
ದಾಳಿಂಬೆ (Pomegranate) ಬೀಜಗಳು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದ ವಿಚಾರ. ಇದರಲ್ಲಿರುವ ಪಾಲಿಫಿನಾಲ್‌ಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಇವು ಚರ್ಮವನ್ನು ಯುವಿ ಕಿರಣಗಳು ಮತ್ತು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ. ಚರ್ಮವು ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ. ಇದಕ್ಕೆ ಪೂರಕವಾಗಿ ಪ್ರತಿದಿನ ಒಂದು ಕಪ್ ದಾಳಿಂಬೆ ಹಣ್ಣನ್ನು 21 ದಿನಗಳ ಕಾಲ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಸಂಶೋಧನೆ ಹೇಳುತ್ತದೆ. ಹಾಗಾದರೆ ಈ ರೀತಿ 21 ದಿನಗಳ ಚಾಲೆಂಜ್ (21 Day Challenge) ನಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು, ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ದಾಳಿಂಬೆ ಬೀಜಗಳನ್ನು ನಿರಂತರವಾಗಿ 21 ದಿನಗಳ ಕಾಲ ಸೇವನೆ ಮಾಡಿದರೆ ತ್ವರಿತ ಶಕ್ತಿ ಸಿಗುತ್ತದೆ ಮತ್ತು ಮನಸ್ಥಿತಿ ಸುಧಾರಿಸುತ್ತವೆ, ಮಾತ್ರವಲ್ಲ ಒತ್ತಡವೂ ಕಡಿಮೆಯಾಗುತ್ತದೆ. ಈ ಹಣ್ಣಿನ ಬೀಜಗಳು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇವು ಮೆದುಳಿನ ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ, ಹಾನಿಯನ್ನು ತಡೆಯುತ್ತವೆ, ಸ್ಮರಣ ಶಕ್ತಿಯನ್ನು ಸುಧಾರಿಸಿ ಮೆದುಳು ಸಕ್ರಿಯವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ ಈ ಹಣ್ಣಿನಲ್ಲಿರುವ ಬೀಜಗಳನ್ನು ಅಗಿಯುವುದರಿಂದ ಹಲ್ಲು ಮತ್ತು ಒಸಡುಗಳು ಆರೋಗ್ಯಕರವಾಗಿರುತ್ತವೆ. ಹಲ್ಲುಗಳನ್ನು ಬಿಳಿಯಾಗಿಸುತ್ತದೆ. ಬಾಯಿಯ ದುರ್ವಾಸನೆ ನಿವಾರಿಸುತ್ತದೆ.
ಇದನ್ನೂ ಓದಿ: ಯಾವುದೇ ರೀತಿಯ ಔಷಧಗಳ ಸೇವನೆ ಮಾಡದೆಯೇ ರಕ್ತಹೀನತೆಯಿಂದ ಮುಕ್ತಿ ಪಡೆಯಲು ಈ ರೀತಿ ಮಾಡಿ
ದಾಳಿಂಬೆ ಬೀಜಗಳಲ್ಲಿರುವ ನಾರಿನಾಂಶ ಕರುಳಿನ ಸ್ನಾಯುಗಳನ್ನು ಸುಧಾರಿಸುತ್ತದೆ. ಮಾತ್ರವಲ್ಲ, ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ನಿಂದ ಬಳಲುತ್ತಿರುವವರು ದಾಳಿಂಬೆ ಬೀಜಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದು. ಅವುಗಳಲ್ಲಿರುವ ಪೋಷಕಾಂಶಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ದಾಳಿಂಬೆ ಹಣ್ಣುಗಳು ಬಹಳ ಸಹಾಯಕವಾಗಿವೆ. ಅಷ್ಟೇ ಅಲ್ಲ, ವೀರ್ಯದ ಗುಣಮಟ್ಟವೂ ಸುಧಾರಿಸುತ್ತದೆ. ದಾಳಿಂಬೆಯಲ್ಲಿ ಕಬ್ಬಿಣಾಂಶ ಅಧಿಕವಾಗಿರುವುದರಿಂದ ಇದರ ಸೇವನೆ ಬಹಳ ಪ್ರಯೋಜನಕಾರಿಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