ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ: ಅಧ್ಯಯನ-ಸಮೀಕ್ಷೆ-ಪರೀಕ್ಷೆಗಳಿಂದ ಬಹಿರಂಗವಾಗಿದೆ ಆತಂಕಕಾರಿ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Oct 14, 2024 | 3:07 PM

ಭಾರತೀಯ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ವರೆಗೂ ಹತ್ತಾರು ಮಸಾಲೆಗಳು ಆಹಾರದಲ್ಲಿ ಸೇರಿರುತ್ತವೆ. ಅರಿಶಿಣ, ಲವಂಗ, ಏಲಕ್ಕಿಯಂತಹ ಪದಾರ್ಥಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಇವುಗಳ ಬಳಕೆ ಹೆಚ್ಚು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಪದಾರ್ಥವೂ ಕಳಬೆರಕೆಯಾಗುತ್ತಿದೆ. ಸೊಪ್ಪು ತರಕಾರಿಯನ್ನು ಕೊಳಚೆ ನೀರಿನಲ್ಲಿ ಬೆಳೆಸಲಾಗುತ್ತಿದೆ. ಮಸಾಲೆ ಪದಾರ್ಥಗಳಲ್ಲಿ ಮಾರಕ ರಾಸಾಯನಿಕ ವಸ್ತುಗಳನ್ನು ಮಿಶ್ರಣ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ಇಲ್ಲಿದೆ.

ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ: ಅಧ್ಯಯನ-ಸಮೀಕ್ಷೆ-ಪರೀಕ್ಷೆಗಳಿಂದ ಬಹಿರಂಗವಾಗಿದೆ ಆತಂಕಕಾರಿ ಮಾಹಿತಿ
ಮಸಾಲೆ ಪದಾರ್ಥಗಳು
Follow us on

ಅಡುಗೆ ಮನೆಯಲ್ಲಿ ಬಳಸುವ ಸಾಂಬಾರು ಮಸಾಲೆ ಪದಾರ್ಥಗಳ ಕಲಬೆರಕೆಯು ಆರೋಗ್ಯದ ಮೇಲೆ ನೇರ, ಗಂಭೀರ ಮತ್ತು ಅಪಾಯಕಾರಿ ಪರಿಣಾಮ ಬೀರುತ್ತಿದೆ. ಬಳಕೆದಾರರ ಹಿತದೃಷ್ಟಿಯಿಂದ ಅದನ್ನು ಪತ್ತೆ ಹಚ್ಚುವುದು ಅತಿ ಮುಖ್ಯವಾಗಿದೆ. ಪುರಾತನವಾಗಿ ಭಾರತ ದೇಶವು ಮಸಾಲೆ ಪದಾರ್ಥಗಳ ಕಣಜ. ಶತ ಶತಮಾನಗಳಿಂದಲೂ ಮಸಾಲೆ ಪದಾರ್ಥಗಳ ಕೃಷಿ ಮತ್ತು ವ್ಯಾಪಾರದ ಅಗ್ರ ಕೇಂದ್ರವಾಗಿದೆ. ಅರಿಶಿನ, ಮೆಣಸಿನ ಪುಡಿ, ಜೀರಿಗೆ, ಕೊತ್ತಂಬರಿ ಬೀಜ ಇನ್ನೂ ಅನೇಕ ಸುವಾಸನೆಭರಿತ/ ರುಚಿಕರ/ಆರೋಗ್ಯಕರ ಪದಾರ್ಥಗಳು ಪಾಕಶಾಲೆಯ ಪ್ರಧಾನ ಪದಾರ್ಥಗಳಾಗಿವೆ. ಇದು ಎಲ್ಲರಿಗೂ ಚೆನ್ನಾಗಿ ವೇದ್ಯವಾಗಿದೆ.

