ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ನಲ್ಲಿ ‘ಲೈಗರ್’ (Liger) ಚಿತ್ರ ಬರುತ್ತಿರುವುದು ಗೊತ್ತೇ ಇದೆ. ಪ್ಯಾನ್ ಇಂಡಿಯಾ ಮಾದರಿಯ ಈ ಚಿತ್ರ ರಿಲೀಸ್ಗೂ ಮುನ್ನವೇ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ ಪುರಿ ಹಾಗೂ ವಿಜಯ್ ಜೋಡಿ. ಹೌದು, ಇಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರತಂಡ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದು, ರಿಲೀಸ್ ದಿನಾಂಕವನ್ನೂ ಘೋಷಿಸಿದೆ. ವಿಜಯ್ ದೇವರಕೊಂಡ (Vijay Deverakonda) ಹಿಂದೆಂದೂ ಕಾಣದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮಿಲಿಟರಿ ಆಫೀಸರ್ ಆಗಿ ಬಣ್ಣಹಚ್ಚಲಿದ್ದಾರೆ. ಇದಕ್ಕೆ ತಕ್ಕಂತೆ ಅವರು ಮಿಲಿಟರಿ ವೇಷದಲ್ಲಿಯೇ ಕಾರ್ಯಕ್ರಮಕ್ಕೂ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಹೊಸ ಚಿತ್ರಕ್ಕೆ ‘ಜೆಜಿಎಮ್’ (JGM) ಎಂದು ಹೆಸರಿಡಲಾಗಿದೆ. ವರದಿಗಳ ಪ್ರಕಾರ ಜೆಜಿಎಮ್ ಎಂದರೆ ‘ಜನ ಗಣ ಮನ’. 2023ರ ಆಗಸ್ಟ್ 3ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ.
ಚಿತ್ರದ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ‘‘ಇದು ಚಾಲೆಂಜಿಂಗ್ ಸ್ಕ್ರಿಪ್ಟ್ ಆಗಿದ್ದು ಕಾತರನಾಗಿದ್ದೇನೆ. ಪ್ರತಿಯೊಬ್ಬ ಭಾರತೀಯನಿಗೆ ಈ ಸ್ಟೋರಿ ಕನೆಕ್ಟ್ ಆಗಲಿದೆ. ಪುರಿ ಜಗನ್ನಾಥ್ ಕನಸಿನ ಚಿತ್ರ ಇದಾಗಿದ್ದು, ಶೂಟಿಂಗ್ ಆರಂಭವಾಗಲು ಎದುರು ನೋಡುತ್ತಿದ್ದೇನೆ’’ ಎಂದಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆದಿದ್ದು, ಸೈನಿಕರ ಚಿತ್ರಗಳನ್ನು ಒಳಗೊಂಡಿದೆ. ಜತೆಗೆ ಭಾರತದ ನಕಾಶೆಯನ್ನೂ ಒಳಗೊಂಡಿದ್ದು ಕುತೂಹಲ ಮೂಡಿಸಿದೆ. ಗುಂಡುಗಳು ಹಾರಾಡುತ್ತಿದ್ದು, ದೊಡ್ಡ ಮಟ್ಟದ ಆಕ್ಷನ್ ಚಿತ್ರ ಇದಾಗಿದೆ ಎನ್ನುವುದರ ಕುರುಹು ನೀಡಿದೆ.
ಜೆಜಿಎಮ್ ಅನೌನ್ಸ್ ಮಾಡಿ ವಿಜಯ್ ದೇವರಕೊಂಡ ಟ್ವೀಟ್:
#JGM pic.twitter.com/YQ78NIyqcY
— Vijay Deverakonda (@TheDeverakonda) March 29, 2022
ಚಿತ್ರ ಅನೌನ್ಸ್ ಆದ ನಂತರ ಮಾತನಾಡಿದ ನಿರ್ದೇಶಕ ಪುರಿ ಜಗನ್ನಾಥ್, ‘‘ಇದೊಂದು ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಆಕ್ಷನ್ ಚಿತ್ರ. ವಿಜಯ್ ದೇವರಕೊಂಡ ಜತೆ ಮತ್ತೆ ಕೆಲಸ ಮಾಡಲು ಖುಷಿಯಾಗುತ್ತಿದೆ’’ ಎಂದಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಬಾಕ್ಸರ್ ಅವತಾರದಿಂದ ಸೈನಿಕನ ಪಾತ್ರಕ್ಕೆ ಸಂಪೂರ್ಣ ಬದಲಾಗಲಿದ್ದಾರೆ.
‘ಜೆಜಿಎಮ್’ ಚಿತ್ರವು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ತೆರೆಕಾಣಲಿದೆ. ಪುರಿ ಜಗನ್ನಾಥ್ ಚಿತ್ರಕತೆ ಹಾಗೂ ಸಂಭಾಷಣೆಯ ಜತೆಗೆ ನಿರ್ದೇಶನ ಮಾಡಲಿದ್ದಾರೆ. ಚಾರ್ಮೆ ಕೌರ್, ವಂಶಿ ಪೈಡಿಪಲ್ಲಿ ಹಾಗೂ ಪುರಿ ಜಗನ್ನಾಥ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 2022ರ ಏಪ್ರಿಲ್ನಿಂದ ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವದ ಹಲವೆಡೆ ಶೂಟಿಂಗ್ ನಡೆಯಲಿದೆ.
ಇದನ್ನೂ ಓದಿ:
ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ? ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಹೊಸ ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ್ ಭೇಟಿ; ಇಲ್ಲಿದೆ ವಿಡಿಯೋ
Published On - 3:36 pm, Tue, 29 March 22