ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರು ಅಭಿಮಾನಿಗಳಿಗೆ ಅಚ್ಚರಿ ನೀಡುತ್ತಾರೆ. ಈಗ ಅವರು ನಟಿಸಿರುವ 50ನೇ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ‘ಮಹಾರಾಜ’ (Maharaja) ಎಂಬುದು ಈ ಸಿನಿಮಾದ ಶೀರ್ಷಿಕೆ. ಇದರಲ್ಲಿ ಅವರು ಕ್ಷೌರಿಕನ ಪಾತ್ರ ಮಾಡಿದ್ದಾರೆ. ಅವರ ಗೆಟಪ್ ಭಿನ್ನವಾಗಿದೆ. ‘ಮಹಾರಾಜ’ ಸಿನಿಮಾ ಟ್ರೇಲರ್ (Maharaja Trailer) ನೋಡಿದ ಅಭಿಮಾನಿಗಳಲ್ಲಿ ಕೌತುಕ ಮೂಡಿದೆ. ಸಿನಿಪ್ರಿಯರು ಈ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.
‘ಮಹಾರಾಜ’ ಸಿನಿಮಾದ ಇನ್ನೊಂದು ವಿಶೇಷ ಏನೆಂದರೆ, ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರದ ಝಲಕ್ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಮತ್ತು ಸಸ್ಪೆನ್ಸ್ ಕಹಾನಿ ಇರಲಿದೆ. ವೈರಲ್ ಆಗಿರುವ ಪೋಸ್ಟರ್ನಲ್ಲಿ ವಿಜಯ್ ಸೇತುಪತಿ ಅವರು ಮೈಗೆಲ್ಲ ರಕ್ತ ಮೆತ್ತಿಕೊಂಡ ರೀತಿ ಪೋಸ್ ನೀಡಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ವಿಭೀಷಣನ ಪಾತ್ರ ಮಾಡ್ತಾರಾ ವಿಜಯ್ ಸೇತುಪತಿ?
ನಿಧಿಲನ್ ಸಾಮಿನಾಥನ್ ಅವರು ‘ಮಹಾರಾಜ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದಲ್ಲಿ ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಅವರ ಕಾಂಬಿನೇಷನ್ ಇರುವುದರಿಂದ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ನಿಭಾಯಿಸಿದ ಪಾತ್ರದ ಹೆಸರು ಮಹಾರಾಜ. ತನ್ನ ‘ಲಕ್ಷ್ಮಿ’ ಕಳೆದುಹೋಗಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಲು ಮಹಾರಾಜ ಬರುತ್ತಾನೆ. ಲಕ್ಷ್ಮಿ ಎಂದರೆ ಹಣ ಅಲ್ಲ, ಚಿನ್ನ ಅಲ್ಲ, ದಾಖಲೆ ಪತ್ರ ಅಲ್ಲ, ತಂಗಿ ಅಲ್ಲ, ಹೆಂಡತಿ ಅಲ್ಲ ಮಗು ಕೂಡ ಅಲ್ಲ ಎಂದು ಆತ ಹೇಳುತ್ತಾನೆ. ಆತನ ಮಾತಿನಿಂದ ಪೊಲೀಸರಿಗೂ ಕಿರಿಕಿರಿ ಆಗುತ್ತದೆ. ಲಕ್ಷ್ಮಿ ಎಂದರೆ ಏನು ಎಂಬ ಕೌತುಕ ಹೆಚ್ಚುತ್ತದೆ. ಅದೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು.
‘ಮಹಾರಾಜ’ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ. ರಿಲೀಸ್ ದಿನಾಂಕ ಇನ್ನಷ್ಟೇ ಬಹಿರಂಗ ಆಗಬೇಕಿದೆ. ಮಮತಾ ಮೋಹನ್ದಾಸ್, ನಟರಾಜ್, ಭಾರತಿರಾಜನ್, ಅಭಿರಾಮಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುದನ್ ಸುಂದರಂ ಹಾಗೂ ಜಗದೀಶ್ ಪಳನಿಸ್ವಾಮಿ ಅವರು ಈ ಸನಿಮಾಗೆ ಬಂಡವಾಳ ಹೂಡಿದ್ದಾರೆ. ಕನ್ನಡಿಗ ಬಿ. ಅಜನೀಶ್ ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.