ಶತಮಾನಗಳಿಂದಲೂ ಭಾರತದ ರಫ್ತು ಬುಟ್ಟಿಯಲ್ಲಿ ಆಹಾರ ಮಸಾಲೆಗಳು ಅತ್ಯಗತ್ಯ ಅಂಶವಾಗಿ ಭದ್ರವಾಗಿ ಕುಳಿತಿದೆ. ಶತಮಾನಗಳ ಹಿಂದೆ ಪೋರ್ಚುಗೀಸ್ ದೇಶದ ನಾವಿಕ ವಾಸ್ಕೋ ಡಿ ಗಾಮಾ ಭಾರತಕ್ಕೆ ಬಂದಿದ್ದ ದಿನಗಳಲ್ಲಿ ಇಲ್ಲಿಂದ ಕಾಳುಮೆಣಸಿನ ಚೀಲವನ್ನು ಖರೀದಿಸಲು ತನ್ನಲ್ಲಿದ್ದ ಎಲ್ಲವನ್ನೂ ಮಾರಾಟ ಮಾಡಬೇಕಾಯಿತು ಎಂಬ ಮಾತಿದೆ. ಅಂದರೆ ಇಲ್ಲಿನ ಮಸಾಲೆ ಪದಾರ್ಥಗಳ ರುಚಿ, ಮಹತ್ವ ಅಷ್ಟಿತ್ತು ಎನ್ನಬಹುದು. ಜೊತೆಗೆ ನಮ್ಮ ಭಾರತೀಯ ಮಸಾಲೆಗಳಲ್ಲಿರುವ ಔಷಧೀಯ ಗುಣವನ್ನು ವಿವಿಧ ವೈಜ್ಞಾನಿಕ ಅಧ್ಯಯನಗಳು ಪದೇ ಪದೇ ಸಾಬೀತುಪಡಿಸಿವೆ.

ಭಾರತದ ಮಸಾಲೆ ಪದಾರ್ಥಗಳ ರುಚಿ, ಮಹತ್ವ ಇಂದಿಗೂ ಕುಂದಿಲ್ಲ. ಹಾಗೆಯೇ ಉಳಿದಿದೆ. ಆದರೆ ಬೇಡಿಕೆ ಹೆಚ್ಚಾಗಿ ಆ ಮಸಾಲೆ ಪದಾರ್ಥಗಳಲ್ಲಿ ಕಲಬೆರಕೆ ಎಂಬ ಪೆಡಂಭೂತ ವ್ಯಾಪಕ ಸಮಸ್ಯೆಯಾಗಿ ಕಾಡತೊಡಗಿದೆ. ಮುಖ್ಯವಾಗಿ ಇದು ಗ್ರಾಹಕರ ಆರೋಗ್ಯ ಮತ್ತು ಈ ಉದ್ಯಮದ ಸಮಗ್ರತೆಗೆ ಬೆದರಿಕೆ ಒಡ್ಡುತ್ತಿದೆ.

ಭಾರತದ ಮಸಾಲೆ ಪದಾರ್ಥಗಳ ಹೆಚ್ಚಿನ ಬೇಡಿಕೆ ಮತ್ತು ಮೌಲ್ಯದಿಂದಾಗಿಯೇ ಈ ಮಸಾಲೆ ಪದಾರ್ಥಗಳು ಕಲಬೆರಕೆಗೆ ಗುರಿಯಾಗುತ್ತಿವೆ. ಸಾಮಾನ್ಯವಾಗಿ ಕಲಬೆರಕೆಗಳಲ್ಲಿ ಕೃತಕ ಬಣ್ಣಗಳು ಮತ್ತು ಮರದ ಪುಡಿ ಅಥವಾ ಇಟ್ಟಿಗೆ ಪುಡಿಯಂತಹ ಅಗ್ಗದ ಪದಾರ್ಥಗಳನ್ನು ಬದಲಿಯಾಗಿ ಸೇರಿಸಲಾಗುತ್ತೆ. ಇವುಗಳಿಂದ ಆರೋಗ್ಯ ಸಮಸ್ಯೆ ಕಟ್ಟಿಟ್ಟಬುತ್ತಿ.

ಕಲಬೆರಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು:

