
ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ‘ಸಿಗ್ಮಾ’ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ಚೊಚ್ಚಲ ನಿರ್ದೇಶನದ ಈ ಸಿನಿಮಾ ಇಂದು (ಅಕ್ಟೋಬರ್ 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿ ತಮ್ಮ ತಂದೆ ವಿಜಯ್ ಖಂಡಿತವಾಗಿಯೂ ಹೆಮ್ಮೆಪಡುತ್ತಾರೆ ಎಂದು ಜೇಸನ್ ಸಂಜಯ್ ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅವರ ಈ ಹೇಳಿಕೆ ಈಗ ಪ್ರೇಕ್ಷಕರ ಗಮನ ಸೆಳೆದಿದೆ.
ತಂದೆಯವರ ಪ್ರತಿಕ್ರಿಯೆಯ ಶೈಲಿಯ ಬಗ್ಗೆ ಜೇಸನ್ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ವಿಜಯ್ ಅವರು ತಕ್ಷಣವೇ ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಯಾವುದೇ ವಿಷಯವನ್ನು ಸುಮ್ಮನೆ ಆಲಿಸಿ ಆಳವಾಗಿ ಆಲೋಚಿಸುತ್ತಾರೆ. ಫೋನ್‌ನಲ್ಲಿ ಮಾತನಾಡುವಾಗಲೂ ಉತ್ತರ ನೀಡಲು ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಕಾಲ್ ಕಟ್ ಆಯಿತೇನೋ ಎಂದು ಪರಿಶೀಲಿಸಬೇಕಾಗುತ್ತದೆ’ ಎಂದು ಜೇಸನ್ ಹೇಳಿದ್ದಾರೆ.
‘ತಂದೆಗೆ ಚಿತ್ರವನ್ನು ವಿಶ್ಲೇಷಿಸಲು ಸಮಯ ಬೇಕಾಗುತ್ತದೆ . ಹೀಗಾಗಿ ಸಿನಿಮಾ ವೀಕ್ಷಿಸಿದ ತಕ್ಷಣ ವಿಜಯ್ ಯಾವುದೇ ಅಭಿಪ್ರಾಯ ಹೇಳದಿರಬಹುದು. ಆದರೆ ಸಂಪೂರ್ಣವಾಗಿ ಸಿನಿಮಾ ನೋಡಿದ ಮೇಲೆ ಅವರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ. ಮಗನ ಕೆಲಸದ ಬಗ್ಗೆ ಅವರಿಗೆ ಹೆಮ್ಮೆಯಾಗುತ್ತದೆ’ ಎಂಬ ನಂಬಿಕೆ ತಮಗಿದೆ ಎಂದು ಜೇಸನ್ ತಿಳಿಸಿದ್ದಾರೆ.
ಚಿತ್ರರಂಗಕ್ಕೆ ಬರುವ ತಮ್ಮ ನಿರ್ಧಾರಕ್ಕೆ ತಂದೆಯೇ ಮೊದಲ ಬೆಂಬಲ ನೀಡಿದ್ದರು. ಮೂರು ದಶಕಗಳ ಕಾಲ ಚಿತ್ರರಂಗದಲ್ಲಿದ್ದ ಅವರಿಗೆ ಈ ಕ್ಷೇತ್ರಕ್ಕೆ ಬರುವುದರ ಮಹತ್ವ ಚೆನ್ನಾಗಿ ತಿಳಿದಿತ್ತು. ತಮ್ಮ ತಾಯಿ ಮತ್ತು ತಂಗಿಗಿಂತ ಮುಂಚಿತವಾಗಿಯೇ ತಂದೆ ಈ ನಿರ್ಧಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ಜೇಸನ್ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ತಂದೆ ನನ್ನ ಸಿನಿಮಾ ಪ್ರಚಾರ ಮಾಡಲ್ಲ’; ಕಾರಣ ಹೇಳಿದ ಜೇಸನ್ ಸಂಜಯ್
ಇತ್ತೀಚೆಗೆ ನಡೆದ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೂ ಜೇಸನ್ ತಂದೆಗೆ ಧನ್ಯವಾದ ತಿಳಿಸಿದ್ದರು. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ತಂದೆ, ತಾಯಿ ಹಾಗೂ ತಂಗಿಗೆ ತಮಿಳಿನಲ್ಲಿ ಕೃತಜ್ಞತೆ ಸಲ್ಲಿಸಿದ್ದರು. ಜೇಸನ್ ಸಂಜಯ್ ಅವರ ನಿರ್ದೇಶನದ ಚೊಚ್ಚಲ ಪ್ರಯತ್ನಕ್ಕೆ ತಮಿಳು ಚಿತ್ರರಂಗದಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.