿ ಬಿಜೆಪಿಯನ್ನು ಏಕೆ ಎಳೆಯಬೇಕು? ಚಿತ್ರ ಬಿಡುಗಡೆಯಾಗುವುದರಲ್ಲಿ ಅಥವಾ ಸೋರಿಕೆಯಾಗುವುದರಲ್ಲಿ ಬಿಜೆಪಿ ಪಕ್ಷದ ಪಾತ್ರ ಇಲ್ಲ? ಸೋರಿಕೆಯ ಬಗ್ಗೆ ತನಿಖೆ ನಡೆಸಿ, ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿ. ಸೂಕ್ತ ತನಿಖೆ ನಡೆಸಿ ಈ ಕೃತ್ಯದ ಹಿಂದೆ ಯಾರಿದ್ದಾರೋ ಅವರನ್ನು ಬೆಳಕಿಗೆ ತರಲಿ ಅದು ಬಿಟ್ಟು ಸುಖಾ ಸುಮ್ಮನೆ ಬಿಜೆಪಿಯನ್ನು ಎಳೆದು ತಂದ ರಾಜಕೀಯ ಲಾಭ ಪಡೆಯುವ ಪ್ರಯತ್ನ ಮಾಡುವುದು ಬೇಡ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 pm, Sat, 11 April 26