ಕೆಲವು ಕಲಬೆರಕೆಗಳು ತುಲನಾತ್ಮಕವಾಗಿ ಹಾನಿಕರವಲ್ಲದಿದ್ದರೂ (ಉದಾಹರಣೆಗೆ, ಕೆಂಪು ಇಟ್ಟಿಗೆಯ ಪುಡಿಯೊಂದಿಗೆ ಮೆಣಸಿನ ಪುಡಿಯನ್ನು ಬೆರೆಸುವುದು), ಇತರ ಕೆಲ ಕಲಬೆರಕೆಗಳು ಗಮನಾರ್ಹವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಕಲಬೆರಕೆಯಲ್ಲಿ ಬಳಸಲಾಗುವ ಹಾನಿಕಾರಕ ಬಣ್ಣಗಳು ಸೀಸ ಮತ್ತು ಆರ್ಸೆನಿಕ್‌ನಂತಹ ಲೋಹಗಳನ್ನು ಒಳಗೊಂಡಿರುತ್ತವೆ. ಇವುಗಳ ಸೇವನೆಯಿಂದ ಕ್ಯಾನ್ಸರ್, ಪಿತ್ತಜನಕಾಂಗದ ಹಾನಿಯಾಗುತ್ತೆ. ಅಥವಾ ದೀರ್ಘಕಾಲೀನ ಸೇವನೆಯಿಂದ ನರವೈಜ್ಞಾನಿಕ ಸಮಸ್ಯೆಗಳಂತಹ ಗಂಭೀರ ಪರಿಸ್ಥಿತಿಗಳಿಗೂ ಕಾರಣವಾಗಬಹುದು.

ಜೊತೆಗೆ, ಮಸಾಲೆಗಳಲ್ಲಿ ಕಲಬೆರಕೆ ಆಗುವುದರಿಂದ ಮಸಾಲೆಯಲ್ಲಿನ ಅಗತ್ಯ ಪೌಷ್ಟಿಕಾಂಶದ ಮೌಲ್ಯ ಮತ್ತು ಪರಿಮಳ ಕುಗ್ಗುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಅಜ್ಜಿ ಮಾಡುತ್ತಿದ್ದ ಅಡುಗೆಗೂ ಇಂದಿನ ನಮ್ಮ ಅಡುಗೆಗೂ ವ್ಯತ್ಯಾಸ ಕಂಡು ಬರೋದು. ಅದೇ ಮಸಾಲೆ ಪದಾರ್ಥಗಳು, ಅದೇ ವಿಧಾನದಲ್ಲಿ ಅಡುಗೆ ಮಾಡಿದರೂ ರುಚಿಯಲ್ಲಿ ಬಹಳ ವ್ಯತ್ಯಾಸವಿರುತ್ತೆ!

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕಲಬೆರಕೆಯನ್ನು ತಡೆಯಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ. ಆದರೂ, ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ, ಹಾಗೂ ಮಸಾಲೆ ಪದಾರ್ಥಗಳ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಕಲಬೆರಕೆ ಪತ್ತೆ ಮಾಡುವಷ್ಟು ಅರಿವಿಲ್ಲದ ಕಾರಣ ಮಸಾಲೆಗಳಲ್ಲಿ ಯಥೇಚ್ಚವಾಗಿ ಕಲಬೆರಕೆ ನಡೆಯುತ್ತಲೇ ಇದೆ.

ಕಲಬೆರಿಕೆ ಪದಾರ್ಥಗಳನ್ನು ಪತ್ತೆ ಹಚ್ಚುವುದು ಹೇಗೆ?

ಅರಿಶಿನ ಪುಡಿ:

ಮನೆಯಲ್ಲಿ ಅರಿಶಿನ ಪುಡಿಯ ಶುದ್ಧತೆಯನ್ನು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಬೇಕು. ನಂತರ ಅದರ ಬಣ್ಣ ಹಳದಿ ಬಣ್ಣದಿಂದ ಗುಲಾಬಿ, ನೇರಳೆ ಅಥವಾ ನೀಲಿ ಬಣ್ಣಕ್ಕೆ ಬದಲಾದರೆ ಅರಿಶಿನ ಪುಡಿ ಕಲಬೆರಕೆಯಾಗಿದೆ ಎಂದು ಅರ್ಥ. ಅರಿಶಿನ ಪುಡಿಗೆ ಮೆಟಾನಿಲ್ ಹಳದಿ (Metanil yellow) ರಾಸಾಯನಿಕ ಬಣ್ಣವನ್ನು ಕಲಬೆರಕೆ ಮಾಡಲಾಗಿದೆ ಎಂದು ಅರ್ಥ. ನಿಜವಾದ ಅರಿಶಿನ ಪುಡಿಯನ್ನು ನೀರಿಗೆ ಸೇರಿಸಿದಾಗ, ಅದರ ಬಣ್ಣವು ತಿಳಿ ಹಳದಿಯಾಗಿಯೇ ಉಳಿಯುತ್ತದೆ. ಕಲಬೆರಕೆ ಇದ್ದರೆ ನೀರು ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ಬದಲಾಗುತ್ತದೆ.

