ಸಾಲ ಮಾಡಿ ಐಫೋನ್ ಕೊಳ್ಳುವವರಿಗೆ ಬಂಗಾರದಂತಹ ಸಲಹೆ ನೀಡಿದ ವಿಜಯ್ ದೇವರಕೊಂಡ
ಸಮಾಜದಲ್ಲಿ ಅಂತಸ್ತು ತೋರಿಸಿಕೊಳ್ಳಲು ಸಾಲ ಮಾಡಿ ಬೆಲೆಬಾಳುವ ಐಫೋನ್ ಖರೀದಿಸುವ ಜನರ ಮನಸ್ಥಿತಿಯ ಬಗ್ಗೆ ನಟ ವಿಜಯ್ ದೇವರಕೊಂಡ ಮಾತನಾಡಿದ್ದಾರೆ. ತಮ್ಮ ಬಳಿ ಇರುವ ಹಳೆಯ ಫೋನ್ ಇನ್ನು ಕೆಲಸ ಮಾಡುತ್ತಿದೆ ಎಂದಿರುವ ಅವರು, ಪ್ರದರ್ಶನಕ್ಕಿಂತ ಜೀವನದ ಅಗತ್ಯತೆಗಳು ಹಾಗೂ ಸಾಮಾನ್ಯ ಜ್ಞಾನವೇ ಮುಖ್ಯ ಎಂದು ಸಲಹೆ ನೀಡಿದ್ದಾರೆ.

ಮುಖ್ಯಾಂಶಗಳು
- ವಿಜಯ್ ದೇವರಕೊಂಡ ಕೊಟ್ಟ ರಿಯಲ್ ಅಡ್ವೈಸ್
- ಕೋಟಿ ಕೋಟಿ ಸಂಪತ್ತಿದ್ದರೂ ಹಳೆಯ ಫೋನ್ ಬಳಸ್ತಾರಾ ವಿಜಯ್
- ಕಟು ಸತ್ಯ ಬಿಚ್ಚಿಟ್ಟ ನಟ
ಇಂದಿನ ದಿನಗಳಲ್ಲಿ ಸಮಾಜದಲ್ಲಿ ತಮ್ಮ ಅಂತಸ್ತನ್ನು ಪ್ರದರ್ಶಿಸಲು ಅಥವಾ ಇತರರನ್ನು ಮೆಚ್ಚಿಸಲು ಬೆಲೆಬಾಳುವ ಐಫೋನ್ ಹೊಂದುವುದು ಹಲವರಿಗೆ ದೊಡ್ಡ ಕ್ರೇಜ್ ಆಗಿದೆ. ಸಾಮಾನ್ಯ ಜನರು ಸಹ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ, ಸಾಲ ಮಾಡಿ ಹೊಸ ಮಾಡೆಲ್‌ನ ಐಫೋನ್ ಖರೀದಿಸಲು ಮುಗಿಬೀಳುತ್ತಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ವಿಜಯ್ ದೇವರಕೊಂಡ ಅವರು ಪ್ರಮುಖ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.
ಹಳೆಯ ಫೋನ್ ಅನ್ನೇ ಬಳಸುತ್ತಿರುವ ವಿಜಯ್
ಸಂದರ್ಶಕರು ವಿರಾಟ್ ಕೊಹ್ಲಿ ಮತ್ತು ವಿಜಯ್ ದೇವರಕೊಂಡ ಅವರಂತಹ ದೊಡ್ಡ ತಾರೆಯರು ಇಂದಿಗೂ ಹಳೆಯ ಐಫೋನ್ ಮಾಡೆಲ್ ಬಳಸುತ್ತಿರುವುದನ್ನು ಪ್ರಸ್ತಾಪಿಸಿ, ‘ನಿಮ್ಮ ಬಳಿ ಸಾಕಷ್ಟು ಹಣವಿದ್ದರೂ ನೀವು ಪ್ರಸ್ತುತ ಇರುವ ಫೋನ್ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕೆ ಹೊಸ ಐಫೋನ್ ಖರೀದಿಸಿಲ್ಲ ಅಲ್ಲವೇ?’ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ವಿಜಯ್ ದೇವರಕೊಂಡ, ‘ನನ್ನ ಬಳಿ ಇರುವ ಫೋನ್ ಇನ್ನು ಕೆಲಸ ಮಾಡುತ್ತಿದೆ, ಹಾಗಾಗಿ ಹೊಸದನ್ನು ಕೊಳ್ಳುವ ಅಗತ್ಯವಿಲ್ಲ’ ಎಂದು ಸರಳವಾಗಿ ಹೇಳಿದ್ದಾರೆ.
ಸ್ಟಾರ್‌ಗಳಿಗೆ ಸಿಗುವ ಗಿಫ್ಟ್‌ಗಳು
ಇದೇ ವೇಳೆ ನಟರು ಮತ್ತು ಸೆಲೆಬ್ರಿಟಿಗಳ ಜೀವನಶೈಲಿಯ ಬಗ್ಗೆ ಮಾತನಾಡಿದ ವಿಜಯ್, ‘ನಾವು ನಟರಾಗಿರುವುದರಿಂದ ನಮಗೆ ಹಲವು ಬ್ರ್ಯಾಂಡ್‌ಗಳಿಂದ ಫೋನ್‌ಗಳು ಹಾಗೂ ಗ್ಯಾಜೆಟ್‌ಗಳು ಉಡುಗೊರೆಯಾಗಿ ಸಿಗುತ್ತವೆ. ನಾವು ಪ್ರತಿಯೊಂದನ್ನೂ ಹಣ ಕೊಟ್ಟು ಖರೀದಿಸುವುದಿಲ್ಲ’ ಎಂದು ಉದ್ಯಮದ ವಾಸ್ತವವನ್ನು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ: ಸಮಂತಾ, ವಿಜಯ್ ದೇವರಕೊಂಡ ಸೇರಿ ತೆಲುಗಿನ ಹಲವರಿಗೆ ಚುನಾವಣಾ ಆಯೋಗದಿಂದ ನೋಟಿಸ್
ಕಾಮನ್ ಸೆನ್ಸ್ ಮುಖ್ಯ
ಇತರರಿಗೆ ತೋರಿಸಿಕೊಳ್ಳಲು ತಮ್ಮ ಪ್ರಾಶಸ್ತ್ಯಗಳನ್ನು ಬಲಿ ಕೊಟ್ಟು, ಮನೆ ಖರ್ಚಿಗೂ ಪರದಾಡುವ ಪರಿಸ್ಥಿತಿ ಇದ್ದರೂ ಸಾಲ ಮಾಡಿ ಐಫೋನ್ ಕೊಳ್ಳುವ ಜನರ ಮನಸ್ಥಿತಿಯ ಬಗ್ಗೆ ಮಾತನಾಡಿದ ವಿಜಯ್, ‘ಇಂತಹ ವಿಷಯಗಳಲ್ಲಿ ಜನರು ತಮ್ಮ ಸಾಮಾನ್ಯ ಜ್ಞಾನವನ್ನು ಬಳಸುವುದು ಅತ್ಯಂತ ಮುಖ್ಯ’ ಎಂದು ಸಲಹೆ ನೀಡಿದ್ದಾರೆ. ಜೀವನಶೈಲಿಗಿಂತ ನಮ್ಮ ಜೀವನದ ಅಗತ್ಯತೆಗಳು ಮುಖ್ಯವಾಗಿರಬೇಕು ಎಂಬ ಸಂದೇಶ ವಿಜಯ್ ಕಡೆಯಿಂದ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