ಧನಿಯಾ ಪುಡಿ:

ಸಾಮಾನ್ಯವಾಗಿ ಕೊತ್ತಂಬರಿ ಪುಡಿ ಅಥವಾ ಧನಿಯಾ ಪುಡಿಗೆ ಹಿಟ್ಟಿನ ಸಿಪ್ಪೆ ಮತ್ತು ಕಾಡು ಹುಲ್ಲು ಮುಂತಾದ ವಸ್ತುಗಳನ್ನು ಬೆರೆಸಲಾಗುತ್ತೆ. ಈ ಕಲಬೆರಕೆಯನ್ನು ಪತ್ತೆ ಹಚ್ಚಲು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಧನಿಯಾ ಪುಡಿಯನ್ನು ಹಾಕಬೇಕು. ನಂತರ ಈ ನೀರನ್ನು 30 ನಿಮಿಷ ಬಿಡಬೇಕು. ಮೇಲೆ ಕೊತ್ತಂಬರಿ ಸೊಪ್ಪು ತೇಲುತ್ತಿರುವುದು ಕಂಡು ಬಂದರೆ ಅದರಲ್ಲಿ ಹೊಟ್ಟು ಬೆರೆತಿರುವುದು ಖಚಿತ. ಲೋಟದ ಕೆಳಭಾಗಕ್ಕೆ ಹೋದರೆ ಧನಿಯಾ ಪುಡಿ ಕಲಬೆರಕೆ ಆಗಿಲ್ಲ ಎಂದು ಅರ್ಥ.

ಮೆಣಸಿನ ಪುಡಿ:

ಮೆಣಸಿನ ಪುಡಿ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು, ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಣಸಿನ ಪುಡಿಯನ್ನು ಹಾಕಬೇಕು. ಸ್ವಲ್ಪ ಸಮಯದ ನಂತರ ಅದು ಕರಗಿದರೆ ಅದರಲ್ಲಿ ಕಲಬೆರಕೆ ಆಗಿಲ್ಲ ಎಂದು ಅರ್ಥ. ಅಥವಾ ನೀರಿನಲ್ಲಿ ಹಾಕಿದ ಪುಡಿಯನ್ನು ಅಂಗೈಯಿಂದ ತೆಗೆದು ಉಜ್ಜಿದಾಗ ಒರಟುತನ ಅನುಭವಿಸಿದರೆ, ಅದರಲ್ಲಿ ಇಟ್ಟಿಗೆ ಪುಡಿ ಅಥವಾ ಮರಳು ಇದೆ ಎಂದರ್ಥ. ಮೆಣಸಿನ ಪುಡಿಗೆ ರಾಸಾಯನಿಕ ಬಣ್ಣ, ಸೀಮೆಸುಣ್ಣ ಅಥವಾ ಕೆಂಪು ಇಟ್ಟಿಗೆಯಂತಹ ವಸ್ತುಗಳನ್ನು ಕಲಬೆರಕೆ ಮಾಡಲಾಗಿದೆ ಎಂದರ್ಥ.

ಕಲ್ಲುಪ್ಪು:

ಕಲ್ಲುಪ್ಪಿನ ಶುದ್ಧತೆಯನ್ನು ಪರೀಕ್ಷಿಸಲು, ಮೊದಲು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಎರಡು ಭಾಗವಾಗಿ ಕತ್ತರಿಸಬೇಕು. ನಂತರ ಎರಡು ಭಾಗ ಮಾಡಿದ ಆಲೂಗಡ್ಡೆ ಮಧ್ಯದಲ್ಲಿ ಕಲ್ಲು ಉಪ್ಪು ಸೇರಿಸಿ ಹನಿ ನಿಂಬೆ ರಸವನ್ನು ಸೇರಿಸಿ. ಕಲ್ಲು ಉಪ್ಪು ಅಸಲಿಯಾಗಿದ್ದರೆ ಏನೂ ಆಗುವುದಿಲ್ಲ, ಕಲಬೆರಕೆ ಮಾಡಿದ್ದರೆ ಅದರ ಬಣ್ಣ ಬದಲಾಗುತ್ತದೆ.

ಕರಿಮೆಣಸು:

ಪೋಷಕಾಂಶಗಳ ಖಜಾನೆ ಎಂದು ಪರಿಗಣಿಸಲಾಗುವ ಕರಿ ಮೆಣಸಿಗೆ ಒಣಗಿದ ಪಪ್ಪಾಯಿ ಕಾಳುಗಳನ್ನು ಬೆರೆಸಲಾಗುತ್ತದೆ. ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಕರಿಮೆಣಸನ್ನು ಹಾಕಿ ನೋಡಿ, ಅದು ನೀರಿನ ಮೇಲೆ ತೇಲಲು ಪ್ರಾರಂಭಿಸಿದರೆ ಅದು ಕಲಬೆರಕೆಯಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಆದರೆ ಅದು ಮುಳುಗಿದರೆ ಕಲಬೆರಕೆ ಆಗಿಲ್ಲ ಎಂದು ಅರ್ಥ.

NCBI ವರದಿಯ ಪ್ರಕಾರ ಲಾಭಕೋರ ಮಧ್ಯವರ್ತಿಗಳು ಮರದ ಪುಡಿ, ಎಲೆ, ಹುಲ್ಲು ಮತ್ತು ಮಣ್ಣಿನಂತಹ ವಸ್ತುಗಳನ್ನು ಮಸಾಲಾ ಪದಾರ್ಥಗಳಿಗೆ ಸೇರಿಸುತ್ತಾರೆ. ಹೀಗಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಅಸಲಿ ಮತ್ತು ನಕಲಿ ಮಸಾಲೆಗಳನ್ನು ಮತ್ತೆ ಹಚ್ಚುವುದಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದೆ.

ಕಲಬೆರಕೆಯ ಕೊನೆಯ ಮಾತು:
ಕೃಷಿ-ಸಂಗ್ರಹಣೆ-ಮಾರಾಟ ಹಂತಗಳಲ್ಲಿ ಮಸಾಲೆ ಪದಾರ್ಥಗಳ ಕಲಬೆರಕೆ ನಿಯಂತ್ರಣಕ್ಕೆ ಕಡಿವಾಣ ಇಲ್ಲವಾಗಿದೆ ಎನ್ನಬಹುದು. ಮಸಾಲೆ ಪದಾರ್ಥಗಳು ಕೃಷಿ ಹಂತದಲ್ಲಿಯೇ ಮಾರಕ ಕಲಬೆರಕೆಗೆ ತುತ್ತಾಗುತ್ತಿದೆ. ಇದಕ್ಕೆ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಮತ್ತು ಕ್ರಿಮಿನಾಶಕಗಳ ಬಳಕೆ ಹೇತುವಾಗಿದೆ.

ಇನ್ನು ಅಲ್ಲಿಂದ ಮುಂದಕ್ಕೆ ಮಾರುಕಟ್ಟೆಗೆ ಬರುವ ವೇಳೆಗೆ ಗೋದಾಮುಗಳಲ್ಲಿ ಶೇಖರಣೆ, ಅಲ್ಲಿಂದ ಮಾರಾಟ ಕೇಂದ್ರಗಳನ್ನು ತಲುಪುವ ವೇಳೆಗೆ ಮಸಾಲೆ ಪದಾರ್ಥಗಳು ಮತ್ತಷ್ಟು ಕಲಬೆರಕೆಗೆ ಈಡಾಗಿರುತ್ತದೆ. ಆದರೆ ಈ ಹಂತಗಳಲ್ಲಿ ಕಲಬೆರಕೆಯಾಗುವುದನ್ನು ತಪ್ಪಿಸುವುದಕ್ಕೆ ಯಾವುದೇ ನಿಯಂತ್ರಣ ಕ್ರಮಗಳು ಇಲ್ಲ. ರೈತರಲ್ಲಾಗಲಿ ಅಥವಾ ಮಾರಾಟಗಾರರಲ್ಲಾಗಲಿ ಪದಾರ್ಥಗಳ ಶುದ್ಧತೆ ಕಾಪಾಡುವ, ಅದರ ಗುಣಮಟ್ಟವನ್ನು ಪೋಷಿಸುವ ಮನೋಇಚ್ಛೆ ಇಲ್ಲವಾಗಿದೆ.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:40 pm, Mon, 14 October 24